ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಚುನಾವಣೆ ಹೊಸ್ತಿಲಲ್ಲಿರುವ ಹಿನ್ನೆಲೆಯಲ್ಲಿ ಅವಳಿನಗರ ಜೆಡಿಎಸ್ ಅಧ್ಯಕ್ಷರ ಆಯ್ಕೆ ಇಷ್ಟರಲ್ಲೇ ಆಗಲಿದೆ ಎನ್ನಲಾಗುತ್ತಿದೆ.
ರಾಜಣ್ಣ ಕೊರವಿ ತೆನೆ ಇಳಿಸಿದ ನಂತರ ತೆರವಾದ ಸ್ಥಾನಕ್ಕೆ ಇದುವರೆಗೆ ಯಾರೂ ನೇಮಕಗೊಂಡಿಲ್ಲವಾಗಿದ್ದು ಅಂತಿಮವಾಗಿ ಕ್ರೀಯಾಶೀಲ ಯುವ ಮುಖಂಡ ಗಜಾನನ ಅಣವೇಕರ ಮತ್ತು ಹಿರಿಯ ಮುಖಂಡ ಗುರುರಾಜ ಹುಣಸೀಮರದ ಇಬ್ಬರಲ್ಲೊಬ್ಬರು ನೇಮಕಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ದೇವೆಗೌಡರ ನಿಕಟವರ್ತಿಗಳಲ್ಲೊಬ್ಬರಾದ ಹುಣಸೀಮರದ ರಾಜ್ಯ ಉಪಾಧ್ಯಕ್ಷರಾಗಿ, ರಾಜ್ಯ ಯುವ ಜನತಾದಳ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರಾಗಿದ್ದು, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಅಧ್ಯಕ್ಷ ಕುಮಾರಸ್ವಾಮಿ, ಮಾಜಿ ಸಚಿವ ರೇವಣ್ಣ ಅವರ ಆಪ್ತ ಬಳಗದಲ್ಲಿರುವ ಪಕ್ಷದ ರಾಜ್ಯ ಕರ‍್ಯದರ್ಶಿಯಾಗಿ ಅಲ್ಲದೇ ಅವಳಿನಗರದ ಪದಾಧಿಕಾರಿಯಾಗಿ ಅನೇಕ ಹುದ್ದೆಗಳನ್ನು ನಿಬಾಯಿಸಿದ್ದಾರೆ.
ನಾಳೆ ಬೆಂಗಳೂರಿನಲ್ಲಿ ಸ್ವತಃ ಕುಮಾರ ಸ್ವಾಮಿ ನೇತ್ರತ್ವದಲ್ಲಿ ಜಿಲ್ಲಾ ಸಭೆ ನಡೆಯಲಿದ್ದು ಅಲ್ಲಿಯೇ ಅವಳಿನಗರದ ಅಧ್ಯಕ್ಷಗಿರಿ ಅಂತಿಮಗೊಳ್ಳಲಿದ್ದು, ದಿ.೨೦ರೊಳಗೆ ಪ್ರಕಟಿಸುವ ಸಾಧ್ಯತೆಗಳು ದಟ್ಟವಾಗಿವೆ.
ಕೆಲ ವರ್ಷಗಳ ಹಿಂದೆ ಮಹಾನಗರಪಾಲಿಕೆಯಲ್ಲಿ ಸುಮಾರು ಎರಡಂಕಿಯ ಸ್ಥಾನ ಹೊಂದಿರುತ್ತಿದ್ದ ಜೆಡಿಎಸ್ ನಿರ್ಣಾಯಕ ಸ್ಥಾನ ಹೊಂದಿರುತ್ತಿತ್ತು. ಆದರೆ ಬಹುತೇಕ ಮುಖಂಡರೆಲ್ಲರ ನಿರ್ಗಮನದಿಂದಾಗಿ ಪಕ್ಷದ ಬಲ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಸೂಕ್ತ ಸ್ಥಾನ ಮಾನ ದೊರೆಯದವರು, ನಾಯಕರ ವರ್ತನೆಯಿಂದ ಬೇಸರವಾದವರ ಮೊದಲ ಆಯ್ಕೆ ಜೆಡಿಎಸ್ ಎನ್ನುವಂತಹ ವಾತಾವರಣವಿದ್ದುದು ಈಗ ಬದಲಾಗಿದೆ. ಪಕ್ಷದಲ್ಲಿನ ಅನೇಕರು ಎಐಎಂಐಎA ಮತ್ತು ಆಮ್ ಆದ್ಮಿ ಪಕ್ಷದತ್ತ ಮುಖ ಮಾಡಿದ್ದಾರೆ ಎಂಬುದನ್ನು ಆ ಪಕ್ಷದ ಮುಖಂಡರೇ ಹೇಳುತ್ತಾರೆ.
ನೂತನ ಅಧ್ಯಕ್ಷರಿಗೆ ಅವಳಿನಗರದಲ್ಲಿ ಪಕ್ಷ ಸಂಘಟಿಸುವ ದೊಡ್ಡ ಜವಾಬ್ದಾರಿಯಿದ್ದು ಎಷ್ಟರಮಟ್ಟಿಗೆ ಮುಂಬರುವ ಚುನಾವಣೆಯಲ್ಲಿ ಯಶಸ್ಸು ದೊರೆಯುತ್ತದೆ ಕಾದು ನೋಡಬೇಕಾಗಿದೆ.