ಹುಬ್ಬಳ್ಳಿ: ಹಲವು ಬಾರಿಯ ಸರಣಿ ಸಭೆಗಳ ಬಳಿಕ ಕಾಂಗ್ರೆಸ್ ಶನಿವಾರ ರಾತ್ರಿ ೭೮ ವಾರ್ಡ್ಗಳಿಗೆ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಆದರೆ, ೧೧ನೇ ವಾರ್ಡ್ ಗೆ ಇಂದು ರವಿವಾರ ಪ್ರಕಟಿಸುವುದಾಗಿ ತಿಳಿಸಿದ್ದು, ೩೬, ೩೭ ಹಾಗೂ ೩೮ನೇ ವಾರ್ಡ್ ನ ಅಭ್ಯರ್ಥಿಗಳ ಹೆಸರುಗಳನ್ನು ಗೌಪ್ಯವಾಗಿ ಇಡಲಾಗಿದೆ.
ಆಕಾಂಕ್ಷಿಗಳಿ0ದ ಮನವಿ ಆಲಿಸಲು ಆರಂಭದಲ್ಲಿ ಹುಬ್ಬಳ್ಳಿಯ ಹೋಟೆಲ್ ಗಳಲ್ಲಿ ಸರಣಿ ಸಭೆಗಳು ನಡೆದಿದ್ದವು. ಇಲ್ಲಿ ಆಕಾಂಕ್ಷಿಗಳ ಒತ್ತಡ ಹೆಚ್ಚಾಗಿದ್ದ ರಿಂದ ಟಿಕೆಟ್ ಆಯ್ಕೆ ಪ್ರಕ್ರಿಯೆಯನ್ನು ಬೆಳಗಾವಿಗೆ ಸ್ಥಳಾಂತರ ಮಾಡ ಲಾಗಿತ್ತು. ಅಲ್ಲಿ ಬಹುತೇಕ ಆಕಾಂಕ್ಷಿಗಳನ್ನು ಅಂತಿಮಗೊಳಿಸಲಾಗಿತ್ತು.
ಕೆಲ ವಾರ್ಡ್ ಗಳಿಗಷ್ಟೇ ಉಳಿದಿದ್ದ ಆಯ್ಕೆಯನ್ನು ಶನಿವಾರ ಹಳಿಯಾಳದಲ್ಲಿ ಮಾಡಲಾಯಿತು. ಮಹಾನಗರ ಪಾಲಿಕೆ ಚುನಾವಣೆ ಉಸ್ತುವಾರಿ ಸಮಿತಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹಾಗೂ ಸಂಚಾಲಕ ಆರ್. ಧ್ರುವ ನಾರಾಯಣ ಅವರು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದ ಕೆಲ ವಾರ್ಡ್ ಗಳ ಹೆಸರುಗಳನ್ನು ಕೆಪಿಸಿಸಿಯ ಹಿರಿಯ ನಾಯಕರೊಂದಿಗೆ ಚರ್ಚಿಸಿ ಅಂತಿಮಗೊಳಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಹಳಿಯಾಳದಲ್ಲಿ ನಡೆದ ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಶಾಸಕ ಪ್ರಸಾದ ಅಬ್ಬಯ್ಯ, ಪಕ್ಷದ ಮಹಾನಗರ ಜಿಲ್ಲಾ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಸದಾನಂದ ಡಂಗನವರ ಸೇರಿದಂತೆ ಕೆಲ ಪ್ರಮುಖರಷ್ಟೇ ಪಾಲ್ಗೊಂಡಿದ್ದರು.