ಹುಬ್ಬಳ್ಳಿ-ಧಾರವಾಡ ಸುದ್ದಿ
ಪಕ್ಷೇತರರಾಗಲು ಹಲವರ ಸಿದ್ಧತೆ

ಪಕ್ಷೇತರರಾಗಲು ಹಲವರ ಸಿದ್ಧತೆ

ಧಾರವಾಡ: ಮಹಾನಗರ ಪಾಲಿಕೆಯ ಪ್ರವೇಶದ ಕನಸು ಕಾಣುತ್ತಿರುವ ಆಕಾಂಕ್ಷಿಗಳು ತಮಗೆ ಟಿಕೆಟ್ ತಪ್ಪಲಿದೆ ಎಂಬ ಕಾರಣದಿಂದ ಪಕ್ಷೇತರರಾಗಿ ಕಣಕ್ಕಿಳಿಯುವ ಸಲುವಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ನಾಲ್ಕೈದು ವಾರ್ಡ್‌ಗಳಲ್ಲಿನ ಪೈಪೋಟಿ ಹೊರತುಪಡಿಸಿ ಬಹುತೇಕ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಬಯಸುವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಕಾಂಗ್ರೆಸ್ ಮುಖಂಡರಿಗೆ ಟಿಕೆಟ್ ಹಂಚಿಕೆಯ ತಲೆನೋವು ಕಡಿಮೆ ಇದೆ. ಆದರೆ, ನಾಲ್ಕೈದು ವಾರ್ಡ್‌ಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳವಾಗಿರುವುದು ನಾಯಕರಿಗೆ ಸಮಸ್ಯೆ ತಂದಿಡಲಿದೆ. ಅಲ್ಲದೇ ಸ್ವಪಕ್ಷೀಯರಿಂದಲೇ ಬಂಡಾಯ ಎದುರಿಸಬೇಕಾದ ಅನಿವಾರ್ಯತೆ ಅಧಿಕೃತ ಅಭ್ಯರ್ಥಿಗಳದ್ದಾಗಲಿದೆ.
ಇನ್ನು ಜೆಡಿಎಸ್‌ನಿಂದ ಸ್ಪರ್ಧಿಸಬಯಸುತ್ತಿರುವವ ಪ್ರಮಾಣ ಕಡಿಮೆಯಿದ್ದು, ಗೆಲ್ಲುವ ಅಭ್ಯರ್ಥಿಗಳ ಅಭ್ಯರ್ಥಿಗಳಿಗಾಗಿ ನಾಯಕರು ಹುಡುಕಾಟ ನಡೆಸಿದ್ದಾರೆ. ಇತ್ತ ಆಮ್ ಆದ್ಮಿ ಪಾರ್ಟಿ ಕೂಡ ಗೆಲ್ಲುವ ವ್ಯಕ್ತಿತ್ವದರ ಶೋಧನೆ ನಡೆಸಿದೆ.
ಆದರೆ, ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯಿಂದ ಸ್ಪರ್ಧಿಸಲು ಮೀಸಲು ವಾರ್ಡ್‌ಗಳನ್ನು ಹೊರತುಪಡಿಸಿ ಬಹುತೇಕ ವಾರ್ಡ್‌ಗಳಲ್ಲಿ ಮೂರಕ್ಕಿಂತ ಹೆಚ್ಚು ಜನರು ಟಿಕೆಟ್ ಕೇಳುತ್ತ್ತಿರುವುದು ಪಕ್ಷದ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಧಾರವಾಡ-೭೧ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ೯ ವಾರ್ಡ್‌ಗಳಿಗೆ ಅಭ್ಯರ್ಥಿಗಳ ಆಯ್ಕೆ ಶಾಸಕ ಅಮೃತ ದೇಸಾಯಿ ಅವರಿಗೆ ತಲೆ ಬಿಸಿ ತಂದಿದೆ. ಇನ್ನೊಂದೆಡೆ ಮಹಾನಗರ ಜಿಲ್ಲೆಯ ಬಿಜೆಪಿ ಅಧ್ಯಕ್ಷರೂ ಆಗಿರುವ ಶಾಸಕ ಅರವಿಂದ ಬೆಲ್ಲದ ಅವರು ಅಭ್ಯರ್ಥಿಗಳ ಆಯ್ಕೆಗೆ ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ. ಆದಾಗ್ಯೂ ಸೂಕ್ತ ಆಕಾಂಕ್ಷಿಗಳೂ ಹೆಚ್ಚಿರುವ ವಾರ್ಡ್‌ನಲ್ಲಿ ಟಿಕೆಟ್ ಯಾರಿಗೆ ಕೊಡಬೇಕು ಎಂಬುದು ಸಮಸ್ಯೆ ತಂದೊಡ್ಡಲಿದೆ. ಈ ಬಗ್ಗೆ ವಿವಿಧ ಆಯಾಮಗಳಲ್ಲಿ ಪರಿಶೀಲಿಸಿ ಟಿಕೆಟ್ ಕೊಡುವ ಇರಾದೆ ಪಕ್ಷದ ಮುಖಂಡರದ್ದಾಗಿದೆ.
ಈ ಮಧ್ಯೆ ಪಕ್ಷದ ಮುಖಂಡರ ಮನೆಗೆ ಆಕಾಂಕ್ಷಿಗಳು ಅಲೆದಾಡುತ್ತಿದ್ದು, ತಮಗೆ ಟಿಕೆಟ್ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಒಂದೊಮ್ಮೆ ತಮಗೆ ಟಿಕೆಟ್ ಸಿಗದಿದ್ದರೆ ಗತಿ ಏನು ಎಂದು ಕೆಲವರು ಚಿಂತೆ ಮಾಡುತ್ತಿದ್ದರೆ, ಬಹುತೇಕರು ಬಂಡಾಯದ ಬಾವುಟ ಹಾರಿಸುವ ಸಲುವಾಗಿ ಸಜ್ಜಾಗುತ್ತಿದ್ದಾರೆ.
’ಪಕ್ಷದಲ್ಲಿ ಹಲವು ವರ್ಷಗಳಿಂದ ಪ್ರಾಮಾಣಿಕವಾಗಿ ದುಡಿಯುತ್ತ ಬಂದಿದ್ದೇವೆ. ಆದರೆ, ಕೆಲವರ ಚಿತಾವನೆಯಿಂದ ತಮಗೆ ಟಿಕೆಟ್ ಸಿಗುವ ಸಾಧ್ಯತೆ ಕ್ಷೀಣವಾಗಿದೆ. ಹೀಗಾಗಿ ಪಕ್ಷೇತರನಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದೆನೆ’ ಎನ್ನುತ್ತಿದ್ದಾರೆ ನಿಷ್ಠಾವಂತರು.
ಇದರಿಂದ ಬಂಡಾಯಗಾರರ ಸಂಖ್ಯೆ ಕಾಂಗ್ರೆಸ್‌ಗಿಂತಲೂ ಹೆಚ್ಚು ಬಿಜೆಪಿಯಲ್ಲಿದ್ದು, ಮುಖಂಡರು ಈ ಅಸಮಾಧಾನವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಆ.೨೩ ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಕಾಂಕ್ಷಿಗಳು ತಮ್ಮ ಟಿಕೆಟ್ ಖಾತ್ರಿ ಪಡಿಸಿಕೊಳ್ಳುವತ್ತ ಗಮನಹರಿಸಿದ್ದಾರೆ.

 

administrator

Related Articles

Leave a Reply

Your email address will not be published. Required fields are marked *