ಹುಬ್ಬಳ್ಳಿ-ಧಾರವಾಡ ಸುದ್ದಿ
ಜಿಲ್ಲೆಯಲ್ಲಿ ’ಕೈ’ ಹಿಡಿತಕ್ಕೆ ಲಾಡ್ ಗುಪ್ತ ಸಭೆ!

ಜಿಲ್ಲೆಯಲ್ಲಿ ’ಕೈ’ ಹಿಡಿತಕ್ಕೆ ಲಾಡ್ ಗುಪ್ತ ಸಭೆ!

ಹುಬ್ಬಳ್ಳಿ: ಜಿಲ್ಲಾ ಕಾಂಗ್ರೆಸ್‌ನಲ್ಲಿ ಹಿಡಿತ ಸಾಧಿಸಲು ಮಾಜಿ ಸಚಿವ ಸಂತೋಷ ಲಾಡ ಮುನ್ನುಡಿ ಬರೆಯುವ ಸಿದ್ದತೆಯಲ್ಲಿದ್ದು ನಿನ್ನೆ ನವಲೂರಿನ ಮಯೂರ್ ರೆಸಾರ್ಟನಲ್ಲಿ ಎರಡನೇ ಸಭೆ ನಡೆಸಿದ್ದಾರೆನ್ನಲಾಗಿದೆ.
ಕಲಘಟಗಿ ಕ್ಷೇತ್ರಕ್ಕಾಗಿ ಮಾಜಿ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಹಾಗೂ ಲಾಡ್ ಮಧ್ಯೆ ಹಗ್ಗ ಜಗ್ಗಾಟ ಮುಂದುವರಿದಿದ್ದು, ಹೀಗಿರುವಾಗಲೇ ಮಹಾನಗರ ಹಾಗೂ ಗ್ರಾಮೀಣದವರಾದ ಅನೇಕ ಅತೃಪ್ತ ಮುಖಂಡರನ್ನು ಆಹ್ವಾನಿಸಿ ಸಭೆ ನಡೆಸಿರುವುದು ಹಲವು ಅನುಮಾನ ಹುಟ್ಟು ಹಾಕಿದೆ.
ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಶಾಸಕ ನಾಗರಾಜ ಛಬ್ಬಿ ,ಉಭಯ ಘಟಕಗಳ ಅಧ್ಯಕ್ಷರ ಸಹಿತ ಬೆರಳೆಣಿಕೆಯ ಪ್ರಮುಖರನ್ನು ಬಿಟ್ಟು ಉಳಿದವರೆಲ್ಲರನ್ನು ಸಭೆಗೆ ಆಹ್ವಾನಿಸಿದ್ದರು ಎನ್ನಲಾಗಿದ್ದು, ಈ ಹಿಂದೆ ಕೂಡ ಒಮ್ಮೆ ರಾತ್ರಿ ಭೋಜನ ಕೂಟದ ಸಭೆ ನಡೆಸಿದ್ದರೆನ್ನಲಾಗಿದೆ.
ಮಾಜಿ ಸಂಸದರು ಸಹಿತ ಅನೇಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು,ಮಾಜಿ ಪಾಲಿಕೆ ಸದಸ್ಯರು,ರಾಜ್ಯ ಪದಾಧಿಕಾರಿಗಳು, ಮಹಿಳಾ ಮಣಿಗಳು ಪಾಲ್ಗೊಂಡಿದ್ದರು ಎನ್ನಲಾಗಿದೆ. ಜಿಲ್ಲಾ ಅಧ್ಯಕ್ಷರ ನೇಮಕಾತಿ ಕುರಿತು ಸೇರಿದಂತೆ ಸಹ ಮಾತನಾಡಿದ್ದಾರೆನ್ನಲಾಗಿದೆ. ಕುಂದಗೋಳ ಶಾಸಕರಾಗಿದ್ದ ದಿ.ಸಿಎಸ್ ಶಿವಳ್ಳಿಯವರ ನಿಧನ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನದ ನಂತರ ಜಿಲ್ಲಾ ಮಟ್ಟದಲ್ಲಿ ಪಕ್ಷದ ಹಿಡಿತವಿರುವ ನಾಯಕರೇ ಇಲ್ಲವಾಗಿದ್ದು ಇದನ್ನೇ ಬಂಡವಾಳ ಮಾಡಿಕೊಂಡು ಜಿಲ್ಲೆಯಲ್ಲಿ ಹಿಡಿತ ಸಾಧಿಸುವ ಯತ್ನ ನಡೆಸಿದ್ದಾರೆನ್ನಲಾಗಿದೆ. ಪಕ್ಷದಲ್ಲಿ ಹಿಂದೆ ನಿರ್ಣಾಯಕರಾಗಿ ಕೆಲವರಿಗೆ ಟಿಕೆಟ್ ಸಹ ಕೊಡಿಸಿದ್ದ ಲಾಡ್ ಮತ್ತೆ ಜಿಲ್ಲಾ ರಾಜಕಾರಣದಲ್ಲಿ ಸಕ್ರೀಯರಾಗುವ ಸಾಧ್ಯತೆಗಳು ದಟ್ಟವಾಗಿದೆ.
ಒಂದೆಡೆ ಮುಂದಿನ ಸಿಎಂ ಹೇಳಿಕೆಯ ಹುಟ್ಟಿಕೊಂಡ ಬೆಂಕಿ ಆರುವ ಮುನ್ನವೇ ಬಣ ರಾಜಕೀಯದ ವೇದಿಕೆ ಸಿದ್ದವಾಗುತ್ತಿದ್ದು, ಮೊದಲೇ ಜಿಲ್ಲೆಯಲ್ಲಿ ಬಿಜೆಪಿಯೆದುರು ಏದುಸಿರು ಬಿಡುತ್ತಿರುವ ಕಾಂಗ್ರೆಸ್‌ಗೆ ಇಂತಹ ಬೆಳವಣಿಗೆಗಳು ಎಷ್ಟರ ಮಟ್ಟಿಗೆ ಅನುಕೂಲವಾದೀತು ಎಂಬುದನ್ನು ಕಾಲವೇ ಉತ್ತರಿಸಬೇಕು.

ಬಹುಸಂಖ್ಯಾತರಿಗೆ ಗ್ರಾಮೀಣ ಪಟ್ಟ

ರಾಜ್ಯದ ಹಲವಾರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಬದಲಾವಣೆಗೆ ಈಗಾಗಲೇ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ಗ್ರಾಮೀಣ ಘಟಕದ ಬದಲಾವಣೆ ನಿಶ್ಚಿತ ಎನ್ನಲಾಗಿದೆ.
ಅನಿಲಕುಮಾರ ಪಾಟೀಲ ಗ್ರಾಮೀಣ ಅಧ್ಯಕ್ಷರಾದ ನಂತರ ನಂತರ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಪಕ್ಷ ಅಭೂತ ಪೂರ್ವ ಸಾಧನೆ ತೋರಿದ್ದು, ಅಲ್ಲದೇ ಕೋವಿಡ್ ಸಂದರ್ಭದಲ್ಲೂ ಮಾನವೀಯ ಕಾರ್ಯ ಸತತವಾಗಿ ಮಾಡಿದ್ದರೂ ಜಿಲ್ಲೆಯ ಗ್ರಾಮೀಣದವರೇ ಆಗಬೇಕೆಂಬ ಕೂಗು ಮುನ್ನಲೆಗೆ ಬಂದಿದೆ.
ಕಳೆದ ಬಾರಿಯಂತೆಯೇ ಈ ಬಾರಿಯೂ ಬಹುಸಂಖ್ಯಾತರಿಗೆ ಅಧ್ಯಕ್ಷ ಪಟ್ಟ ನೀಡಬೇಕೋ ಅಥವಾ ಹಿಂದುಳಿದ ಸಮುದಾಯದವರಿಗೆ ನೀಡಬೇಕೋ ಎಂಬ ಗೊಂದಲ ಮುಂದುವರಿದಿದೆ.
ಕುಂದಗೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಜಗದೀಶ ಉಪ್ಪಿನ, ಮಾಜಿ ಸಚಿವ ನವಲಗುಂದದ ಕೆ.ಎನ್.ಗಡ್ಡಿ ಅಲ್ಲದೇ ಮಾಜಿ ಶಾಸಕ ದಿ.ಸಿ.ಎಸ್.ಶಿವಳ್ಳಿಯವರ ಸಹೋದರ ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ ಇವರ ಹೆಸರುಗಳು ಮುಖ್ಯವಾಗಿ ಕೇಳಿ ಬಂದಿವೆ.
ಮಹಾನಗರ ಅಧ್ಯಕ್ಷ ಸ್ಥಾನದಲ್ಲಿ ಹಾಲಿ ಅಧ್ಯಕ್ಷರಾದ ಅಲ್ತಾಫ್ ಹಳ್ಳೂರ ಮುಂದುವರಿಯುವ ಸಾಧ್ಯತೆ ದಟ್ಟವಾಗಿರುವ ಹಿನ್ನಲೆಯಲ್ಲಿ ಗ್ರಾಮೀಣ ಅಧ್ಯಕ್ಷಗಿರಿ ನೂರಕ್ಕೆ ೯೦ರಷ್ಟು ಬಹುಸಂಖ್ಯಾತರಿಗೆ ಮೀಸಲು ಖಚಿತವಾಗಿದ್ದು ಉಪ್ಪಿನ ಹೆಸರು ಮುಂಚೂಣಿಯಲ್ಲಿ ಇದೆ ಎನ್ನಲಾಗಿದೆ.

administrator

Related Articles

Leave a Reply

Your email address will not be published. Required fields are marked *