ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ವ್ಯಾಪ್ತಿಯ 9 ವಾರ್ಡ್‌ಗಳು ಹಾಗೂ ಧಾರವಾಡ ಗ್ರಾಮೀಣದ ಸುಮಾರು 50ಕ್ಕೂ ಹೆಚ್ಚು ಹಳ್ಳಿಗಳನ್ನೊಳಗೊಂಡ, ಸತತ ಎರಡು ಗೆಲುವು ತಂದು ಕೊಡದ ಕ್ಷೇತ್ರವಾಗಿರುವ ಧಾರವಾಡ ಕ್ಷೇತ್ರದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ಗಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ವ್ಯಾಪಕ ಪೈಪೋಟಿಯಿದೆ.
ಕಮಲ ಪಾಳೆಯದ ಅಮೃತ ದೇಸಾಯಿ ಹಾಲಿ ಶಾಸಕರಿದ್ದರೂ ನಾಲ್ಕಕ್ಕೂ ಹೆಚ್ಚು ಆಕಾಂಕ್ಷಿಗಳು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಎಲ್ಲರೂ ಬಲಿಷ್ಠರೇ ಇರುವುದರಿಂದ ಅಂತಿಮ ಪಟ್ಟಿ ಹೊರ ಬಿದ್ದಾಗಲೇ ಅಧಿಕೃತ ಎನ್ನುವ ವಾತಾವರಣವಿದೆ.
ಧಣಿ ಎಂದೇ ಕರೆಸಿಕೊಳ್ಳುವ ಶಾಸಕ ದೇಸಾಯಿ ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಬಿದ್ದಿಲ್ಲವಾದರೂ ಪಕ್ಷದ ವಲಯದಲ್ಲೇ ಅವರಿಗೆ ಸೆಡ್ಡು ಹೊಡೆದು ಟಿಕೆಟ್‌ಗಾಗಿ ಲಾಬಿ ನಡೆದಿದೆ.ಅಲ್ಲದೇ ತಮಗೆ ಟಿಕೆಟ್ ನಿಕ್ಕಿ ಎಂಬ ಭರವಸೆ ಸ್ವತಃ ಶಾಸಕರಿಗೆ ಇದೆಯಾದರೂ ಪಕ್ಷದ ಮಾನದಂಡ, ಸಮೀಕ್ಷೆ ಇನ್ನೂ ಗೋಜಲಾಗಿಯೇ ಗೋಚರಿಸುತ್ತಿದೆ. 2013ರಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಗಮನಾರ್ಹ ಮತ ಪಡೆದಿದ್ದ ಅಲ್ಲದೇ ಕ್ಷೇತ್ರದಲ್ಲಿ ತನ್ನದೇ ಪಡೆ ಹೊಂದಿರುವ ತವನಪ್ಪ ಅಷ್ಟಗಿ ಹೆಸರೂ ಅಮೃತ ದೇಸಾಯಿಯವರಿಗೆ ಸಮನಾಗಿ ಚಾಲ್ತಿಯಲ್ಲಿದೆ. ಅಲ್ಲದೇ ಬಯಲು ಸೀಮೆ ಅಭಿವೃದ್ದಿ ನಿಗಮದ ಅಧ್ಯಕ್ಷರೂ ಆಗಿರುವ ಅಷ್ಟಗಿ ಬಗ್ಗೆ ಹಿರಿಯರಿಗೊಮ್ಮೆ ಅವಕಾಶ ಸಿಗಲಿ ಎಂಬ ಸದಭಿಪ್ರಾಯ ಮಾತ್ರ ಬಹುತೇಕರಲ್ಲಿದೆ.
2008ರಲ್ಲಿ ಶಾಸಕಿಯಾಗಿದ್ದ ಸೀಮಾ ಮಸೂತಿ 2013ರಲ್ಲಿ ಕೆಜೆಪಿ-ಬಿಜೆಪಿ ಎಫೆಕ್ಟ್‌ನಿಂದಾಗಿ ವಿನಯ ಕುಲಕರ್ಣಿ ಎದುರು ಹಿನ್ನೆಡೆ ಅನುಭವಿಸಿದ್ದರು. ಸೋತ ನಂತರವೂ ಜನ ಸಂಪರ್ಕದಿಂದ ದೂರವಾಗದ ಅವರು ಮಾಜಿ ಸಿಎಂಗಳಾದ ಯಡಿಯೂರಪ್ಪ, ಜಗದೀಶ ಶೆಟ್ಟರ್ ಆಪ್ತ ವಲಯದಲ್ಲಿದ್ದು ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆಯೂ ಆಗಿದ್ದು ಮಹಿಳಾ ಕೋಟಾದಡಿ ಟಿಕೆಟ್‌ಗಾಗಿ ತೀವ್ರ ಯತ್ನ ನಡೆಸಿದ್ದಾರೆ. ಅಲ್ಲದೇ ಚಿಕ್ಕಮಲ್ಲಿಗವಾಡ ಇವರ ತವರಾದರೆ ಉಪ್ಪಿನ ಬೆಟಗೇರಿ ಗಂಡನ ಮನೆಯಾಗಿದೆ.
ನಿಕಟಪೂರ್ವ ಸಿಎಂ ಯಡಿಯೂರಪ್ಪ ಅವಧಿಯಲ್ಲಿ ರೇಷ್ಮೆ ಅಭಿವೃದ್ದಿ ನಿಗಮ ಅಧ್ಯಕ್ಷರಾಗಿ ಕಾರ್ಯಗಳ ಮೂಲಕ ಭರವಸೆ ಮೂಡಿಸಿರುವ ಧಾರವಾಡದ ಅಮರಶೆಟ್ಟಿ ಕುಟುಂಬದ ಸವಿತಾ ಅಮರಶೆಟ್ಟಿ ಇನ್ನೋರ್ವ ಕೇಸರಿ ಟಿಕೆಟ್ ಆಕಾಂಕ್ಷಿಯಾಗಿದ್ದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಹಿತ ಅನೇಕ ವರಿಷ್ಠರ ಜತೆ ಉತ್ತಮ ಸಂಪರ್ಕ ಹೊಂದಿದ್ದು ಕಣಕ್ಕಿಳಿಯಲು ಭಾರಿ ಪ್ರಯತ್ನ ನಡೆಸಿದ್ದಾರೆ. ಸಾಮಾಜಿಕ ಹೋರಾಟಗಳ ಮೂಲಕ ಸುದ್ದಿಯಲ್ಲಿರುವ ಬಸವರಾಜ ಕೊರವರ ಕೂಡ ಬಿಜೆಪಿ ಆಕಾಂಕ್ಷಿಯಾಗಿದ್ದು ಪಕ್ಷೇತರರಾಗಿ ಸೆಡ್ಡು ಹೊಡೆಯುವ ಲೆಕ್ಕಾಚಾರದಲ್ಲಿದ್ದಾರೆ.
ಕಾಂಗ್ರೆಸ್‌ನಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಇಂದಿಗೂ ಕ್ಷೇತ್ರದಲ್ಲಿ ತನ್ನದೇ ಹಿಡಿತ ಹೊಂದಿದ್ದರೂ ಯೋಗೇಶ ಗೌಡರ ಕೊಲೆ ಪ್ರಕರಣವೇ ಉರುಳಾಗಿ ಪರಿಣಮಿಸಿದ್ದು, ಜಿಲ್ಲೆಯ ಪ್ರವೇಶದ ನಿರ್ಬಂಧವಿರುವುದು ಸಮಸ್ಯೆಯಾಗಿಯೇ ಮುಂದುವರಿದಿದೆ. ತನ್ನ ಮತದಾರರ ಜತೆ ಸಂಪರ್ಕ ಹೊಂದಿದ್ದರೂ ಕ್ಷೇತ್ರಕ್ಕೆ ಕಾಲಿಡುವುದು ಕಠಿಣವಾಗಿದೆ. ಪತಿಯ ಅನುಪಸ್ಥಿತಿಯಲ್ಲಿ ಪತ್ನಿ ಶಿವಲೀಲಾ ಕುಲಕರ್ಣಿಯೇ ಉಸ್ತುವಾರಿಯಾಗಿ ಸಂಭಾಳಿಸುತ್ತಿದ್ದಾರೆ. ವಿನಯ ತಮ್ಮ ಸ್ಪರ್ಧೆಗೆ ತೊಡಕಾದಲ್ಲಿ ಪತ್ನಿಗೆ ನೀಡಬೇಕೆಂದು ಬಹಿರಂಗವಾಗಿಯೇ ಹೇಳಿದ್ದಾರೆ.
ಕಳೆದ ಬಾರಿ ಪಶ್ಚಿಮ ಕ್ಷೇತ್ರದಿಂದ ಸ್ಪರ್ಧಿಸಿದ್ದ ಧಾರವಾಡ ಅಂಜುಮನ್ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಈ ಬಾರಿ ಪಶ್ಚಿಮದ ಮೇಲೆ ಕಣ್ಣು ಹಾಕಿದ್ದಾರೆ. ಕ್ಷೇತ್ರದಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಿದ್ದು, ಅಲ್ಲದೇ ಉಳಿದ ಸಮುದಾಯದ ಜತೆಯೂ ಸೌಹಾರ್ಧ ಸಂಬಂಧ ಹೊಂದಿದ್ದು ಧಾರವಾಡಕ್ಕಾಗಿ ಪಟ್ಟು ಹಿಡಿದಿದ್ದಾರೆ. ಹಿಂದೆ ವಿನಯ ಆಪ್ತ ವಲಯದಲ್ಲಿದ್ದು ಈಗ ದೂರಾಗಿರುವುದು ಪಕ್ಷದ ವರಿಷ್ಠರಿಗೂ ತಲೆನೋವಾಗಿದೆ. ಅಲ್ಪಸಂಖ್ಯಾತ ಮುಖಂಡರು ಈಗಾಗಲೇ ಕೈ ವರಿಷ್ಠರಿಗೆ ಸಾಮಾಜಿಕ ನ್ಯಾಯದಡಿ ಧಾರವಾಡ ಜಿಲ್ಲೆಯ ಒಂದು ಸ್ಥಾನ ನೀಡಬೇಕೆಂಬ ಮನವಿ ಮಾಡಿರುವುದು ಕುತೂಹಲ ಕೆರಳಿಸಿದೆ. ಟಿಕೆಟ್ ನಿರಾಕರಿಸಿದಲ್ಲಿ ’ಪರ್ಯಾಯ’ದ ಆಲೋಚನೆ ಸಹ ಮಾಡಿದ್ದಾರೆನ್ನಲಾಗಿದೆ.
ವಿನಯ ಅವರು ಮುಖ್ಯಮಂತ್ರಿ ಬೊಮ್ಮಾಯಿ ಎದುರಾಳಿಯಾಗಿ ಶಿಗ್ಗಾಂವನಲ್ಲಿ ಕಣಕ್ಕಿಳಿಸಲು ಪಕ್ಷ ಚಿಂತನೆ ನಡೆಸಿದೆ ಎಂಬ ಮಾತು ಹರಿದಾಡುತ್ತಿದೆ. ಆದರೆ ಈ ಮಾತನ್ನು ವಿನಯ ಬೆಂಬಲಿಗರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಈ ಕ್ಷೇತ್ರ ಬಿಜೆಪಿ ಮತ್ತು ಕಾಂಗ್ರೆಸ್‌ನ ಜಿದ್ದಾಜಿದ್ದಿಯ ನೇರ ಸಮರದ ಕ್ಷೇತ್ರವಾಗಿದ್ದು, ಜೆಡಿಎಸ್‌ನಿಂದ ಮಂಜುನಾಥ ಹಗೇದಾರ, ಆಪ್‌ನಿಂದ ಬಸಯ್ಯಾ ಹಿರೇಮಠ ಮತ್ತಿತರ ಹೆಸರು ಕೇಳಿ ಬರುತ್ತಿವೆ.