ಪ್ರಮುಖರ ಭೇಟಿ – ತೀವ್ರ ಕುತೂಹಲ: 13ರಂದೇ 13 ಆಕಾಂಕ್ಷಿಗಳ ನಾಮಪತ್ರ
ಹುಬ್ಬಳ್ಳಿ: ಕಲಘಟಗಿ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದ್ದು ಹಾಲಿ ಶಾಸಕ ಸಿ.ಎಂ.ನಿಂಬಣ್ಣವರ ಸಹಿತ ಡಜನ್ಗೂ ಹೆಚ್ಚು ಸ್ಥಳೀಯ ಆಕಾಂಕ್ಷಿಗಳ ವಿರೋಧದ ಮಧ್ಯೆಯೇ ಕಾಂಗ್ರೆಸ್ ಟಿಕೆಟ್ ವಂಚಿತರಾಗಿರುವ ಮಾಜಿ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಹೊಸದಿಲ್ಲಿಯಲ್ಲಿ ಬಿಜೆಪಿ ಪ್ರಮುಖರನ್ನು ಭೇಟಿಯಾಗಿದ್ದಾರೆ.
ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್.ಸಂತೋಷ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಸಹಿತ ಪ್ರಮುಖರನ್ನು ಭೇಟಿಯಾಗಿದ್ದು ತೀವ್ರ ಕುತೂಹಲ ಕೆರಳಿಸಿದೆ.
ನಿನ್ನೆ ಮಧ್ಯಾಹ್ನವೇ ಛಬ್ಬಿ ದಿಲ್ಲಿಗೆ ತೆರಳಿದ್ದು ಬಿಜೆಪಿ ಮುಖಂಡರು ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದಾರೆನ್ನಲಾಗಿದೆ. ಆದರೆ ಬೇರೆ ಪಕ್ಷದಿಂದ ಬರುವರಿಗೆ ಟಿಕೆಟ್ ನೀಡುವುದಕ್ಕೆ ಸ್ಥಳೀಯ ಬಿಜೆಪಿ ಆಕಾಂಕ್ಷಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಯಾವುದೆ ಕಾರಣಕ್ಕೂ ಬೇರೆ ಪಕ್ಷದಿಂದ ಬಂದವರಿಗೆ ಮಣೆ ಹಾಕಬಾರದು ಎಂದಿದ್ದಾರಲ್ಲದೇ ದಿ.13ರಂದೇ ಎಲ್ಲ 13 ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆನ್ನಲಾಗಿದೆ.
ಛಬ್ಬಿಯವರಿಗೆ ಟಿಕೆಟ್ನ ಸ್ಪಷ್ಟ ಭರವಸೆಯನ್ನು ನೀಡಿಲ್ಲವಾದರೂ ಈ ಬಾರಿ ಬಿಜೆಪಿ ಪಾಲಿಗೆ ಒಂದೊಂದು ಕ್ಷೇತ್ರ ಗೆಲ್ಲುವುದು ಮುಖ್ಯವಾಗಿರುವುದರಿಂದ ದಿ.10ಕ್ಕೆ ಅವರನ್ನೇ ಅಂತಿಮಗೊಳಿಸಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ. ಛಬ್ಜಿಯ ಆಪ್ತ ವಲಯದ ಕಿರಣ ಪಾಟೀಲ ಕುಲಕರ್ಣಿ, ಮದನ ಕುಲಕರ್ಣಿ, ಅಣ್ಣಪ್ಪ ಓಲೇಕಾರ, ಗುರುನಾಥ ದಾನವೇನವರ ಸಹಿತ ಅನೇಕರು ಬೆಂಗಳೂರಲ್ಲಿ ಇದ್ದಾರೆ.
ಒಟ್ಟಿನಲ್ಲಿ ಕಲಘಟಗಿ ಟಿಕೆಟ್ ಫೈಟ್ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯುತ್ತದೆ ಕಾದು ನೋಡಬೇಕಿದೆ.