ಕಲಘಟಗಿ: ಕಲಘಟಗಿ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ನಡೆದಿರುವ ಮುಸುಕಿನ ಗುದ್ದಾಟ ಮತ್ತೊಂದು ಪೈಪೋಟಿಗೆ ಅಣಿಯಾಗುವ ಎಲ್ಲ ಲಕ್ಷಣಗಳು ಗೋಚರಿಸಲಾರಂಭಿಸಿವೆ.
ಕಲಘಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಮಾಜಿ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಬೆಂಬಲಿಗ ಗುರುನಾಥ ದಾನವೇನವರ ನೇಮಕಕ್ಕೆ ತಡೆಯಾಜ್ಞೆ ತರುವಲ್ಲಿ ಮಾಜಿ ಸಚಿವ ಸಂತೋಷ ಲಾಡ್ ಯಶಸ್ವಿಯಾಗಿ ದ್ದರೂ, ಮೊದಲಿನ ಅಧ್ಯಕ್ಷರಾಗಿದ್ದ ಕೆಸಿಸಿ ಬ್ಯಾಂಕ್ ನಿರ್ದೇಶಕರೂ ಆಗಿರುವ ಮಂಜುನಾಥ ಮುರಳ್ಳಿಯವರನ್ನು ಕೆಪಿಸಿಸಿ ಮುಂದುವರಿಸಿಲ್ಲ.
ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಈ ಬಗೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ಸ್ಪಷ್ಟ ಪಡಿಸಿದ್ದು, ಹುದ್ದೆ ಖಾಲಿ ಇದೆ ಎಂದು ಹೇಳಿದ್ದಾರೆನ್ನಲಾಗಿದೆ. ಏಕಾಏಕಿ ದಾನವೇನವರ ನೇಮಕ ಮಾಡಿದ್ದು, ಸಂತೋಷ ಲಾಡ ಬಣಕ್ಕೆ ನುಂಗಲಾರದ ತುತ್ತಾಗಿ ತಡೆ ತರುವಲ್ಲಿ ಯಶಸ್ವಿಯಾಗಿದ್ದರೂ, ಮುರಳ್ಳಿಯ ವರನ್ನು ಮುಂದುವರಿಸಲು ಸಾಧ್ಯವಾಗಿಲ್ಲದಿರುವುದರಿಂದ ಮುಂದೆ ಬ್ಲಾಕ್ ಅಧ್ಯಕ್ಷರ ಗಾದಿ ಯಾರ ಪಾಲಾಗಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಕಳೆದ ಚುನಾವಣೆಯಲ್ಲಿ ಪರಾಭವಗೊಂಡ ನಂತರ ಸುಮಾರು ಮೂರು ವರ್ಷ ಕಾಲ ಮಾಜಿ ಸಚಿವ ಸಂತೋಷ ಲಾಡ ಕ್ಷೇತ್ರದ ಕಡೆ ಮುಖ ಹಾಕದ ಕಾರಣದಿಂದ ಈ ಹಿಂದಿನಿ0ದಲೂ ಕ್ಷೇತ್ರಕ್ಕೆ ಚಿರಪರಿಚಿತರಾದ ನಾಗರಾಜ ಛಬ್ಬಿ ಸಕ್ರಿಯರಾಗಿ ಪಕ್ಷ ಸಂಘಟನೆಗೆ ತೊಡಗಿಕೊಂಡು ಹಿಡಿತ ಸಾಧಿಸಲು ಬ್ಲಾಕ್ ಅಧ್ಯಕ್ಷರನ್ನಾಗಿ ತಮ್ಮ ಬೆಂಬಲಿಗರನ್ನೇ ಮಾಡಿಸಲು ಮುಂದಾದರು. ಈ ಹಂತದಲ್ಲಿ ಮತ್ತೆ ಕಲಘಟಗಿಯತ್ತ ಮುಖ ಮಾಡಿರುವ ಲಾಡ್ ಕೋವಿಡ್ ಹಂತದಲ್ಲಿ ಕಿಟ್ ವಿತರಣೆ ಮೂಲಕ ಮತ್ತೆ ಸಕ್ರಿಯರಾಗಿ ರುವಾಗಲೇ ದಾನವೇನವರ ನೇಮಕ ನುಂಗಲಾರದ ತುತ್ತಾಯಿತು. ನೇಮಕಕ್ಕೆ ತಡೆ ತಂದರೂ ಮುರಳ್ಳಿಯವರನ್ನು ಮುಂದುವರಿಸಲೂ ಸಹ ಆಗದಿರು ವುದು ಲಾಡ್ ಹಿನ್ನೆಡೆ ಎಂದೇ ಹೇಳಲಾಗುತ್ತಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ ಮುಂದಿನ ಆದೇಶದವರೆಗೂ ಹುದ್ದೆ ಖಾಲಿ ಇದೆ ಎಂದು ಹೇಳಿರುವುದು ಮತ್ತೆ ಛಬ್ಬಿ ಹಾಗೂ ಲಾಡ್ ನಡುವಿನ ಮೇಲಾಟಕ್ಕೆ ಅಕ್ಷರಶಃ ವೇದಿಕೆಯಾಗಲಿದೆ. ಒಂದೆಡೆ ಸ್ಥಳೀಯರಿಗೆ ಟಿಕೆಟ ನೀಡಬೇಕೆಂಬ ಕೂಗು ಕೇಳಿಬರುತ್ತಿದ್ದು, ಇನ್ನೊಂದೆಡೆ ಲಾಡ್ ಜಿಲ್ಲೆಯಲ್ಲಿ ತಮ್ಮದೇ ಬಣ ಸ್ಪಷ್ಡಿಗೆ ಮುಂದಾಗಿದ್ದಾರೆ. ಒಟ್ಟಿನಲ್ಲಿ ಚುನಾವಣೆಗೆ ಇನ್ನೆರಡು ವರ್ಷ ಇರುವಾಗಲೇ ತೊಟ್ಟಿಲ ತವರಿನಲ್ಲಿ ಜಂಗಿ ಕುಸ್ತಿ ಆರಂಭವಾಗಿದೆ. ಕೆಪಿಸಿಸಿ ಯಾರಿಗೆ ಮಣೆ ಹಾಕುತ್ತದೆ ಎಂಬುದಕ್ಕಿ0ತ ಮೊದಲು ಬ್ಲಾಕ್ ಅಧ್ಯಕ್ಷ ಗಿರಿ ಯಾರ ಬಣದ ಪಾಲಾಗುತ್ತದೆ ಎಂಬುದು ಕುತೀಹಲ ಕೆರಳಿಸಿದೆ.