ಹುಬ್ಬಳ್ಳಿ : ಅವಿಭಾಜ್ಯ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆಯಲ್ಲಿ ದಾಖಲೆ ಮತ ಪಡೆಯುವ ಮೂಲಕ ಜಯಭೇರಿ ಬಾರಿಸಿರುವ ಸಲೀಮ್ ಅಹ್ಮದ ಹೊಸ ಇತಿಹಾಸ ಸೃಷ್ಟಿಸಿ ಮೂರನೇ ಬಾರಿಗೆ ಪರಿಷತ್‌ಗೆ ಬಲಗಾಲಿಡಲಿದ್ದಾರೆ.
ಹಾಲಿ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ ಅವರು ಮೊನ್ನೆ ನಡೆದ ಚುನಾವಣೆಯಲ್ಲಿ ಸ್ಪರ್ಧೆಗಿಳಿಯದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಮುಂದೆ ಯಾರು ಎಂಬುದರ ಬಗ್ಗೆ ಲೆಕ್ಕಾಚಾರ, ಲಾಬಿ ಈಗಾಗಲೇ ಆರಂಭವಾಗಿದೆ.
ಮುಂದಿನ ಪರಿಷತ್ ಪ್ರತಿಪಕ್ಷ ಸ್ಥಾನಕ್ಕೆ ಈಗಾಗಲೇ ಬಿ.ಕೆ.ಹರಿಪ್ರಸಾದ, ಸಿ.ಎಂ.ಇಬ್ರಾಹಿಂ, ಆರ್.ಬಿ.ತಿಮ್ಮಾಪುರ ಮುಂತಾದವರ ಹೆಸರುಗಳು ಚಲಾವಣೆಯಲ್ಲಿದ್ದು ಈಗ ಇತ್ತೀಚಿನ ಚುನಾವಣಾ ಫಲಿತಾಂಶದ ನಂತರ ಸಲೀಮ್ ಹೆಸರು ಸೇರ್ಪಡೆಯಾಗಿದೆ.
ರಾಜ್ಯ ಅಧ್ಯಕ್ಷ ( ಒಕ್ಕಲಿಗ), ವಿಪಕ್ಷ ನಾಯಕ ಸ್ಥಾನ ( ಕುರುಬ ) ಎರಡೂ ಲಿಂಗಾಯತೇತರ ಪ್ರಮುಖ ಸಮುದಾಯಗಳಿಗೆ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠರು ಪರಿಷತ್ ಚುಕ್ಕಾಣಿಯನ್ನು ಯಾರಿಗೆ ನೀಡುವರೆಂಬುದು ಕುತೂಹಲ ಕೆರಳಿಸಿದೆ.
ಅಲ್ಪಸಂಖ್ಯಾತರಿಗೆ ಈ ಸ್ಥಾನ ನೀಡಬೇಕೆಂಬ ವಿಚಾರ ಬಂದಲ್ಲಿ ಇಬ್ರಾಹಿಂ ಮತ್ತು ಸಲೀಮ್ ಹೆಸರು ಮುಂಚೂಣಿಗೆ ಬರಲಿವೆ.
ಇಬ್ರಾಹಿಂ ಕೆಲ ಸಮಯದಿಂದ ಜೆಡಿಎಸ್‌ಗೆ ಜಿಗಿಯುತ್ತಾರೆಂಬ ವದಂತಿಗಳು ಹಬ್ಬಿತ್ತಾದರೂ ,’ತೆನೆ ಹೊತ್ತ ಮಹಿಳೆ’ಯ ಭವಿಷ್ಯ ಡೋಲಾಯಮಾನವಾಗಿರುವುದನ್ನು ಹಾನಗಲ್,ಸಿಂಧಗಿ ಉಪಚುನಾವಣೆ ಹಾಗೂ ಇತ್ತೀಚಿನ ಪರಿಷತ್ ಚುನಾವಣೆ ಫಲಿತಾಂಶದ ನಂತರ ಅಂತಹ ಸಾಹಸದಿಂದ ಹಿಂದೆ ಸರಿದಿದ್ದಾರೆನ್ನಲಾಗಿದೆ. ಪರಿಷತ್ ಪ್ರಮುಖ ಜವಾಬ್ದಾರಿ ನೀಡುವಂತೆ ಇತ್ತೀಚೆಗೆ ಸಿದ್ದರಾಮಯ್ಯ ಅವರನ್ನು ಕಂಡು ಒತ್ತಾಯಿಸಿದ್ದಾರೆನ್ನಲಾಗಿದೆ. ಹಿರಿತನ ಅಲ್ಲದೇ ಪರಿಣಾಮಕಾರಿಯಾಗಿ ನಿರ್ವಹಿಸಬಲ್ಲ ಸಾಮರ್ಥ್ಯ ಅವರಿಗಿದ್ದರೂ ಇತ್ತೀಚಿನ ಚುನಾವಣೆಗಳಲ್ಲಿ ಜವಾಬ್ದಾರಿಯಿಂದ ವಿಮುಖರಾಗಿದ್ದು ಹಿನ್ನೆಡೆಯಾಗುವ,ಅಲ್ಲದೇ ಪಕ್ಷದ ಕೆಲವರೇ ಅಪಸ್ವರ ಎತ್ತುವ ಸಾಧ್ಯತೆಗಳಿವೆ.
ಸಲೀಮ್ ಅಹ್ಮದ ವಿಚಾರಕ್ಕೆ ಬಂದಲ್ಲಿ ಅವರ ಪಕ್ಷ ನಿಷ್ಠೆ, ಎರಡು ಬಾರಿ ಮೇಲ್ಮನೆ ಸದಸ್ಯರಾಗಿ ಅಲ್ಲದೇ ಮುಖ್ಯ ಸಚೇತಕರಾಗಿ ಅನುಭವ ಅಲ್ಲದೇ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಹಾನಗಲ್‌ನಲ್ಲಿ ವಾಸ್ತವ್ಯ ಹೂಡಿ ಶ್ರೀನಿವಾಸ ಮಾನೆಯವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಲೆಕ್ಕಕ್ಕೆ ಬರಲಿದೆ ಅಲ್ಲದೇ ಅವರ ಎಲ್ಲರನ್ನು ಒಂದುಗೂಡಿಸಿಕೊಂಡು ಹೋಗುವ ಮನೋಭಾವ ಪ್ಲಸ್ ಆದರೂ ಅಚ್ಚರಿಯಿಲ್ಲವಾಗಿದೆ.
ರಾಜ್ಯಸಭಾ ಸದಸ್ಯರಾಗಿ ಅನುಭವ ಹೊಂದಿರುವ ಹರಿಪ್ರಸಾದ ಅಲ್ಲದೇ ಪರಿಶಿಷ್ಠ ಸಮುದಾಯದವರಾದ ಮಾಜಿ ಸಚಿವ ಆರ್ .ಬಿ.ತಿಮ್ಮಾಪುರ ಹೆಸರುಗಳು ಪರಿಶೀಲನೆಯಲ್ಲಿವೆ. 2023ರಲ್ಲಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಬರುವ ಜನವರಿಯಲ್ಲೇ ಈ ನೇಮಕವಾಗುವ ಸಾಧ್ಯತೆಗಳಿವೆ.