ಹುಬ್ಬಳ್ಳಿ-ಧಾರವಾಡ ಸುದ್ದಿ
ಪಾಲಿಕೆ ಚುನಾವಣೆಗೆ ದಿನಗಣನೆ; ರಾಜಕೀಯ ಪಕ್ಷಗಳಿಂದ ಕರಡು ಪಟ್ಟಿ ಪರಿಶೀಲನೆ

ಪಾಲಿಕೆ ಚುನಾವಣೆಗೆ ದಿನಗಣನೆ; ರಾಜಕೀಯ ಪಕ್ಷಗಳಿಂದ ಕರಡು ಪಟ್ಟಿ ಪರಿಶೀಲನೆ

ಪೊಲೀಸರಿಂದಲೂ ಬೀಟ್‌ವಾರು ಮಾಹಿತಿ ಸಂಗ್ರಹ
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಕರಡು ಪಟ್ಟಿ ಮಧ್ಯರಾತ್ರಿ ವೇಳೆ ವಿವಿಧ ರಾಜಕೀಯ ಪಕ್ಷಗಳ ಅಧ್ಯಕ್ಷರ ತಲುಪಿದೆ.
’ಸಂಜೆ ದರ್ಪಣ’ದೊಂದಿಗೆ ಮಾತನಾಡಿದ ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಕಳೆದ ರಾತ್ರಿ ೧೨ ಗಂಟೆಗೆ ಕೆಲ ನಿಮಿಷ ಇರುವಾಗ ಕರಡು ಪಟ್ಟಿ ತಲುಪಿದೆ. ಆಕ್ಷೇಪಣೆಗೆ ಜುಲೈ ೧ ಕೊನೆ ದಿನವಾಗಿದ್ದು ಮೂರು ದಿನ ಅತ್ಯಂತ ಕಡಿಮೆ ಆಗಿದೆ. ಅಲ್ಲದೇ ಹೊಸ ಸೇರ್ಪಡೆಗೆ ಅವಕಾಶ ನೀಡದಿರುವುದು ನಿಜಕ್ಕೂ ದುರದೃಷ್ಟಕರ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಪಾಲಿಕೆ ಆಯುಕ್ತರಿಗೆ ಆಕ್ಷೇಪಣೆಗೆ ಅವಕಾಶ ನೀಡಿ ಎಂದೂ ಅಲ್ಲದೇ ಹೊಸದಾಗಿ ಸೇರ್ಪಡೆಗೆ ಅವಕಾಶ ನೀಡಬೇಕೆಂದು ಮನವಿ ಮಾಡುವುದಾಗಿ ಹೇಳಿದರು.
ಮತದಾರರ ಪಟ್ಟಿ ಪರಿಶೀಲನೆ ನಡೆಸಿದ್ದು, ಅಲ್ಲಲ್ಲಿ ಮತಗಟ್ಟೆಗಳ ಗೊಂದಲವಿದೆ ಎಂದು ಹಳ್ಳೂರ ಹೇಳಿದರು.
ಬಿಎಸ್‌ಪಿಯ ಪ್ರೇಮನಾಥ ಚಿಕ್ಕತುಂಬಳ ಸಹ ತಮಗೆ ನಿನ್ನೆ ರಾತ್ರಿ ೧೧ ರ ಸುಮಾರಿಗೆ ೮೨ ವಾರ್ಡಗಳ ೮೧೭ ಪಾರ್ಟಗಳ ಮತದಾರರ ಪಟ್ಟಿ ತಲುಪಿದ್ದು ಇನ್ನೂ ಕೆಲ ಗೊಂದಲಗಳು ಇವೆ ಎಂದು ಹೇಳಿದರು.
ಪ್ರತಿ ವಾರ್ಡನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಕನಿಷ್ಟ ಅರ್ಧ ಡಜನ್ ಆಕಾಂಕ್ಷಿಗಳಿದ್ದು, ಅವರೆಲ್ಲರೂ ಮೊದಲು ಕರಡು ಪಟ್ಟಿಯಲ್ಲಿ ತಮ್ಮ ಹೆಸರಿದೆಯೊ ಇಲ್ಲವೋ ಎಂಬುದನ್ನು ಪರಿಶೀಲಿಸುವತ್ತ ಮುಂದಾಗಿದ್ದಾರೆ.
ತಾಂತ್ರಿಕ ತೊಂದರೆಯಿಂದಾಗಿ ಮತದಾರರ ಕರಡು ಪಟ್ಟಿ ತಲುಪಿಸುವಲ್ಲಿ ಸ್ಪಲ್ವ ವಿಳಂಬವಾದರೂ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ತಲುಪಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಹೇಳಿದರು.
ಆಯೋಗದ ನಿರ್ದೇಶನದಂತೆ ದಿ.೯ರಂದು ಮತದಾರರ ಪಟ್ಟಿ ಪ್ರಕಟವಾದ ನಂತರ ದಿನಾಂಕ ಪ್ರಕಟವಾಗಲಿದ್ದು ಜುಲೈ ತಿಂಗಳಾಂತ್ಯದೊಳಗೆ ಅಥವಾ ಆಗಸ್ಟನಲ್ಲಿ ಚುನಾವಣೆ ನಿಶ್ಚಿತ ಎನ್ನಲಾಗುತ್ತಿದ್ದು ಜುಲೈ ೧೦ ಅಥವಾ ೧೧ರಂದು ಘೋಷಣೆ ಎನ್ನುವ ಮಾತು ದಟ್ಟವಾಗಿದೆ.
ಅಲ್ಲದೇ ಈಗಾಗಲೇ ಮಹಾನಗರ ಪೊಲೀಸ್ ಕಮೀಶನರೇಟ್ ದಿಂದಲೂ ಮುಂಬರುವ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಆಯಾ ಬೀಟಿನ ಭಾಷಾವಾರು, ಜಾತಿವಾರು ಮತ್ತು ಜನಪ್ರತಿನಿಧಿಗಳ ಮಾಹಿತಿ ಅಲ್ಲದೇ ಸೂಕ್ಷ್ಮ,ಅತಿಸೂಕ್ಷ್ಮ ಪ್ರದೇಶಗಳ ಬಗ್ಗೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ದಿ.೩೧ರೊಳಗೆ ಸಲ್ಲಿಸಲು ಸೂಚನೆ ನೀಡಿರುವುದನ್ನು ನೋಡಿದಾಗ ಪಾಲಿಕೆ ಚುನಾವಣೆ ಶೀಘ್ರ ಖಚಿತ ಎನ್ನುವ ಮುನ್ಸೂಚನೆ ನೀಡಿದೆ.
ಇನ್ನೂ ಕೆಲವರು ಆಯೋಗ ಮತದಾರರ ಪಟ್ಟಿ ಸಿದ್ದತೆ ಮಾಡಿಕೊಂಡು ಸುಪ್ರೀಂ ಕೋರ್ಟ ಕದ ತಟ್ಟಲಿದ್ದು, ಮೂರನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಚುನಾವಣೆ ನಡೆಸಬೇಕೋ ಬೇಡವೋ ಎಂಬ ಅಭಿಪ್ರಾಯ ಕೇಳಲಿದ್ದಾರೆ ಎನ್ನಲಾಗುತ್ತಿದೆ.

ಕರಡು ಪಟ್ಟಿ ಮಧ್ಯರಾತ್ರಿ ಹೊತ್ತಿಗೆ ತಲುಪಿದೆ.ಆಕ್ಷೇಪಣೆಗೆ ಮೂರು ದಿನ ತೀರಾ ಕಡಿಮೆಯಾಗುತ್ತದೆ. ಅಲ್ಲಲ್ಲಿ ಮತಗಟ್ಟೆಗಳ ಗೊಂದಲವಿದೆ.
ಅಲ್ತಾಫ್ ಹಳ್ಳೂರ, ಮಹಾನಗರ ಕಾಂಗ್ರೆಸ್ ಅಧ್ಯಕ್ಷ

 

ಮತದಾರರ ಕರಡು ಪಟ್ಟಿಯಲ್ಲಿ ಇನ್ನೂ ಸಾಕಷ್ಟು ಗೊಂದಲಗಳಿವೆ.
ಪ್ರೇಮನಾಥ ಚಿಕ್ಕತುಂಬಳ ಬಿಎಸ್‌ಪಿ ಜಿಲ್ಲಾಧ್ಯಕ್ಷ

 

administrator

Related Articles

Leave a Reply

Your email address will not be published. Required fields are marked *