ಹುಬ್ಬಳ್ಳಿ: ಕಳೆದ ಬಾರಿಗಿಂತ 5 ಸ್ಥಾನಗಳನ್ನು ಹೆಚ್ಚಿಗೆ ಗೆದ್ದಿದ್ದರೂ ಅಧಿವೇಶನ ನಡೆಯುತ್ತಿರುವಾಗಲೇ ಬೆಳಗಾವಿಯಲ್ಲೆ ಬಿಜೆಪಿ ಅಧಿಕೃತ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಸೋಲು ಕೇಸರಿ ಪಡೆಗೆ ಅರಗಿಸಿಕೊಳ್ಳದಂತಾಗಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಇವರಿಗೆ ಶಿಸ್ತು ಕ್ರಮದ ಮೊದಲ ಹಂತವಾಗಿ ನೋಟಿಸ್ ನೀಡುವುದು ಬಹುತೇಕ ಪಕ್ಕಾ ಆಗಿದೆ.
ಕ್ರಮಕೈಗೊಳ್ಳುವ ಕುರಿತು ಪಕ್ಷದ ಮುಖಂಡರೊಂಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಅಲ್ಲದೇ ಅವಸರವಿಲ್ಲ ಎಂಬ ಮಾತನ್ನು ಸ್ವತಃ ಮುಖ್ಯ ಮಂತ್ರಿ ಹೇಳಿದ್ದರೂ ಸಂಘ ಪರಿವಾರದವರು ಹೀಗೆ ಮುಂದುವರಿದರೆ ಬೆಳಗಾವಿ ಭದ್ರಕೋಟೆ ಛಿದ್ರವಾಗುವ ಆಶಯ ವ್ಯಕ್ತಪಡಿಸಿದ್ದು ಶಿಸ್ತು ಕ್ರಮಕ್ಕೆ ಮುಂದಾಗಬೇಕೆಂದು ಹೇಳಿದೆ ಎನ್ನಲಾಗಿದೆ.
ಪಕ್ಷದ ವರಿಷ್ಠರಿಗೂ ಪರಿಷತ್ ಮುಖ್ಯ ಸಚೇತಕರಾಗಿದ್ದ ಕವಟಗಿಮಠ ಅವರ ಸೋಲು ಕೇಸರಿ ಪಡೆಗೆ ದೊಡ್ಡ ಪೆಟ್ಟು ನೀಡಿದ್ದು, ಈ ಹಿನ್ನೆಲೆಯಲ್ಲಿ ಇಷ್ಟರಲ್ಲೇ ನೋಟಿಸ್ ನೀಡುವದು ಖಚಿತ ಎನ್ನಲಾಗಿದೆ.
ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಅಧಿಕೃತ ಅಭ್ಯರ್ಥಿಯ ಸೋಲಿನ ಬಗೆಗೆ ಈಗಾಗಲೇ ಅಲ್ಲಿನ ಅಧ್ಯಕ್ಷರು, ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ.ಮುಂದೆ ಈ ಬಗ್ಗೆ ಈ ಚಿಂತಿಸಲಾಗುವುದು ಎಂದರು.
ಇಡಿ ಚುನಾವಣೆ ಜವಾಬ್ದಾರಿಯನ್ನು ರಮೇಶ ಜಾರಕಿಹೊಳಿ ಹೆಗಲಿಗೆ ಹಾಕಿದ ಕ್ರಮಕ್ಕೂ ಈಗ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಅಧಿಕೃತ ಅಭ್ಯರ್ಥಿ ಸೋಲಿನ ಪಟ್ಟ ಅವರಿಗೆ ಕಟ್ಟುವ ಸಾಧ್ಯತೆ ದಟ್ಟವಾಗಿದೆ.ಅಲ್ಲದೇ ಸಚಿವ ಸ್ಥಾನದ ಕನಸು ಮತ್ತಷ್ಟು ದೂರವಾದಂತಾಗಿದೆ.
ಮಗ್ಗುಲಮುಳ್ಳಿಗೆ ನೋಟಿಸ್ ಜಾರಿ!
ಅವಿಭಾಜ್ಯ ಧಾರವಾಡ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್ ಕೊನೆಗೂ ದ್ವಿತೀಯ ಸ್ಥಾನಿಯಾಗಿ ಗೆಲುವು ಸಾಧಿಸಿದರೂ ಮನೆಯೊಂದು ಆರು ಬಾಗಿಲು ಎಂಬುದು ಫಲಿತಾಂಶ ನೋಡಿದ ಪ್ರತಿಯೊಬ್ಬರಿಗೂ ಮೇಲ್ನೋಟಕ್ಕೆ ಭಾಸವಾಗುವಂತಿದೆ.
ಪಕ್ಷೇತರನಾಗಿ ಕಣಕ್ಕಿಳಿದ ಹಾವೇರಿ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ನಮ್ಮ ಪಕ್ಷದವರಲ್ಲ. ಅಲ್ಲದೇ ನಮ್ಮಲ್ಲಿ ಯಾರೂ ಬಂಡಾಯ ಅಭ್ಯರ್ಥಿಗಳಿಲ್ಲ ಎಂದು ಹೇಳುತ್ತಲೆ ಬಂದಿದ್ದ ಬಿಜೆಪಿ ಶಿಸ್ತು ಸಮಿತಿ ಇಂದು ಹಾವೇರಿಗೆ ನೋಟಿಸ್ ಜಾರಿ ಮಾಡಿದೆ.