ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಗೆ ತನ್ನ ಅಭ್ಯಥಿಗಳ ಪಟ್ಟಿಯನ್ನು ಪ್ರಕಟಿಸಲು ಬಿಜೆಪಿ ಹರಸಾಹಸ ಪಡುತ್ತಿದ್ದು, ಇಂದು ರಾತ್ರಿ ಅಂತಿಮ ಪಟ್ಟಿ ಬಿಡುಗಡೆಯಾಗುವುದು ಬಹುತೇಕ ಖಾತ್ರಿಯಾಗಿದೆ.
ಮೊದಲ ಪಟ್ಟಿಯಲ್ಲಿ ೩೦ ಮತ್ತು ಎರಡನೆ ಪಟ್ಟಿಯಲ್ಲಿ ೧೫ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಇನ್ನೂ ೩೭ ಅಭ್ಯರ್ಥಿಗಳನ್ನು ಅಖೈರುಗೊಳಿಸಬೇಕಿದೆ. ಮಹಾನಗರ ಜಿಲ್ಲಾ ಅಧ್ಯಕ್ಷರೂ ಆಗಿರುವ ಶಾಸಕ ಅರವಿಂದ ಬೆಲ್ಲದ ಮೂರನೇ ಪಟ್ಟಿಯನ್ನೇ ಅಂತಿಮಗೊಳಿಸಲು ತೀವ್ರ ಪ್ರಯತ್ನ ನಡೆಸಿದ್ದಾರೆ. ಇದಕ್ಕಾಗಿ ಪಕ್ಷದ ಕೆಲವು ಮುಖಂಡರ ಜೊತೆ ಎಡಬಿಡದೇ ಸಮಾಲೋಚನೆ ಕೂಡ ನಡೆಸಿದ್ದಾರೆ.
ಈ ಮಧ್ಯೆ ಮುಖ್ಯಮಂತ್ರಿಗಳು, ಕೇಂದ್ರ ಹಾಗೂ ರಾಜ್ಯದ ಸಚಿವರು, ಮಾಜಿ ಸಚಿವರು,ಶಾಸಕರು, ವಿವಿಧ ಹಂತದಲ್ಲಿನ ಪ್ರಮುಖ ಪದಾಧಿಕಾರಿಗಳ ಮೂಲಕ ಆಕಾಂಕ್ಷಿಗಳು ಟಿಕೆಟ್ ಪಡೆಯಲು ಒತ್ತಡ ತಂದಿದ್ದು, ಪಟ್ಟಿ ಪ್ರಕಟಣೆಗೆ ವಿಳಂಬವಾಗಲು ಕಾರಣವಾಗಿದೆ.
ಇಂದು ರಾತ್ರಿ ಹೊತ್ತಿಗೆ ಕೆಲವು ವಾರ್ಡ್ಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿ, ನಾಳೆ ಮಧ್ಯಾಹ್ನದವರೆಗೂ ಕಾದು ನೋಡಿ ಪಟ್ಟಿ ಅಂತಿಮಗೊಳಿಸುವ ಇರಾದೆ ಇದೆ ಎನ್ನಲಾಗುತ್ತಿದೆ. ಎರಡನೆ ಪಟ್ಟಿಯಲ್ಲಿ ಅನೇಕ ಘಟಾನುಘಟಿಗಳಿಗೆ ಕೊಕ್ ನೀಡಿದ್ದು, ಮುಂದಿನ ಪಟ್ಟಿಯಲ್ಲಿಯೂ ಹಲವರಿಗೆ ಟಿಕೆಟ್ ತಪ್ಪುವ ಸಂಭವವಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಕೆಲವರು ಬಂಡಾಯದ ಬಾವುಟ ಹಾರಿಸುವ ಸಾಧ್ಯತೆ ಇದ್ದು, ಇದು ಕಮಲ ಪಡೆಗೆ ಹೆಚ್ಚಿನ ತಲೆ ನೋವಾಗಿ ಪರಿಣಮಿಸಿದೆ.
ಬಿಜೆಪಿಯಿಂದ ಅಧಿಕಾರಿಗಳ ದುರುಪಯೋಗ: ಆರೋಪ
ಹುಬ್ಬಳ್ಳಿ : ಬಹುನಿರೀಕ್ಷಿತ ಮಹಾನಗರ ಪಾಲಿಕೆ ಚುನಾವಣೆಯಲ್ಲಿ, ಬಿಜೆಪಿ ಮತ್ತೆ ಅಧಿಕಾರ ಹಿಡಿಯಲು ಚುನಾವಣಾ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂಬ ಗಂಭೀರ ಆರೋಪ ಇದೀಗ ಕೇಳಿ ಬರುತ್ತಿದೆ.
ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಇನ್ನಿತರ ಪಕ್ಷ ಹಾಗೂ ಸ್ವತಂತ್ರ ಅಭ್ಯರ್ಥಿಗಳು ಅಗತ್ಯ ದಾಖಲೆ ಸಿದ್ಧತೆ ಮಾಡಿಕೊಂಡು, ಈ ಬಾರಿ ಸ್ಪರ್ಧಿಸಲೆಬೇಕೆಂದು ನಾಮಪತ್ರ ಸಲ್ಲಿಸುತ್ತಿದ್ದಾರೆ. ಆದರೆ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಆಸೆಯಿಂದ, ಚುನಾವಣೆ ಅಧಿಕಾರಿಗಳನ್ನು ಬಳಸಿಕೊಂಡು ವಿನಾಕಾರಣ ನಾಮಪತ್ರ ಸಲ್ಲಿಸಲು ಬರುವ ಪಕ್ಷೇತರ ಅಭ್ಯರ್ಥಿಗಳ ದಾಖಲೆಗಳಲ್ಲಿ, ತಪುö್ಪ ಹುಡುಕುವುದು, ಅನಗತ್ಯ ವಿಳಂಬ ಮಾಡುತ್ತಿದ್ದಾರಂತೆ.
ಇದನ್ನು ಯಾವ ಪಕ್ಷವು ಸಹಿಸುವುದಿಲ್ಲ. ಇಂತಹ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿರುವ ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.