ಬಿಜೆಪಿಗೆ ಮುಜುಗುರ: ಕೇಂದ್ರ ಸಮಿತಿಗೆ ವಿವರ
ಬೆಂಗಳೂರು: ಮುಖ್ಯಮಂತ್ರಿ ಪದವಿಗೆ ೨,೫೦೦ ಕೋಟಿ ರೂಪಾಯಿ ಕೇಳಿದ್ದರೆಂಬ ಆಡಳಿತ ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ಸಂಚಲನ ತಂದಿದೆಯಲ್ಲದೇ ಪಕ್ಷದ ನಾಯಕತ್ವಕ್ಕೆ ತೀವ್ರ ಮುಜುಗರ ತಂದಿದ್ದು ಅವರ
ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಬಿಜೆಪಿ ಮುಂದಾಗಿದೆ.
ಯತ್ನಾಳ್ ಹೇಳಿಕೆಗಳ ಬಗ್ಗೆ ಕೇಂದ್ರ ಶಿಸ್ತು ಸಮಿತಿಗೆ ಮಾಹಿತಿ ರವಾನಿಸಲಾಗಿದೆ.ಅಲ್ಲದೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯ ಉಸ್ತುವಾರಿ ಅರುಣಸಿಂಗ್ ಅವರ ಗಮನಕ್ಕೂ ತರಲಾಗಿದೆ ಎಂದು ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷರಾದ ಹುಬ್ಬಳ್ಳಿಯ ಲಿಂಗರಾಜ ಪಾಟೀಲ ಹೇಳಿದ್ದಾರೆ.
’ಸಂಜೆ ದರ್ಪಣ’ದೊಂದಿಗೆ ಮಾತನಾಡಿದ ಅವರು, ಶಾಸಕರು ಮತ್ತು ಸಂಸದರ ವಿಚಾರದಲ್ಲಿ ಕೇಂದ್ರ ಶಿಸ್ತು ಸಮಿತಿಯೇ ಕ್ರಮ ಕೈಗೊಳ್ಳಬೇಕಾಗಿದ್ದು ಸಮಿತಿಯ ಓಂ ಪಾಠಕ್ ಹಾಗೂ ಅವಿನಾಶ ರೈ ಖನ್ನಾ ಅವರೇ ನಿರ್ಧರಿಸಲಿದ್ದಾರೆಂದು ಹೇಳಿದರು.
ರಾಜ್ಯ ಅಧ್ಯಕ್ಷ ನಳೀನಕುಮಾರ ಕಟೀಲ ಸಹಿತ ಅನೇಕ ಪ್ರಮುಖರು ರಾಷ್ಟ್ರೀಯ ನಾಯಕರ ಗಮನಕ್ಕೆ ತಂದಿದ್ದು
ಶಿಸ್ತು ಕ್ರಮ ಕೈಗೊಳ್ಳಲು ಬಿಜೆಪಿ ರಾಜ್ಯ ಸಮಿತಿಯೂ ಶಿಫಾರಸು ಮಾಡಿದೆ ಎನ್ನಲಾಗಿದೆ.
ಸ್ವಪಕ್ಷದ ಶಾಸಕರ ಆಕ್ಷೇಪಾರ್ಹ ಹೇಳಿಕೆಯಿಂದ ಮುಜುಗರಕ್ಕೀಡಾಗಿರುವ ಪಕ್ಷ, ವಿವರಣೆ ಪಡೆಯಲು ಹಲವು ಬಾರಿ ಯತ್ನಾಳ್ ಸಂಪರ್ಕ ಮಾಡಿದ್ದರೂ ಯತ್ನಾಳ್ ದೂರವಾಣಿ ಕರೆಗೂ ಸಿಗುತ್ತಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ವೇಳೆ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆ ದಟ್ಟವಾಗಿದೆ.
ಗುತ್ತಿಗೆದಾರರಿಂದ ೪೦% ಕಮಿಷನ್ ವಸೂಲಿ, ಪಿಎಸ್ ಐ ಮತ್ತಿತರ ಹುದ್ದೆಗಳ ನೇಮಕದ ಅಕ್ರಮ ವ್ಯವಹಾರ, ಆರೋಗ್ಯ ಇಲಾಖೆಯ ಭ್ರಷ್ಟಾಚಾರ ಸೇರಿದಂತೆ ದಿನಕ್ಕೊಂದು ಹಗರಣಗಳು ಬೊಮ್ಮಾಯಿ ಸರ್ಕಾರಕ್ಕೆ ಅಂಟಿಕೊಂಡಿದ್ದು ಮುಂಬರುವ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಯತ್ನಾಳ ಹೇಳಿಕೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಪಾಲಿಗೆ ದೊಡ್ಡ ಆಹಾರವಾಗಿದೆ.
ತನ್ಮಧ್ಯೆ ಮಾತನಾಡಿರುವ ಮಾಜಿ ಸಿಎಂ ಎಲ್ಲ ಹಗರಣಗಳಿಗೂ ಯತ್ನಾಳ್ ಮಾಡಿರುವ ಆರೋಪಕ್ಕೂ ನೇರವಾದ ಸಂಬಂಧ ಇದೆ. ಇವೆಲ್ಲವುಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಯತ್ನಾಳ್ ಆರೋಪ ಹೊಸದೇನಲ್ಲ. ಕಳೆದ ಎರಡು ವರ್ಷಗಳಿಂದ ಇವರು ತಮ್ಮದೇ ಪಕ್ಷದ ಮುಖ್ಯಮಂತ್ರಿಗಳು, ಸಚಿವರು ಮತ್ತು ನಾಯಕರ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ಮೌನವಾಗಿರುವುದು ಸಮ್ಮತಿಯ ಸೂಚನೆಯೇ ಎಂದು ಕೇಳಿರುವುದು ಬಿಜೆಪಿ ಗಾಯಕ್ಕೆ ಉಪ್ಪು ಸವರುವಂತೆ ಮಾಡಿದೆ. ನಿನ್ನೆ ರಾಮದುರ್ಗದಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಯತ್ನಾಳ ಮಾಡಿದ್ದ ಆರೋದ ವಿಡಿಯೋ ವ್ಯಾಪಕ ವೈರಲ್ ಆಗಿದೆ.