ಹುಬ್ಬಳ್ಳಿ-ಧಾರವಾಡ ಸುದ್ದಿ
ವರಿಷ್ಠರ ಆಶೀರ್ವಾದದ ನಿರೀಕ್ಷೆಯಲ್ಲಿ ಇಮ್ರಾನ್;   ಕಳ್ಳಿಮನಿ ಕುಟುಂಬದ ಕುಡಿ ಪರಿಷತ್ ಟಿಕೆಟ್ ಆಕಾಂಕ್ಷಿ

ವರಿಷ್ಠರ ಆಶೀರ್ವಾದದ ನಿರೀಕ್ಷೆಯಲ್ಲಿ ಇಮ್ರಾನ್; ಕಳ್ಳಿಮನಿ ಕುಟುಂಬದ ಕುಡಿ ಪರಿಷತ್ ಟಿಕೆಟ್ ಆಕಾಂಕ್ಷಿ

ಹುಬ್ಬಳ್ಳಿ: ಅವಿಭಾಜ್ಯ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪರಿಷತ್ ಕ್ಷೇತ್ರದ ಚುನಾವಣೆ ವರ್ಷಾಂತ್ಯಕ್ಕೆ ನಡೆಯುವುದು ಬಹುತೇಕ ನಿಶ್ಚಿತವಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ಎರಡು ಡಜನ್‌ಗೂ ಹೆಚ್ಚು ಆಕಾಂಕ್ಷಿಗಳಿದ್ದು, ಅಲ್ಲದೇ ಇದೇ ಮೊದಲ ಬಾರಿಗೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂಬ ಕೂಗಿಗೂ ದೊಡ್ಡ ವೇಗ ಬಂದಿದೆ.


ಕಳೆದ ಹಲವು ದಶಕಗಳಿಂದ ಕಾಂಗ್ರೆಸ್ ನಿಷ್ಟೆಯನ್ನು ಬದಲಿಸದ ಧಾರವಾಡದ ಕಳ್ಳೀಮನಿ ಕುಟುಂಬದ ಕುಡಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷರಾಗಿ ಕ್ರೀಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿರುವ ಇಮ್ರಾನ್ ಕಳ್ಳಿಮನಿ ಸಹ ಪರಿಷತ್ ಚುನಾವಣೆಗೆ ಪ್ರಬಲ ಆಕಾಂಕ್ಷಿಯಾಗಿದ್ದು ಈಗಾಗಲೇ ಪಕ್ಷದ ವರಿಷ್ಠರಿಗೆ ಅರ್ಜಿ ಸಲ್ಲಿಸುವ ಮೂಲಕ ವಿಧಾನಸೌಧಕ್ಕೆ ಬಲಗಾಲಿಡುವ ಕನಸಿಗೆ ಮುನ್ನುಡಿ ಬರೆದಿದ್ದಾರೆ.


ವಿದ್ಯಾರ್ಥಿ ದೆಸೆಯಿಂದಲೂ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡ ಇಮ್ರಾನ್ ಕಳ್ಳಿಮನಿ ಮಾಜಿ ಸಚಿವ ವಿನಯ ಕುಲಕರ್ಣಿಯವರ ಗರಡಿಯಲ್ಲೇ ಪಕ್ಷದ ಚಟುವಟಿಕೆಯಲ್ಲಿ ಕಳೆದ ಒಂದೂವರೆ ದಶಕದಿಂದ ತೊಡಗಿಸಿಕೊಂಡಿದ್ದಾರೆ. ಇವರ ಅಜ್ಜ ಎಚ್.ಡಿ.ಕಳ್ಳಿಮನಿ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯಲ್ಲಿ ಮೂರು ಬಾರಿ ಮೇಯರ್ ಸ್ಥಾನ ಅಲಂಕರಿಸಿ ಜನಾನುರಾಗಿ,ಪ್ರಭಾವಿ ಧುರೀಣರಾಗಿದ್ದರಲ್ಲದೇ ತಂದೆ ಮಹ್ಮದ ಶಫಿ ಕಳ್ಳೀಮನಿ ಸುಮಾರು ಎರಡು ದಶಕಗಳ ಕಾಲ ಧಾರವಾಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದು ಸ್ವತಃ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿಯವರೇ ದೆಹಲಿಯಲ್ಲಿ ಕರೆಸಿಕೊಂಡು ಸನ್ಮಾನಿಸಿರುವುದು ಇವರ ಪ್ರಾಮಾಣಿಕ ಕಾರ್ಯವೈಖರಿ, ಪಕ್ಷ ಬದ್ಧತೆಗೆ ಹಿಡಿದ ಕೈಗನ್ನಡಿ.


ಈಗಾಗಲೇ ಪಕ್ಷದ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿರುವ ಇವರು, ಡಿ.ಸಿ.ಸಿ, ಕೆಪಿಸಿಸಿ, ಎಐಸಿಸಿ, ಹಾಗೂ ಸ್ಥಳೀಯನಾಯಕರು, ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದು, ಪಕ್ಷ ಸೂಚಿಸಿದ ಎಲ್ಲ ಕಾರ್ಯಕ್ರಮಗಳನ್ನು ವಾರ್ಡ ಹಾಗೂ ಬ್ಲಾಕ್ ಮಟ್ಟಕ್ಕೆ ವಿಸ್ತರಿಸಿ, ಅವುಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಸದ್ದಿಲ್ಲದೇ ಸಾಧನೆ ಮಾಡಿದ್ದಾರೆ.


ಹಾವೇರಿ, ಬಾಗಲಕೋಟ, ಯಲ್ಲಾಪೂರ, ಬೆಳಗಾವಿ ಅಲ್ಪಸಂಖ್ಯಾತರ ವಿಭಾಗದ ಉಸ್ತುವಾರಿ ಜವಾಬ್ದಾರಿಯನ್ನು ಸಮರ್ಥವಾಗಿ ನಿಬಾಯಿಸಿದ್ದು ಜಾರ್ಖಂಡ ವಿಧಾನಸಭೆಯ ಚುನಾವಣೆಯಲ್ಲಿ ರಾಂಚಿ ಕ್ಷೇತ್ರದ ವೀಕ್ಷಕನಾಗಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನಿಸಿದ್ದಾರಲ್ಲದೇ ಪ್ರಸಕ್ತ ಹಾನಗಲ್ ಉಪಸಮರಕ್ಕೂ ವೀಕ್ಷಕರಾಗಿ ನಿಯುಕ್ತಿಗೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಮರ್ಥ ನಾಯಕತ್ವಗುಣ, ಸಂಘಟನಾ ಕೌಶಲ್ಯ, ಪ್ರತಿಷ್ಠಿತ ಮನೆತನದ ಹಿನ್ನಲೆ, ಅಲ್ಲದೇ ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಯಾದ್ಯಂತ ಎಲ್ಲ ಸ್ತರದ ಮುಖಂಡರ ಜತೆ ಉತ್ತಮ ಸಂಪರ್ಕ ಹೊಂದಿರುವ ಕಳ್ಳೀಮನಿಯಂತಹ ಯುವಕರಿಗೆ ಪಕ್ಷ ಮಣೆ ಹಾಕಿದಲ್ಲಿ ಗೆಲುವು ನಿಶ್ಚಿತ ಎನ್ನುವಂತಹ ವಾತಾವರಣ ಮೇಲ್ನೋಟಕ್ಕೆ ಕಂಡು ಬರುತ್ತಿದೆಯಲ್ಲದೇ ಭವಿಷ್ಯದ ದೃಷ್ಟಿಯಿಂದಲೂ ಸಹಕಾರಿಯಾಗಲಿದೆ.

 

ಭವಿಷ್ಯದ ಭರವಸೆ

ಕಂಪ್ಯೂಟರ್ ಅಪ್ಲಿಕೇಶನ್ಸ್‌ದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾನವ ಸಂಪನ್ಮೂಲ ವಿಭಾಗದಲ್ಲಿ ನಿರುದ್ಯೋಗಿಗಳಿಗೆ ರಾಜ್ಯ, ಹೊರರಾಜ್ಯ ಸೇರಿದಂತೆ ದುಬೈ, ಸೌದಿ, ಕುವೈತ್ ಹಾಗೂ ಗಲ್ಫ್ ದೇಶದಲ್ಲಿ ಉದ್ಯೋಗ ಕೊಡಿಸಿದ ಹಿರಿಮೆ ಹೊಂದಿದ್ದು ಅಂತರ್‌ರಾಷ್ಟ್ರೀಯ ಮಟ್ಟದ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಯ ಸದಸ್ಯತ್ವ ಹೊಂದಿದ್ದಾರೆ.ಮಧ್ಯ ಪ್ರಾಚ್ಯ ರಾಷ್ಟ್ರಗಳಾದ ಸೌದಿ, ಕುವೈತ್, ಯುಎಇ ರಾಷ್ಟ್ರಗಳ ಯಂಗ್ ಲೀಡರ್ಸ ಫೋರಂನ ಸಕ್ರಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೇವಲ ಸಮುದಾಯಕ್ಕೆ ಮಾತ್ರ ಸಿಮೀತವಾಗದೆ, ಹಿಂದು, ಕ್ರೈಸ್ತ, ಹಾಗೂ ಇತರೆ ಸಮಾಜದ ಎಲ್ಲ ಜಾತಿ, ಜನಾಂಗ ಹಾಗೂ ಧರ್ಮದವರೊಂದಿಗೆ ಉತ್ತಮ ಒಡನಾಟ ಹೊಂದಿರುವ ಇಮ್ರಾನ್ ಸಮಾಜ ಸೇವೆ ಹಾಗೂ ರಾಜಕೀಯ ಎರಡಕ್ಕೂ ಸೈ ಎನ್ನಿಸುವಂತೆ ಕಾರ್ಯ ನಿರ್ವಹಿಸುತ್ತಿದ್ದು ಭವಿಷ್ಯದ ಭರವಸೆಯಾಗುವ ಎಲ್ಲ ಲಕ್ಷಣಗಳನ್ನು ಹೊಂದಿದ್ದಾರೆ.

 

ಸಾಮಾಜಿಕ ಸೇವೆ

ತಮ್ಮದೇ ಏಮ್ಸ್ ಪ್ರತಿಷ್ಠಾನದ ಮೂಲಕ ಸುತ್ತಮುತ್ತಲಿನ ಜನತೆಯ ಆರೋಗ್ಯವನ್ನು ಹಾಗೂ ನಿರುದ್ಯೋಗ ಸಮಸ್ಯೆಯನ್ನು ಲಕ್ಷ್ಯದಲ್ಲಿಟ್ಟುಕೊಂಡು ಆರೋಗ್ಯ ಮೇಳ, ಉದ್ಯೋಗ ಮೇಳವನ್ನು ಸಂಘಟಿಸಿದ್ದಾರಲ್ಲದೇ ನಿರುದ್ಯೋಗಿಗಳಿಗೆ ನಿರಂತರವಾಗಿ ಸಂಘಟಿಸುವ ಮೂಲಕ ಯುವಕರ, ಹಿಂದುಳಿದವರ, ಅಲ್ಪಸಂಖ್ಯಾತರ ಹಾಗೂ ದಲಿತರ ಮತ್ತು ಶೋಷಿತರ ಧ್ವನಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಅಕ್ಷರಶಃ ಆಪತ್ಪಾಂಧವ

ನಿವೇಶನ ರಹಿತರ ಹಾಗೂ ನಿರಾಶ್ರಿತರ ಹಕ್ಕುಗಳಿಗಾಗಿ ಹತ್ತು ಹಲವು ಹೋರಾಟ ನಡೆಸಿ ನ್ಯಾಯದೊರಕಸಿಕೊಡಲು ಪ್ರಾಮಾಣಿಕವಾಗಿ ಶ್ರಮಿಸಿರುವ ಇಮ್ರಾನ್ ಬಡವರಿಗೆ ಕೊವಿಡ್ ಸಂಕಷ್ಟದಲ್ಲಿ ಹಾಗೂ ಪ್ರವಾಹದ ಸಂದರ್ಭದಲ್ಲಿ ಉಚಿತ ಪಡಿತರ ಪದಾರ್ಥಗಳನ್ನು ಹಂಚುವ ಮೂಲಕ ಅಕ್ಷರಶಃ ಆಪತ್ಪಾಂಧವರಾಗಿ ಹೊರ ಹೊಮ್ಮಿದ್ದಾರೆ.

ಪಕ್ಷದಲ್ಲಿ ಕಳೆದ ಒಂದೂವರೆ ದಶಕದಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದೇನಲ್ಲದೇ ರಚನಾತ್ಮಕ ಕಾರ್ಯಗಳ ಮೂಲಕ ಜನತೆಯ ಮನೆ ಮತ್ತು ಮನಗಳನ್ನು ಮುಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡುತ್ತ ಬಂದಿದ್ದು ಪಕ್ಷದ ವರಿಷ್ಠರು ಅವಕಾಶದ ಆಶೀರ್ವಾದ ನೀಡಿದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಗೆಲ್ಲುವ ವಿಶ್ವಾಸವಿದೆ.

ಇಮ್ರಾನ್ ಕಳ್ಳಿಮನಿ ,ಪರಿಷತ್ ಟಿಕೆಟ್ ಆಕಾಂಕ್ಷಿ

administrator

Related Articles

Leave a Reply

Your email address will not be published. Required fields are marked *