ಗೆಲ್ಲುವ ಸಾಮರ್ಥ್ಯ ಒರೆಗಲ್ಲಿಗೆ
ಧಾರವಾಡ: ಧಾರವಾಡ-71 ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಣೆ ನಾಳೆ ಮೊದಲ ಪಟ್ಟಿಯಲ್ಲಿ ಆಗುವ ಸಾಧ್ಯತೆ ಹೆಚ್ಚಿದ್ದು, ಈ ಕುರಿತು ದೆಹಲಿಯಲ್ಲಿ ಹಲವು ಸುತ್ತಿನ ಚರ್ಚೆ ನಡೆಯುತ್ತಿದೆ.
ಈಗಾಗಲೇ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಹೆಸರನ್ನು ಕಾಂಗ್ರೆಸ್ ಪ್ರಕಟಿಸಿದ್ದು, ಇತ್ತ ಹಲವು ಆಕಾಂಕ್ಷಿಗಳ ಗೆಲ್ಲುವ ಸಾಮರ್ಥ್ಯವನ್ನು ಬಿಜೆಪಿ ಒರೆಗಲ್ಲಿಗೆ ಹಚ್ಚುತ್ತಿದೆ.
ಪ್ರಬಲ ಲಿಂಗಾಯತ ಪಂಚಮಸಾಲಿ ಸಮುದಾಯದ ವಿನಯ ಅವರು ಪುನಃ ಕಣಕ್ಕಿಳಿಯಲಿರುವ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳಾದ ಹಾಲಿ ಶಾಸಕ ಅಮೃತ ದೇಸಾಯಿ, ಮಾಜಿ ಶಾಸಕಿ ಸೀಮಾ ಮಸೂತಿ, ತವನಪ್ಪ ಅಷ್ಟಗಿ, ಸವಿತಾ ಅಮರಶೆಟ್ಟಿ ಅಲ್ಲದೇ ಬಸವರಾಜ ಕೊರವರ ಅವರ ಪ್ರಯತ್ನ ಮುಂದುವರೆದಿದೆ. ಇಂದಿನವರೆಗೆ ಆಕಾಂಕ್ಷಿಗಳ ಪೈಕಿ ಮೂವರ ಹೆಸರುಗಳು ಅಂತಿಮ ಪಟ್ಟಿಯಲ್ಲಿದ್ದು, ಈ ಮೂವರಲ್ಲಿ ಒಬ್ಬರನ್ನು ಅಖೈರುಗೊಳಿಸಲು ಹೈಕಮಾಂಡ್ ಹರಸಾಹಸ ಪಡುತ್ತಿದೆ.
ಕ್ಷೇತ್ರದಲ್ಲಿ ಮತ್ತೊಮ್ಮೆ ಕೇಸರಿ ಬಾವುಟ ಹಾರಿಸುವ ಬಿಜೆಪಿಯ ಉತ್ಸಾಹಕ್ಕೆ ಯಾವುದೇ ಭಂಗ ಆಗದಂತೆ ನಿಗಾವಹಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಈ ಮೂಲಕ ಆಕಾಂಕ್ಷಿಗಳ ಪೈಕಿ ಯಾರಿಗೂ ಅಸಮಾಧಾನ ಆಗದಂತೆ ನೋಡಿಕೊಳ್ಳ ಬೇಕಾದ ಅನಿವಾರ್ಯತೆ ಹಿನ್ನಲೆಯಲ್ಲಿ ಬಿಜೆಪಿ ಎಚ್ಚರಿಕೆಯ ನಡೆ ಅನುಸರಿಸುತ್ತಿದ್ದು, ತನ್ಮಧ್ಯೆ ವರಿಷ್ಠರು ತವನಪ್ಪ ಅಷ್ಟಗಿ ಕರೆಸಿಕೊಂಡು ಸಮಗ್ರ ಮಾಹಿತಿ ಕಲೆ ಹಾಕಿದ್ದು ಮತ್ತಷ್ಟು ಕುತೂಹಲ ಕೆರಳಿಸುವಂತೆ ಮಾಡಿದೆ. ಅಲ್ಲದೇ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಪರ ಸ್ವತಃ ಯಡಿಯೂರಪ್ಪ, ಸಿ.ಟಿ.ರವಿ ಬ್ಯಾಟಿಂಗ್ ಮಾಡಿದ್ದಾರೆನ್ನಲಾಗಿದೆ. ಕೊನೆ ಕ್ಷಣದವರೆಗೂ ಟಿಕೆಟ್ ಸಿಗಲಿದೆ ಎಂಬ ಆಸೆ ಯೊಂದಿಗೆ ವರಿಷ್ಠರ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಕೆಲವರು ದೆಹಲ್ಲಿಯಲ್ಲಿಯೇ ಉಳಿದಿದ್ದಾರೆ. ಈ ಕಾರಣದಿಂದ ಅಭ್ಯರ್ಥಿ ಆಯ್ಕೆ ತುಸು ವಿಳಂಬ ಆದರೂ ಅಚ್ಚರಿಪಡಬೇಕಿಲ್ಲ.