ಬೆಂಗಳೂರು: ಸಿಡಿ ಪ್ರಕರಣದಿಂದಾಗಿ ಸಚಿವ ಸ್ಥಾನವನ್ನ ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿ ಮರಳಿ ವರ್ಚಸ್ಸನ್ನು ಪಡೆಯಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದರಾದರೂ ಸಹೋದರರ ಸಲಹೆ ಮೇರೆಗೆ ಹೊಸ ತಂತ್ರಗಾರಿಕೆ ನಡೆಸಿದ್ದು ಜು.೧ರಂದು ತಮ್ಮ ರಾಜಕೀಯ ನಿರ್ಧಾರ ಬಹಿರಂಗಪಡಿಸುವ ಸಾಧ್ಯತೆಗಳಿದ್ದು ತನ್ಮಧ್ಯೆ ಇಂದು ದಿಢೀರ್ ಆಗಿ ದೆಹಲಿಗೆ ಹಾರಿರುವುದು ಕುತೂಹಲ ಕೆರಳಿಸಿದೆ.
ತಡರಾತ್ರಿಯೇ ಬೆಂಗಳೂರಿಗೆ ಬಂದಿರುವ ರಮೇಶ್ ಜಾರಕಿಹೊಳಿ ಇಂದು ಹಾಗೂ ನಾಳೆ ಬೆಂಗಳೂರಲ್ಲೇ ಇರಲಿದ್ದು, ಸಿಎಂ ಭೇಟಿಯಾಗಲಿದ್ದಾರೆ ಎನ್ನಲಾಗಿತ್ತು ಅಲ್ಲದೇ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಭೇಟಿಯಾಗಲು ನಿರ್ಧರಿಸಿದ್ದರಾದರೂ ಅವರ ಸಹೋದರನ ಅಗಲಿಕೆ ಹಿನ್ನೆಲೆ ಕೊನೆ ಕ್ಷಣದಲ್ಲಿ ಈ ಭೇಟಿ ರದ್ದಾಗಿತ್ತು.
ಬೆಂಗಳೂರಲ್ಲಿ ಆಪ್ತರು ಹಾಗೂ ಸ್ನೇಹಿತರನ್ನ ಭೇಟಿಯಾಗಲಿರೋ ರಮೇಶ್ ನಾಳೆ ರಾತ್ರಿಯೇ ಗೋಕಾಕ್‌ಗೆ ವಾಪಸ್ಸಾಗಲಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರೋ ರಮೇಶ್‌ರ ಮನವೊಲಿಸುವಲ್ಲಿ ಸಹೋದರ ಲಖನ್ ಹಾಗೂ ಬಾಲಚಂದ್ರ ಜಾರಕಿಹೊಳಿ ಯಶಸ್ವಿ ಯಾಗಿದ್ದಾರೆ ಎನ್ನಲಾಗಿದೆ.
ಜುಲೈ ೧ ನೇ ತಾರೀಖಿನಂದು ಗೋಕಾಕ್‌ನಲ್ಲಿ ವೈದ್ಯರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ರಮೇಶ್ ಹಾಗೂ ಬಾಲಚಂದ್ರ ಜಾರಕಿಹೊಳಿ ಜಂಟಿ ಸುದ್ದಿಗೋಷ್ಠಿ ನಡೆಸಲಿ ದ್ದಾರೆ ಎನ್ನಲಾಗಿದೆ. ಈ ಸುದ್ದಿಗೋಷ್ಠಿಯಲ್ಲಿ ರಮೇಶ್ ಜಾರಕಿಹೊಳಿ ತಮ್ಮ ರಾಜಕೀಯ ಜೀವನದ ಬಗ್ಗೆ ಮಹತ್ವದ ನಿರ್ಣಯ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.