ಹುಬ್ಬಳ್ಳಿ-ಧಾರವಾಡ ಸುದ್ದಿ

ಪಾಲಿಕೆ ಚುನಾವಣೆ-2021: ಮಾದರಿ ನೀತಿ ಸಂಹಿತೆ ಉಲ್ಲಂಘನೆ ನಾಲ್ವರ ವಿರುದ್ಧ ದೂರು; 9 ಜನರಿಗೆ ನೋಟಿಸ್ 

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ, ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ವಿವಿಧ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳ ವಿರುದ್ಧ ಐಪಿಸಿ ಸೆಕ್ಷನ್ 188 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾದರಿ ನೀತಿ ಸಂಹಿತೆಯ ಜಿಲ್ಲಾ ನೋಡಲ್ ಅಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ ಬಿ. ತಿಳಿಸಿದರು.

ಅವರು ಇಂದು ಮಧ್ಯಾಹ್ನ ಬಾಸೆಲ್ ಮಿಷನ್ ಶಾಲಾ ಕಟ್ಟಡದಲ್ಲಿ ಸ್ಥಾಪಿಸಿರುವ ಮಸ್ಟರಿಂಗ್ ಕೇಂದ್ರದಲ್ಲಿ ಜರುಗಿದ ಜಿಲ್ಲಾಧಿಕಾರಿಗಳ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದರು.

ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆಯ ಅಧಿಸೂಚನೆ ಪ್ರಕಟಣೆಯ ನಂತರ ವಿವಿಧ ಅಭ್ಯರ್ಥಿಗಳು ರಾಜ್ಯ ಚುನಾವಣಾ ಆಯೋಗವು ನೀಡಿರುವ ಸದಾಚಾರ ಸಂಹಿತೆಯನ್ನು ಮತ್ತು ಪ್ರಚಾರ ಸಂದರ್ಭದಲ್ಲಿ ಅನುಸರಿಸಬೇಕಾದ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಈ ಕುರಿತು 9 ಅಭ್ಯರ್ಥಿಗಳಿಗೆ ಸ್ಪಷ್ಠೀಕರಣ ಕೇಳಿ ನೋಟಿಸ್ ನೀಡಲಾಗಿದೆ ಮತ್ತು 4 ಅಭ್ಯರ್ಥಿಗಳ ವಿರುದ್ಧ ಆಯಾ ವಾರ್ಡ್‍ಗಳಿಗೆ ನೇಮಿಸಲಾದ ಎಂಸಿಸಿ ಮುಖ್ಯಸ್ಥರಿಂದ ದೂರು ದಾಖಲಿಸಲಾಗಿದೆ ಎಂದು  ಹೇಳಿದರು.

58ನೇ ವಾರ್ಡ್‍ನ ಕಾಂಗ್ರೇಸ್ ಅಭ್ಯರ್ಥಿ ಶೃತಿ ಚಲವಾದಿ, 59ನೇ ವಾರ್ಡ್ ಕಾಂಗ್ರೇಸ್ ಅಭ್ಯರ್ಥಿ ಸುವರ್ಣ ಕಲ್ಲಕುಂಟಲಾ ಮತ್ತು 82ನೇ ವಾರ್ಡ್‍ನ ಪಕ್ಷೇತರ ಅಭ್ಯರ್ಥಿ ಅಕ್ಷತಾ ಮೋಹನ ಅಸುಂಡಿ ಹಾಗೂ 82ನೇ ವಾರ್ಡ್‍ನ ಬಿಜೆಪಿ ಅಭ್ಯರ್ಥಿ ಶಾಂತಾ ಹೊನ್ನಪ್ಪ ಕೋಗೋಡು ಸೇರಿದಂತೆ ಈ 4 ಅಭ್ಯರ್ಥಿಗಳು 5ಕ್ಕಿಂತ ಹೆಚ್ಚು ಜನರೊಂದಿಗೆ ಪ್ರಚಾರ ಕಾರ್ಯದಲ್ಲಿ ತೊಡಗಿರುವುದನ್ನು ಎಂಸಿಸಿ ಮುಖ್ಯಸ್ಥರು ವಿಡಿಯೋ ಹಾಗೂ ಫೋಟೋ ಸಹಿತ ದಾಖಲಿಸಿ, ಇವರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಅವರು ಹೇಳಿದರು.

1ನೇ ವಾರ್ಡ್‍ನ ಪಕ್ಷೇತರ ಅಭ್ಯರ್ಥಿ ಜಯಶ್ರೀ ಪವಾರ, 9ನೇ ವಾರ್ಡ್‍ನ ಪಕ್ಷೇತರ ಅಭ್ಯರ್ಥಿ ಆರತಿ ಮಹೇಶ್ ಬೆಳಗಾಂವಕರ, 11ನೇ ವಾರ್ಡ್‍ನ ಜೆಡಿಎಸ್ ಅಭ್ಯರ್ಥಿ ಸಂಜೀವ್ ಹಿರೇಮಠ, 13ನೇ ವಾರ್ಡ್‍ನ ಜೆಡಿಎಸ್ ಅಭ್ಯರ್ಥಿ ರಾಜು ಅಂಬೋರೆ, 73ನೇ ವಾರ್ಡ್‍ನ ಕಾಂಗ್ರೇಸ್ ಅಭ್ಯರ್ಥಿ ಶೋಭಾ ದಶರಥ ವಾಲಿ, 81ನೇ ವಾರ್ಡ್‍ನ ಬಿಜೆಪಿ ಅಭ್ಯರ್ಥಿ ಸಾರಿಕಾ ಮಂಜುನಾಥ ಬಿಜುವಾಡ ಮತ್ತು 81ನೇ ವಾರ್ಡ್‍ನ ಕಾಂಗ್ರೇಶ್ ಅಭ್ಯರ್ಥಿ ಮಂಜುಳಾ ಶ್ಯಾಮ್ ಜಾಧವ ಸೇರಿದಂತೆ 7 ಅಭ್ಯರ್ಥಿಗಳು 5ಕ್ಕಿಂತ ಹೆಚ್ಚು ಜನರೊಂದಿಗೆ ಪ್ರಚಾರದಲ್ಲಿ ತೊಡಗಿಕೊಂಡಿರುವುದಕ್ಕೆ ನೋಟಿಸ್ ನೀಡಲಾಗಿದೆ. ಮತ್ತು ವಾರ್ಡ್ ನಂ 10 ರ ಜೆಡಿಎಸ್ ಅಭ್ಯರ್ಥಿ ಲತಾ ಮಂಜುನಾಥ ಆರೇರ ಅವರು ಕಲ್ಮೇಶ್ ದೇವಸ್ಥಾನದಲ್ಲಿ ಪಕ್ಷದ ಚಿಹ್ನೆ ಇರುವ ಶಾಲು ಧರಿಸಿರುವುದು, ಕರಪತ್ರಗಳನ್ನು ದೇವಸ್ಥಾನದ ಒಳಗೆ ತೆಗೆದುಕೊಂಡು ಹೋಗಿರುವುದು ಮತ್ತು 5 ಕ್ಕಿಂತ ಹೆಚ್ಚು ಜನರೊಂದಿಗೆ ಪ್ರಚಾರದಲ್ಲಿ ತೊಡಗಿಕೊಂಡಿರುವುದಕ್ಕೆ ಹಾಗೂ 73ನೇ ವಾರ್ಡ್‍ನ ಬಿಜೆಪಿ ಅಭ್ಯರ್ಥಿ ಶೀಲಾ ಮಂಜುನಾಥ ಕಾಟಕರ ಅವರು ಮೆರವಣಿಗೆ ಹಾಗೂ 5 ಕ್ಕಿಂತ ಹೆಚ್ಚು ಜನರೊಂದಿಗೆ ಪ್ರಚಾರದಲ್ಲಿ ತೊಡಗಿರುವುದಕ್ಕೆ ನೋಟಿಸ್ ನೀಡಲಾಗಿದೆ ಎಂದು ಮಾದರಿ ನೀತಿ ಸಂಹಿತೆಯ ಜಿಲ್ಲಾ ನೋಡಲ್ ಅಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ ಬಿ. ಅವರು ಹೇಳಿದರು.

administrator

Related Articles

Leave a Reply

Your email address will not be published. Required fields are marked *