ಹುಬ್ಬಳ್ಳಿ: ಅವಿಭಾಜ್ಯ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಪರಿಷತ್‌ಗೆ ವರ್ಷಾಂತ್ಯಕ್ಕೆ ಚುನಾವಣೆ ನಡೆಯಲಿದ್ದು ಈಗಾಗಲೇ ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಾಳೆಯದಲ್ಲೂ ತೀವೃ ಪೈಪೋಟಿ ಆರಂಭವಾಗಿದೆ.
ಕಳೆದ ಬಾರಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಶ್ರೀನಿವಾಸ ಮಾನೆ ಈಗಾಗಲೇ ತಾವು ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರಲ್ಲದೇ ಹಾನಗಲ್ ಉಪಚುನಾವಣೆಯಲ್ಲಿ ಹುರಿಯಾಳಾಗಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.ತನ್ಮಧ್ಯೆ ಕೈ ಪಾಳೆಯದಲ್ಲಿ ಮೂರು ಜಿಲ್ಲೆಗಳಲ್ಲಿ ಸೇರಿ ಆಕಾಂಕ್ಷಿಗಳ ಸಂಖ್ಯೆ ೩೦ ದಾಟಿದ್ದು, ಯಾರು ಎಂಬ ಪ್ರಶ್ನೆ ಪಕ್ಷದ ವರಿಷ್ಠರಿಗೆ ನುಂಗಲಾರದ ತುತ್ತಾಗಿದೆ.
ಅವಿಭಾಜ್ಯ ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ಹಳೆಯ ಹುಬ್ಬಳ್ಳಿ ಶಹರ( ಪ್ರಸಕ್ತ ಹು.ಧಾ.ಪೂರ್ವ) ಶಿಗ್ಗಾವಿಗಳಲ್ಲಿ ಬಹುತೇಕ ಅಲ್ಪಸಂಖ್ಯಾತರ ಪ್ರಾತಿನಿಧ್ಯ ನಿಕ್ಕಿ ಎನ್ನುವ ವಾತಾವರಣವಿತ್ತು. ಬದಲಾದ ಕ್ಷೇತ್ರ ವಿಂಗಡಣೆಯ ಸಮೀಕರಣದಲ್ಲಿ ಹುಬ್ಬಳ್ಳಿ ಶಹರ ಪರಿಶಿಷ್ಟರಿಗೆ ಮೀಸಲಾದರೆ ಶಿಗ್ಗಾಂವ ಪಾಲಿಗಿದ್ದ ಕುಂದಗೋಳ ತಾಲೂಕಿನ ಹಳ್ಳಿಗಳು ದೂರಾದವು.ಕಾರಣ ಸಾಮಾಜಿಕ ನ್ಯಾಯದಡಿ ಕಾಂಗ್ರೆಸ್ ಕನಿಷ್ಠ ಎರಡು ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಮೂಲಕ ಪ್ರಾತಿನಿಧ್ಯ ನೀಡುತ್ತ ಬಂದರೂ ಗೆಲುವು ಮರೀಚಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವಿಭಾಜ್ಯ ಧಾರವಾಡ ಜಿಲ್ಲೆಯ ಪರಿಷತ್ ಸ್ಥಾನ ಅಲ್ಪಸಂಖ್ಯಾತರಿಗೆ ನೀಡಿ ಆಯ್ಕೆ ಮಾಡಿದಲ್ಲಿ ಅವರ ’ಧ್ವನಿ’ಯೊಂದು ವಿಧಾನಸೌಧದಲ್ಲಿ ಇರಬೇಕೆಂಬ ಮಾತು ಮುನ್ನೆಲೆಗೆ ಬಂದಿದೆ.
ಕಾಂಗ್ರೆಸ್ ಪಾಳೆಯದಲ್ಲೂ ಸಹ ಈ ವಾದಕ್ಕೆ ಪುಷ್ಠಿ ನೀಡುವಂತಹ ವಾತಾವರಣವಿದ್ದು, ಅವಿಭಾಜ್ಯ ಧಾರವಾಡ ಜಿಲ್ಲೆಯಲ್ಲಿ ಅನೇಕ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರೇ ನಿರ್ಣಾಯಕ ಪಾತ್ರ ವಹಿಸುವುದರಿಂದ ಅವರಿಗೆ ಮೇಲ್ಮನೆಯ ಅವಕಾಶ ನೀಡಿದಲ್ಲಿ ಇದುವರೆಗೆ ಪಾಲಿಸಿಕೊಂಡು ಬಂದ ಸಾಮಾಜಿಕ ನ್ಯಾಯ ತತ್ವದಲ್ಲಿ ಬದಲಾವಣೆ ಮಾಡುವ ಚಿಂತನೆಗೆ ಮುನ್ನುಡಿ ಬರೆವ ಯತ್ನ ಸಹ ತೆರೆಯ ಮರೆಯಲ್ಲಿ ನಡೆದಿದೆ.
ಕಳೆದ ಒಂದು ದಶಕದಿಂದೀಚೆಗೆ ಅವಿಭಾಜ್ಯ ಧಾರವಾಡ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಪ್ರಾತಿನಿಧ್ಯವೇ ಇಲ್ಲದಂತಾಗಿದ್ದು ಈ ಬಾರಿ ಅಲ್ಪಸಂಖ್ಯಾತರಿಗೆ ಹಿರಿತನ, ಹಿನ್ನೆಲೆ, ಪಕ್ಷದ ಸೇವೆ ಸಲ್ಲಿಸಿ ಅವಕಾಶ ನೀಡಬೇಕೆಂಬ ಮಾತಿಗೆ ಪುಷ್ಠಿ ದೊರೆಯುವ ಎಲ್ಲ ಲಕ್ಷಣಗಳು ಇವೆ.
ಅವಳಿನಗರದ ವ್ಯಾಪ್ತಿಯ ಸುಮಾರು ೨೦ಕ್ಕೂ ಹೆಚ್ಚು ಅಲ್ಪಸಂಖ್ಯಾತ ಸಮುದಾಯದ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಗದಗ, ಹಾವೇರಿ ಸೇರಿ ಆ ಸಂಖ್ಯೆ ೨೫ ದಾಟುವ ಸಾಧ್ಯತೆಗಳಿವೆ.
ಮುಸ್ಲಿಂ ಸಮುದಾಯದ ಪ್ರಾತಿನಿಧಿಕೆ ಸಂಸ್ಥೆ ಹುಬ್ಬಳ್ಳಿ ಅಂಜುಮನ್ ಸಂಸ್ಥೆಯ ಚುಕ್ಕಾಣಿ ಹಿಡಿದರೆ ವಿಧಾನಸೌಧಕ್ಕೆ ರಹದಾರಿಯಾದಂತೆ ಎಂಬ ಮಾತು ಹಿಂದೆ ನಿಜವಾಗಿತ್ತು. ಅದರಂತೆ ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಜಬ್ಬಾರ ಖಾನ ಹೊನ್ನಳ್ಳಿ, ಕಾಲೇಬುಡ್ಡೆ ಸಹಿತ ಅನೇಕರ ವಿಚಾರದಲ್ಲಿ ನಿಜವಾಗಿದೆ. ಹಿಂಡಸಗೇರಿ, ಹೊನ್ನಳ್ಳಿ ಇಬ್ಬರೂ ಚುನಾವಣೆ ಗೆದ್ದು ಸಚಿವ ಸ್ಥಾನವನ್ನೂ ಅಲಂಕರಿಸಿದ್ದಾರೆ. ಕಾಲೇಬುಡ್ಡೆ ಪರಿಷತ್‌ಗೆ ಬಲಗಾಲಿಟ್ಟಿದ್ದಾರೆ.
ಹಿಂದೆ ಶಿಗ್ಗಾವಿ ಕ್ಷೇತ್ರದಲ್ಲೂ ಒಂದು ಕಾಲದಲ್ಲಿ ಕೈ ನಿಂದ ಸ್ಪರ್ಧೆಗಿಳಿದ ಅಲ್ಪಸಂಖ್ಯಾತರ ಗೆಲುವು ನಿಚ್ಛಳವಾಗಿದ್ದರೂ ಕಳೆದ ಕೆಲ ವರ್ಷಗಳಲ್ಲಿ ಎರಡು ಒಮ್ಮೆ ಅಜಂಫೀರ್ ಖಾದ್ರಿ ಗೆಲುವು ಸಾದಿಸಿದ್ದು ಬಿಟ್ಟರೆ, ಉಳಿದಂತೆ ವಿಪಕ್ಷಗಳ ಅಭ್ಯರ್ಥಿಗಳೇ ವಿಜಯಿಯಾಗಿದ್ದಾರೆ. ಹು.ಧಾ.ಪಶ್ಚಿಮದಲ್ಲೂ ಅಲ್ಪಸಂಖ್ಯಾತರ ಫಾರ್ಮುಲಾ ಗೆಲುವಿನ ಹಳಿಗೆ ಬರುತ್ತಿಲ್ಲವಾಗಿದ್ದು ಈ ಬಾರಿ ಪರಿಷತ್ ಟಿಕೆಟ್ ಅಲ್ಪಸಂಖ್ಯಾತರಿಗೆ ನೀಡಬೇಕೆಂಬ ಕೂಗು ಜೋರಾಗಿದೆ.
ಹಿರಿಯ ಸಹಕಾರಿ ಮುಖಂಡ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಹುಬ್ಬಳ್ಳಿ ಅಂಜುಮನ್ ಇಸ್ಲಾಂ ಅಧ್ಯಕ್ಷ ಮಹ್ಮದ ಯೂಸೂಪ್ ಸವಣೂರ, ಪಶ್ಚಿಮ ಕ್ಷೇತ್ರದ ಪ್ರಭಾವಿ ಮುಖಂಡ ಇಸ್ಮಾಯಿಲ್‌ತಮಾಟಗಾರ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ, ಅವಳಿನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಪಾಲಿಕೆಯ ಹಿರಿಯ ಸದಸ್ಯರಾಗಿದ್ದ ಅಲ್ತಾಫ್ ನವಾಜ ಕಿತ್ತೂರ, ಮಾಜಿ ಸಂಸದ ಪ್ರೋ.ಐ.ಜಿ.ಸನದಿ, ಶಾಕೀರ ಸನದಿ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಸಿ.ಎಸ್.ಮೆಹಬೂಬಭಾಷಾ, ಮುಂತಾದವರ ಹೆಸರು ಚಾಲ್ತಿಗೆ ಬಂದಿದೆಯಲ್ಲದೇ ಇನ್ನೂ ಅನೇಕ ಹೊಸಬರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಅಲ್ಪಸಂಖ್ಯಾತ ಸಮುದಾಯದಲ್ಲಿ ೨೦ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದರೂ ಅಂತಿಮವಾಗಿ ೪-೫ ಜನರ ನಡುವೆ ಪೈಪೋಟಿಯಾಗುವ ಲಕ್ಷಣಗಳಿವೆ. ಮಾಜಿ ಸಚಿವ ಎ.ಎಂ.ಹಿಂಡಸಗೇರಿ ಅವರ ಹಿರಿತನದ ಮುಂದೆ ಉಳಿದವರು ಲೆಕ್ಕಕ್ಕೆ ಬರುವ ಸಾಧ್ಯತೆ ಇಲ್ಲವಾಗಿದ್ದು, ಈಗಾಗಲೇ ಇದೊಂದು ಅವಕಾಶ ನೀಡಬೇಕೆಂದು ವಿನಂತಿಸಿದ್ದಾರೆ. ಹುಬ್ಬಳ್ಳಿ ಅಂಜುಮನ್ ಅಧ್ಯಕ್ಷ ಮಹ್ಮದ ಯೂಸೂಪ್ ಸವಣೂರ ಸಹ ಕಳೆದ ೨ ದಶಕಗಳಿಂದ ಪಕ್ಷದಲ್ಲಿದ್ದು ಸದ್ದಿಲ್ಲದೇ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಪಶ್ಚಿಮ ಕ್ಷೇತ್ರದ ಪ್ರಭಾವಿ ಮುಖಂಡ ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ತಮ್ಮ ಕ್ಷೇತ್ರದಲ್ಲಿ ಕೈ ಪಾಳೆಯಕ್ಕೆ ದೊಡ್ಡ ಶಕ್ತಿ ತಂದುಕೊಟ್ಟಿರುವ ಇಸ್ಮಾಯಿಲ್ ತಮಾಟಗಾರ ಸಹಿತ ಅನೇಕರಿದ್ದಾರೆ.
ಪ್ರಸಕ್ತ ಬದಲಾದ ಸ್ಥಿತಿಯಲ್ಲಿ ಅಲ್ಪಸಂಖ್ಯಾತರ ಪರಿಷತ್ ಟಿಕೆಟ್ ಕೂಗಿಗೆ ಕಾಂಗ್ರೆಸ್ ಪಕ್ಷ ಸ್ಪಂದಿಸುವ ಸಾಧ್ಯತೆಗಳು ದಟ್ಟವಾಗಿವೆ.ಆದರೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಒಮ್ಮತವಾಗಿ ಯಾರಿಗೆ ಮಣೆ ಹಾಕುವರೆಂಬುದು ತೀವ್ರ ಕುತೂಹಲ ಕೆರಳಿಸಿದೆ.
ಉಳಿದವರದ್ದೂ ಪೈಪೋಟಿ
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇಬ್ಬರನ್ನು ಆಯ್ಕೆ ಮಾಡಬೇಕಿದ್ದು ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಎರಡೂ ಪಕ್ಷಗಳು ಸಮಬಲವನ್ನು ಹೊಂದಿದ್ದು, ಹಾಗಾಗಿ ತಲಾ ಒಬ್ಬರು ಅಭ್ಯರ್ಥಿಗಳನ್ನು ಹಾಕಿದಲ್ಲಿ ಅವಿರೋಧ ಆಯ್ಕೆಯಾಗುವ ಸಾಧ್ಯತೆಗಳಿವೆ.ಅಲ್ಪಸಂಖ್ಯಾತ ಹೊರತು ಪಡಿಸಿ ಮಾಜಿ ಪರಿಷತ್ ಸಭಾಪತಿ ವೀರಣ್ಣ ಮತ್ತಿಗಟ್ಟಿ ಸಹೋದರ ಶರಣಪ್ಪಕೊಟಗಿ ಅರವಿಂದಕಟಗಿ, ಸದಾನಂದ ಡಂಗನವರ, ಶಿರಹಟ್ಟಿ ಮಾಜಿ ಶಾಸಕ ಗಡ್ಡದೇವರಮಠರ ಪುತ್ರ ಆನಂದ ಗಡ್ಡದೇವರಮಠ, ಡಿ.ಆರ್.ಪಾಟೀಲರ ಪುತ್ರ ಸಚಿನ್ ಪಾಟೀಲ, ಮಾಜಿ ಸಚಿವ ಬಸವರಾಜ ಶಿವಣ್ಣವರ, ಬ್ಯಾಡಗಿಯ ಎಸ್.ಆರ್.ಪಾಟೀಲ, ಎಂ.ಎಂ.ಹಿರೇಮಠ ಮುಂತಾದವರು ಆಕಾಂಕ್ಷಿಗಳಾಗಿದ್ದು ತಮ್ಮ ಗಾಡ್‌ಫಾದರ್‌ಗಳ ಮೂಲಕ ಯತ್ನಕ್ಕೆ ಮುಂದಾಗಿದ್ದಾರೆ.
ಬಿಜೆಪಿಯದ್ದು ಕಾಯ್ದು ನೋಡುವ ತಂತ್ರ
ಬಿಜೆಪಿಯಲ್ಲೂ ಈ ಬಾರಿ ಹೊಸ ಮುಖಗಳಿಗೆ ಮಣೆ ಹಾಕುವರೆಂಬ ಮಾತು ಕೇಳಿ ಬರುತ್ತಿದ್ದರೂ ಹಾಲಿ ಸದಸ್ಯ ಪ್ರದೀಪ ಶೆಟ್ಟರ್ ಏಕಾಏಕಿ ಬದಲಾವಣೆ ಮಾಡಲಾರರು ಎಂಬ ಮಾತು ಕೇಳಿ ಬರುತ್ತಿದೆ. ಹಿಂದೆ ಪರಿಷತ್ ಸದಸ್ಯರಾಗಿದ್ದ ಶಿವರಾಜ ಸಜ್ಜನರ್ ಕೂಡ್ ಪರಿಷತ್ ಮೇಲೆ ಕಣ್ಣಿಟ್ಟಿದ್ದರು.ಅವರೀಗ ಹಾನಗಲ್ ಉಮೇದುವಾರರಾಗಿದ್ದು, ಲಿಂಗರಾಜ ಪಾಟೀಲ ಇನ್ನಿತರರು ಯತ್ನ ನಡೆಸಿದ್ದಾರೆ.ಅಲ್ಲದೇ ಬಿಜೆಪಿಯಲ್ಲಿ ಮೊದಲ ಬಾರಿಗೆ ಹಿಂದುಳಿದ ವರ್ಗಗಳಿಗೆ ಟಿಕೆಟ್ ನೀಡಬೇಕೆಂಬ ಕೂಗು ಕೇಳಿ ಬಂದರೂ ಅಚ್ಚರಿಯಿಲ್ಲ. ಕೇಸರಿ ಪಡೆ ಕಾಂಗ್ರೆಸ್ ನಡೆಯನ್ನು ಅವಲೋಕಿಸುತ್ತಿದ್ದು ಒಬ್ಬರನ್ನು ಕಣಕ್ಕಿಳಿಸಬೇಕೋ, ಇಬ್ಬರನ್ನು ಹುರಿಯಾಳಾಗಿಸಬೇಕೆಂಬ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲವಾಗಿದ್ದು ಕಾಂಗ್ರೆಸ್ ಅಲ್ಪಸಂಖ್ಯಾತರೊಬ್ಬರನ್ನು ಕಣಕ್ಕಿಳಿಸಿದಲ್ಲಿ ಇಬ್ಬರನ್ನು ಇಳಿಸುವ ಬಗೆಗೆ ಚಿಂತನೆ ನಡೆಸಿದೆಯೆಂದು ನಂಬಲರ್ಹ ಮೂಲಗಳು ಹೇಳಿವೆ.
ಗಾಳಿಪಟ – ತೆನೆ ಮಗ್ಗುಲ ಮುಳ್ಳು
ಹುಬ್ಬಳ್ಳಿ ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಈಗಾಗಲೇ ’ಗಾಳಿ ಪಟ’ ಮಗ್ಗುಲ ಮುಳ್ಳಾಗಿ ಪರಿಣಮಿಸಿದ್ದು, ೧೮ರಿಂದ ೩೫ ವರ್ಷದೊಳಗಿನ ಯುವಕರಲ್ಲಿ ಓವೈಸಿಯ ಕ್ರೇಜ್ ಹೆಚ್ಚುತ್ತಿರುವುದು, ಅಲ್ಲದೇ ಇನ್ನೊಂದೆಡೆ ಜೆಡಿಎಸ್ ಸಹ ಮೈನಾರಿಟಿ ದಾಳ ಉರುಳಿಸುತ್ತಿರುವುದರಿಂದ ಅಲ್ಪಸಂಖ್ಯಾತರ ಮತ ಬ್ಯಾಂಕ್ ಉಳಿಸಿಕೊಳ್ಳುವದು ಕಾಂಗ್ರೆಸ್‌ಗೆ ಅನಿವಾರ್ಯವಾಗಿದೆ.ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಿ.ಪಂ, ತಾಪಂ ಸದಸ್ಯರನ್ನು ಹೊರತು ಪಡಿಸಿ ಸುಮಾರು ೬೫೦೦ಕ್ಕೂ ಹೆಚ್ಚು ಮತದಾರರಿದ್ದು, ಹಾವೇರಿ ಜಿಲ್ಲೆಯಲ್ಲಿ ೩೦೦೦ಕ್ಕೂ ಹೆಚ್ಚಿದ್ದು, ಅಲ್ಲಿನವರೇ ಆಗಲಿ ಎಂಬ ಮಾತೂ ಕೇಳಿ ಬರಲಾರಂಬಿಸಿದೆ.