ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಭಾವಿ ಜೆಡಿಎಸ್‌ನ ನಾಯಕ,ಶಿಕ್ಷಕರ ಕಣ್ಮಣಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನಗರದ ಗೋಕುಲ ರಸ್ತೆಯಲ್ಲಿರುವ ಆರ್ ಎಸ್ ಎಸ್ ಕೇಂದ್ರ ಕಚೇರಿ ಕೇಶವ ಕುಂಜಕ್ಕೆ ಬಲಗಾಲಿಟ್ಟಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಕಾರ್ಯಕ್ರಮಗಳಲ್ಲಿ ಮಾತ್ರ ಬಿಜೆಪಿ ನಾಯಕರ ಜೊತೆ ಕಾಣಿಸಿಕೊಳ್ಳುತ್ತಿದ್ದ ಹೊರಟ್ಟಿ ಕೇವಲ ಬಿಜೆಪಿ ನಾಯಕರಲ್ಲದೆ ಆರ್‌ಎಸ್‌ಎಸ್‌ನ ಪ್ರಭಾವಿಗಳಾದ ಉತ್ತರ ಪ್ರಾಂತ್ಯ ಕಾರ್ಯವಾಹ ಶ್ರೀಧರ ನಾಡಗೇರ,ವಿಭಾಗೀಯ ಕಾರ್ಯವಾಹ ಕಿರಣ ಗುಡ್ಡದಕೇರಿ,ಮಹಾನಗರ ಸಂಘ ಚಾಲಕ ಗೋವಿಂದಪ್ಪ ಗೌಡಪ್ಪಗೋಳ ಮುಂತಾದವರ ಜೊತೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿರುವ ಪರಿಷತ್ ಸಭಾಪತಿಗಳ ನಡೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಯಾವುದೇ ವಿಷಯವಿರಲಿ,ಅಲ್ಲದೇ ಸಂಘದ ಸಿದ್ಧಾಂತಗಳನ್ನು ಮೂಗಿನ ನೇರಕ್ಕೆ ವಿರೋಧಿಸುವ ಜಾಯಮಾನದ ಹೊರಟ್ಟಿಯವರ ಪ್ರಸಕ್ತ ನಡೆ ಹೊಸ ಲೆಕ್ಕಾಚಾರಕ್ಕೆ ನಾಂದಿ ಹಾಡಿದೆ.
ಮುಂದಿನ ೨೦೨೨ರಲ್ಲಿ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಲಿದ್ದು,ಸೋಲಿಲ್ಲದ ಸರದಾರನ ನಡೆ ಮುಂದೆ ಯಾವ ತಿರುವು ಪಡೆಯುವುದು ಕಾದು ನೋಡಬೇಕಿದೆ.
ಡಿಸಿಎಂ ಅಶ್ವಥ್ ನಾರಾಯಣ ಜತೆ ಮೊದಲ ಬಾರಿಗೆ ಹೊರಟ್ಟಿ ಸಂಘದ ಶಕ್ತಿ ಕೇಂದ್ರದ ಮೆಟ್ಟಿಲು ಹತ್ತಿದ್ದು ಸಿಎಂ ಬದಲಾವಣೆ ಕಾರ್ಯಾಚರಣೆ ಮುಂಚೂಣಿಯಲ್ಲಿರುವ ಅಲ್ಲದೇ ಸಂಘದ ‘ಲಾಡ್ಲಾ ಬೇಟಾ’ ಆಗಿರುವ ಮಹಾನಗರ ಬಿಜೆಪಿ ಅಧ್ಯಕ್ಷ ಅರವಿಂದ ಬೆಲ್ಲದ, ಎಸ್.ವಿ.ಸಂಕನೂರ ಈ ಸಂದರ್ಭದಲ್ಲಿ ಇದ್ದರು.