ಸೆಂಟ್ರಲ್ ಕ್ಷೇತ್ರಕ್ಕೆ ಕೇಂದ್ರ ಸಚಿವ ಜೋಶಿ ಹೆಸರು
ಹುಬ್ಬಳ್ಳಿ: ಮುಂಬರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬೆಂಗಳೂರಿನಲ್ಲಿ ಬಿಜೆಪಿ ಕೋರ್ ಕಮೀಟಿ ನಡೆದಿರುವಾಗಲೇ ಬಿಜೆಪಿಯ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಅರುಣ ಸಿಂಗ್ ಅವರ ಅಂಕಿತವುಳ್ಳ ನೂರು ಅಭ್ಯರ್ಥಿಗಳ ಪಟ್ಟಿಯೊಂದು ಇಂದು ಬಿಡುಗಡೆಗೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಲಾರಂಬಿಸಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇಂದು ರಾತ್ರಿಯವರೆಗೂ ಕೋರ್ ಕಮಿಟಿ ಸಭೆ ನಡೆಯಲಿದ್ದು ನಾಳೆಯವರೆಗೆ ಅಂತಿಮ ತೀರ್ಮಾನ ಮಾಡಿ ದಿಲ್ಲಿಗೆ ಪಟ್ಟಿ ಒಯ್ಯಲಿದ್ದು ದಿ.9ರಂದು ಅಥವಾ 10ರ ಬೆಳಿಗ್ಗೆ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದು ಈಗ ಹರಿದಾಡುತ್ತಿರುವ ಪಟ್ಟಿ ನಕಲಿಯಾಗಿದೆ ಎಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಸಂಜೆ ದರ್ಪಣದೊಂದಿಗೆ ಮಾತನಾಡುತ್ತ ಹೇಳಿದ್ದಾರೆ.
ನೂರು ಜನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು ಅಚ್ಚರಿಯ ಅಂಶವೆಂದರೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪ್ರತಿನಿಧಿಸುವ ಹು.ಧಾ.ಸೆಂಟ್ರಲ್ ಕ್ಷೇತ್ರದಿಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭ್ಯರ್ಥಿ ಎನ್ನಲಾಗಿದ್ದು ಅಲ್ಲದೇ ಹು.ಧಾ.ಪಶ್ಚಿಮದಿಂದ ಅರವಿಂದ ಬೆಲ್ಲದ, ನವಲಗುಂದದಿಂದ ಶಂಕರ ಪಾಟೀಲ ಮುನೇನಕೊಪ್ಪ, ಧಾರವಾಡ ಗ್ರಾಮೀಣದಿಂದ ಅಮೃತ ದೇಸಾಯಿ, ಹಾಗೂ ಕಲಘಟಗಿಯಿಂದ ಸಿ.ಎಂ.ನಿಂಬಣ್ಣವರ ಅವರನ್ನು ಅಂತಿಮಗೊಳಿಸಲಾಗಿದೆ.
ಅಲ್ಲದೇ ಸಚಿವ ಸಿ.ಸಿ.ಪಾಟೀಲ ಗದಗ ಕ್ಷೇತ್ರದ ಅಭ್ಯರ್ಥಿಯಾಗಿದ್ದು, ಅನಿಲ ಮೆಣಸಿನಕಾಯಿ ಅವರಿಗೆ ನರಗುಂದ ಅಭ್ಯರ್ಥಿಯನ್ನಾಗಿ ತೋರಿಸಲಾಗಿದೆಯಲ್ಲದೇ ನಿಪ್ಪಾಣಿಯಿಂದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಅವರ ಪತ್ನಿ ಹಾಲಿ ಸಚಿವೆ ಶಶಿಕಲಾ ಜೊಲ್ಲೆಗೆ ಚಿಕ್ಕೋಡಿ ಸದಲಗಾ ಟಿಕೆಟ್ ನೀಡಲಾಗಿದೆ.
ಹಾವೇರಿ ಜಿಲ್ಲೆಯ ಎರಡು ಕ್ಷೇತ್ರಗಳಿಗೆ ಮಾತ್ರ ಘೋಷಿಸಲಾಗಿದ್ದು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಕ್ಷೇತ್ರ ಶಿಗ್ಗಾವಿ ಇಲ್ಲದಿರುವುದು ಸಾಕಷ್ಟು ಸಂಶಯಕ್ಕೆ ಕಾರಣವಾಗಿದೆಯಲ್ಲದೇ ಅವರನ್ನು ದಾವಣಗೆರೆ ದಕ್ಷಿಣ ಎಂದು ತೋರಿಸಲಾಗಿದೆ. ಕಾರ್ಕಳದಿಂದ ಪ್ರಮೋದ ಮುತಾಲಿಕಗೆ ಮಣೆ ಹಾಕಿದ್ದು, ಸುನೀಲಕುಮಾರಗೆ ಉಡುಪಿ ತೋರಿಸಲಾಗಿದೆ. ಅಲ್ಲದೇ ಮಂಗಳೂರು ಉತ್ತರದಿಂದ ಹಾಲಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಅಂತಿಮಗೊಳಿಸಲಾಗಿದೆ ಎಂದು ಹೇಳಲಾಗಿದೆ.
ಬಿಜೆಪಿಯ ಲೆಟರ್ ಹೆಡ್ನಲ್ಲಿಯೇ ಅಧಿಕೃತವನ್ನು ನಾಚುವಂತೆ ಪಟ್ಟಿ ಸಿದ್ದಪಡಿಸಿದ್ದು, ಒಟ್ಟಿನಲ್ಲಿ ನಕಲಿ ಪಟ್ಟಿ ಯಾರು ತಯಾರು ಮಾಡಿದ್ದಾರೆಂಬುದು ಕುತೂಹಲಕ್ಕೆ ಕಾರಣವಾಗಿದೆ. ಇಂದು ರಾತ್ರಿಯವರೆಗೂ ಕೋರ್ ಕಮಿಟಿ ಸಭೆ ನಡೆಯಲಿದ್ದು ನಾಳೆಯವರೆಗೆ ಅಂತಿಮ ತೀರ್ಮಾನ ಮಾಡಿ ದಿಲ್ಲಿಗೆ ಪಟ್ಟಿ ಒಯ್ಯಲಿದ್ದು ದಿ. 9ರಂದು ಅಥವಾ 10ರ ಬೆಳಿಗ್ಗೆ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದು ಈಗ ಹರಿದಾಡುತ್ತಿರುವ ಪಟ್ಟಿ ನಕಲಿಯಾಗಿದೆ ಎಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಸಂಜೆ ದರ್ಪಣದೊಂದಿಗೆ ಮಾತನಾಡುತ್ತ ಹೇಳಿದ್ದಾರೆ.
ನೂರಕ್ಕೆ ನೂರರಷ್ಟು ಯಾರೋ ಕಿಡಿಗೇಡಿಗಳು ಮಾಡಿದ ಕೃತ್ಯ .ಕೋರ ಕಮೀಟಿ ಸಭೆ ನಡೆದಿರುವಾಗ ಬಿಡುಗಡೆ ಮಾಡುವ ಪ್ರಶ್ನೆಯೆ ಬರದು. ನಮ್ಮ ಅಧಿಕೃತ ಅಭ್ಯರ್ಥಿಗಳ ಪಟ್ಟಿ ದಿ.9 ಅಥವಾ 10ರಂದು ಬಿಡುಗಡೆಯಾಗಲಿದೆ.
ಲಿಂಗರಾಜ ಪಾಟೀಲ
ಶಿಸ್ತು ಸಮಿತಿ ಅಧ್ಯಕ್ಷರು