ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿಗೆ ಹಾಗೂ ಈ ಭಾಗದ ಜೀವದಾಯಿನಿ ಮಹದಾಯಿ ಯೋಜನೆಗೆ ಮೊದಲ ಪ್ರಾಶಸ್ತö್ಯ ನೀಡುವುದಾಗಿ ಕರುನಾಡ ನೂತನ ಸಾರಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಉತ್ತರ ಕನ್ನಡದ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಲು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ತವರಿಗೆ ಆಗಮಿಸಿದ ಅವರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಹಿರಿಯರಾದ ಜಗದೀಶ್ ಶೆಟ್ಟರ್ ಸಹಿತ ಇನ್ನೂ ಹಲವು ಶಾಸಕರು ಕೂಡ ಇದ್ದಾರೆ. ಎಲ್ಲರ ಜತೆ ಚರ್ಚಿಸಿ ಕೈಗಾರಿಕೆ ಜತೆ ವಿವಿಧ ಅಭಿವೃದ್ದಿ ಯೋಜನೆಗಳನ್ನು ತರಲು ಆದ್ಯತೆ ನೀಡುವುದಾಗಿ ಹೇಳಿದರು.
ಮಹದಾಯಿ ಯೋಜನೆ ಬಗ್ಗೆ ನನಗೆ ಬಹಳ ಸ್ಪಷ್ಟತೆ ಇದೆ. ಗೆಜೆಟ್ ನೋಟಿಫಿಕೇಷನ್ ಸಿಕ್ಕ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಹೇಳಿದರು.
ವಿಮಾನ ನಿಲ್ದಾಣದಲ್ಲಿ ಮಾಜಿ ಸಚಿವ ಶಿವರಾಮ ಹೆಬ್ಬಾರ, ಶಾಸಕ ಅಮೃತ ದೇಸಾಯಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ರಾಜಣ್ಣ ಕೊರವಿ, ತವನಪ್ಪ ಅಷ್ಟಗಿ, ಶಂಕರ ಮುಗದ, ಶಿವಾನಂದ ಮುತ್ತಣ್ಣವರ ಸೇರಿದಂತೆ ಅನೇಕರಿದ್ದರು.
ನಾಳೆ ದೆಹಲಿಗೆ- ಶೀಘ್ರ ಸಂಪುಟ
ನಾಳೆ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ,ಅಮಿತ್ ಶಹಾ, ನಡ್ಡಾ ಹಾಗೂ ಇತರ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಅವರ ಶುಭ ಹಾರೈಕೆ, ಸಹಕಾರವನ್ನು ಸಿಎಂ ಆಗಿ ಆಡಳಿತ ನಡೆಸಲು ಕೇಳಿಕೊಳ್ಳುತ್ತೇನೆ. ನಂತರದ ಭೇಟಿಯಲ್ಲಿ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸಲಿದ್ದು, ತದನಂತರ ಸಂಪುಟ ರಚನೆ ಮಾಡುವುದಾಗಿ ಹೇಳಿದರು.
ಶೆಟ್ಟರ್ ಮನವೊಲಿಸುವೆ
ಶೆಟ್ಟರ್ ಮಂತ್ರಿಗಿರಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ನಿನ್ನೆಯೇ ಅವರ ಜತೆ ದೂರವಾಣಿ ಮೂಲಕ ಮಾತಾಡಿದ್ದೇನೆ. ಶೆಟ್ಟರ್ ವೈಯಕ್ತಿವಾಗಿ ಬಂದು ಚರ್ಚಿಸುವುದಾಗಿ ಹೇಳಿದ್ದಾರೆ. ಶೆಟ್ಟರ್ ಅವರು ನನಗೆ ಆತ್ಮೀಯರು, ಬೇರೆ ಬೇರೆ ಪಕ್ಷದಲ್ಲಿದ್ದಾಗಿನಿಂದಲೂ ನಾವು ಸ್ನೇಹಿತರಾಗಿದ್ದೆವು. ಅವರ ಬಳಿ ಚರ್ಚಿಸಿ ಅವರ ಸಮಸ್ಯೆ ಬಗ್ಗೆ ತಿಳಿದುಕೊಳ್ಳುತ್ತೇನೆ.ಬಳಿಕ ವರಿಷ್ಠರ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಬೊಮ್ಮಾಯಿ ಹೇಳಿದರು.
ಸಿಎಂ ಆಗಿ ಬರುವೆ ಅಂದುಕೊ0ಡಿರಲಿಲ್ಲ
ಹುಬ್ಬಳ್ಳಿ: ರಾಜ್ಯದ ಮುಖ್ಯಮಂತ್ರಿಯಾಗಿ ಹುಬ್ಬಳ್ಳಿಗೆ ಬರುತ್ತೇನೆ ಅಂದು ಕೊಂಡಿರಲಿಲ್ಲ, ಹುಬ್ಬಳ್ಳಿ ನನ್ನ ಇಷ್ಟದ ಊರು, ನಾನು ಹುಬ್ಬಳ್ಳಿಯಲ್ಲಿಯೇ ಹುಟ್ಟಿ ಇಲ್ಲಿಯೇ ವಿದ್ಯಾಬ್ಯಾಸ ಮಾಡಿ ಬೆಳೆದವನು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯಲ್ಲಿ ನನಗೆ ದೊಡ್ಡ ಸ್ನೇಹಿತರ ಬಳಗವೇ ಇದೆ,ಆತ್ಮೀಯರಿದ್ದಾರೆ ಎಂದು ಎಂದು ನೆನಪು ಮೆಲುಕು ಹಾಕಿದರು.
ಕೇಂದ್ರ ನಾಯಕರಾದ ಪ್ರಧಾನಿ ಮೋದಿ, ಅಮಿತ್ ಶಾ, ಜೆ ಪಿ ನಡ್ಡಾ ಅವರ ನಿರ್ಣಯಗಳಿಂದಾಗಿ ಇಂದು ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ ಎಂದರು. ಕೇಂದ್ರ ನಾಯಕರು ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ ಎಂದರು.
ತಮ್ಮ ತಂದೆ ತಾಯಿ ಸಮಾಧಿಯ ನಂತರ ನಂತರ ರಾಣಿ ಚೆನ್ನಮ್ಮ ವೃತ್ತಕ್ಕೆ ಆಗಮಿಸಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ.