ನೂತನ ಸಂಪುಟಕ್ಕೆ ಅಷ್ಟ ಸಚಿವರ ಬಲ
ಜನಸಾಗರದ ಮಧ್ಯೆ ಪ್ರಮಾಣ ವಚನ
ರಾಜ್ಯದ ಜನತೆಗೆ ಇಂದೇ ಗ್ಯಾರಂಟಿ ಭಾಗ್ಯ
ದೇವರ ಹೆಸರಲ್ಲಿ ಸಿದ್ದು, ಅಜ್ಜಯ್ಯನ ಹೆಸರಲ್ಲಿ ಡಿಕೆಶಿ ಪ್ರಮಾಣ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಐತಿಹಾಸಿಕ ಸಮಾರಂಭದಲ್ಲಿ ಕರುನಾಡಿನ ಇಪ್ಪತ್ನಾಲ್ಕನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ ಹಾಗೂ ಎಂಟು ಜನ ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಕಾಂಗ್ರೆಸ್ ಸರ್ಕಾರ ಅಧಿಕೃತವಾಗಿ ಅಸ್ಥಿತ್ವಕ್ಕೆ ಬಂದಿದೆ.
ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರು ಪ್ರಮಾಣವಚನ ಬೋಧಿಸಿದರು.
“ಸಿದ್ದರಾಮಯ್ಯ ಎಂಬ ಹೆಸರಿನ ನಾನು.. ” ಸಿದ್ದರಾಮನಹುಂಡಿಯ ಬಡ ರೈತ ಕುಟುಂಬದಿಂದ ಬಂದು ರಾಜ್ಯ ರಾಜಕಾರಣದಲ್ಲಿ ತನ್ನದೇ ಛಾಪು ಮೂಡಿಸಿರುವ ಸಿದ್ದರಾಮಯ್ಯ ಅವರು ಎರಡನೇ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು.
ಸಿದ್ದರಾಮಯ್ಯ ಅವರು ದೇವರ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.ಡಿಕೆ ಶಿವಕುಮಾರ್ ಅವರು ಶ್ರೀ ಗಂಗಾಧರ ಅಜ್ಜನ ಹೆಸರಿನಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಡಾ.ಜಿ ಪರಮೇಶ್ವರ್ ಅವರು ಮೊದಲ ಸಚಿವರಾಗಿ ಅವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಕೆ.ಎಚ್.ಮುನಿಯಪ್ಪ, ಕೆ.ಜೆ ಜಾರ್ಜ, ಎಂ.ಬಿ.ಪಾಟೀಲ, ಸತೀಶ ಜಾರಕಿಹೊಳಿ, ಪ್ರಿಯಾಂಕ ಖರ್ಗೆ, ರಾಮಲಿಂಗಾರೆಡ್ಡಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಹಾಗೂ ಜಮೀರ ಅಹ್ಮದ ಖಾನ ಅವರು ಆಂಗ್ಲ ಭಾಷೆಯಲ್ಲಿ ಅಲ್ಲಾಹನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಸತೀಶ ಜಾರಕಿಹೊಳಿ ಬುದ್ದ ಬಸವ ಅಂಬೇಡ್ಕರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ವಾದ್ರಾ, ರಾಹುಲ್ ಗಾಂಧಿ ವಿವಿಧ ರಾಜ್ಯಗಳ ಸಿಎಂಗಳಾದ ಎಂ.ಕೆ. ಸ್ಟಾಲಿನ್, ನಿತೀಶ್ ಕುಮಾರ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್; ಉದ್ಧವ್ ಠಾಕ್ರೆ, ಅಖೀಲೇಶ್ ಯಾದವ್, ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ, ಸೀತಾರಾಂ ಯೆಚೂರಿ ಮುಂತಾದವರು ಸಾಕ್ಷಿಯಾದರು.
ಡಿಸಿಎಂ ಡಿ.ಕೆ.ಶಿವಕುಮಾರ ಆಗಮಿಸಿದ ಎಲ್ಲ ಗಣ್ಯರನ್ನು ಸ್ವಾಗತಿಸಿದರೆ, ಮಾತನಾಡಿದ ನೂತನ ಸಿಎಂ ಸಿದ್ದರಾಮಯ್ಯ, ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ಕರುನಾಡಿನ ಜನತೆಗೆ ಕೃತಜ್ಞತೆ ಹೇಳಿದರಲ್ಲದೇ ಇಂದೇ ಮೊದಲ ಸಭೆಯಲ್ಲೇ ಗ್ಯಾರಂಟಿ ಜಾರಿಗೊಳಿಸುವುದಾಗಿ ಹೇಳಿದರು.