ಹುಬ್ಬಳ್ಳಿ: ಸಿ.ಎಂ. ಉದಾಸಿ ಅವರಿಂದ ತೆರವಾಗಿರುವ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ಸುಮಾರು 20 ಆಕಾಂಕ್ಷಿಗಳು ಇದ್ದಾರೆನ್ನಲಾಗಿದೆ.
ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ತಂಡ ಈಗಾಗಲೇ ಆಕಾಂಕ್ಷಿಗಳ ಅರ್ಜಿ ಸ್ವೀಕರಿಸಿದೆಯಲ್ಲದೇ ಸ್ಥಳೀಯರ ಅಭಿಪ್ರಾಯವನ್ನು ಸಂಗ್ರಹಿಸಿ ಕಳುಹಿಸಿದೆ.
ಉದಾಸಿ ಕುಟುಂಬಕ್ಕೆ ನೀಡಬಾರದೆನ್ನುವ ಅಭಿಪ್ರಾಯ ಅನೇಕರದ್ದಾಗಿದ್ದು,ಶಿವಕುಮಾರ ಉದಾಸಿಯವರ ಪತ್ನಿ ರೇವತಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಉದಾಸಿ ಕುಟುಂಬ ಈವರೆಗೆ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಪರಿಗಣಿಸಿ ಅವರ ಕುಟುಂಬಕ್ಕೆ ಟಿಕೆಟ್ ನೀಡಬೇಕು ಎಂಬ ಒತ್ತಡ ಕೇಳಿಬರುತ್ತಿದೆ.
ಕಲ್ಯಾಣ ಕುಮಾರ ಶೆಟ್ಟರ್, ಮಾಜಿ ಸಂಸದ ಮಂಜುನಾಥ ಕುನ್ನೂರ, ರಾಜಶೇಖರ ಕಟ್ಟೆಗೌಡರ, ಸಿದ್ದರಾಜ ಕಲಕೋಟೆ, ಮಾಜಿ ಶಾಸಕ ಶಿವರಾಜ ಸಜ್ಜನ್, ಮಹಾಂತೇಶ ಸೊಪ್ಪಿನ, ಮುಂತಾದವರ ಸಹಿತ 20 ಜನ ಆಕಾಂಕ್ಷಿಗಳಾಗಿದ್ದು,
ಇನ್ನು ಸಿಂದಗಿ ಕ್ಷೇತ್ರದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಇದಲ್ಲದೆ ವಿಧಾನ ಪರಿಷತ್ ಸದಸ್ಯ ಅರುಣ ಶಹಪುರ ಸೇರಿದಂತೆ ಇತರೆ ಮೂರ್ನಾಲ್ಕು ಹೆಸರುಗಳೂ ಇವೆ.
ಅಭ್ಯರ್ಥಿಗಳ ಹೆಸರು ಸಂಜೆ ಫೈನಲ್
ಬೆಂಗಳೂರು: ಹಾವೇರಿ ಜಿಲ್ಲೆಯ ಹಾನಗಲ್ ಮತ್ತು ವಿಜಯಪುರ ಜಿಲ್ಲೆಯ ಸಿಂದಗಿ ಉಪಚುನಾವಣೆಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಬಿಜೆಪಿ ಕೋರ್ ಕಮಿಟಿ ಸಭೆ ಇಂದು ನಡೆಯಲಿದ್ದು, ಸಂಜೆ ವೇಳೆಗೆ ಅಭ್ಯರ್ಥಿಗಳು ಅಂತಿಮಗೊಳ್ಳಲಿದ್ದಾರೆ.
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆಯುವ ಸಭೆ ಯಲ್ಲಿ ಮೂರರಿಂದ ನಾಲ್ವರ ಹೆಸರುಗಳನ್ನು ಅಂತಿಮಗೊಳಿಸಿ ಪಟ್ಟಿಯನ್ನು ಕೇಂದ್ರ ನಾಯಕರಿಗೆ ಕಳುಹಿಸುವ ಸಾಧ್ಯತೆ ಇದೆ. ಪಕ್ಷದ ಕೇಂದ್ರ ಚುನಾವಣಾ ಸಮಿತಿ ಅಂತಿಮವಾಗಿ ಯಾರು ಅಭ್ಯರ್ಥಿಗಳು ಎಂದು ಬಿಜೆಪಿ ಕೇಂದ್ರ ನಾಯಕರೇ ಘೋಷಿಸಲಿದ್ದಾರೆ.