ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಸಂಪುಟದಲ್ಲಿ ಸಚಿವನಾಗಲಾರೆ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ನೂತನ ಕ್ಯಾಬಿನೆಟ್‌ನಲ್ಲಿ ಧಾರವಾಡದ ಪ್ರತಿನಿಧಿಯಾರು ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.
ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರುಗಳಿದ್ದು ಹಿರಿತನದ ಆಧಾರದ ಮೇಲೆ ನೋಡಿದಲ್ಲಿ ನವಲಗುಂದ ಕ್ಷೇತ್ರದ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಹೆಸರು ಕಳೆದ ಬಾರಿಯೇ ಬಂದಿತ್ತು. ಆದರೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಯಡಿಯೂರಪ್ಪ ಸಂಪುಟದಲ್ಲಿ ಸ್ಥಾನ ಅಲಂಕರಿಸಿದಾಗ ನಿಗಮ ಮಂಡಳಿ ಅವರಿಗೆ ಒಲಿದು ಬಂದಿತ್ತು. ಅಲ್ಲದೇ ಈ ಹಿಂದೆ ಶೆಟ್ಟರ್ ಸಿಎಂ ಆಗಿದ್ದಾಗ ಸಂಸಧೀಯ ಕಾರ್ಯದರ್ಶಿಯೂ ಆಗಿದ್ದರು.
ಆದರೆ ಈಗ ಪರಿಸ್ಥಿತಿ ಸ್ಪಲ್ಪ ಬದಲಾವಣೆ ಆಗಿದೆ. ಸಂಘದ ‘ಲಾಡ್ಲಾ ಬೇಟಾ’ ಆಗಿ ಪರಿಣಮಿಸಿರುವ ಅರವಿಂದ ಬೆಲ್ಲದ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಅಂತಿಮ ಘಟ್ಟದ ವರೆಗೂ ಚಾಲ್ತಿಯಲ್ಲಿತ್ತು. ಹಾಗಾಗಿ ಅವರಿಗೆ ಸಚಿವ ಸ್ಥಾನ ದೊರೆಯಬಹುದೆಂಬ ಮಾತು ಕೇಳಿ ಬಂದಿದೆ.
ಪಕ್ಷ ನಿಷ್ಠೆ, ಹಿರಿಯ ಮುಖಂಡರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವ ಮುನೇನಕೊಪ್ಪ ಹೆಸರು ಜಿಲ್ಲೆಯಿಂದ ಮಂತ್ರಿ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದು ಅಲ್ಲದೇ ಜಿಲ್ಲೆಯ ಬಹುತೇಕ ಶಾಸಕರ ಬೆಂಬಲವೂ ಅವರಿಗಿದೆ.ಶೆಟ್ಟರ್ ಮತ್ತು ಜೋಶಿಯವರಿಬ್ಬರ ನಿಕಟವರ್ತಿಯಾಗಿರುವ ಮುನೇನಕೊಪ್ಪ ರೈತ ಬಂಡಾಯದ ನೆಲದಿಂದ ಬಂದ ರೈತ ಪರ ಕಾಳಜಿಯ ಶಾಸಕ ಎಂಬ ಹಣೆಪಟ್ಟಿಯೂ ಇದೆ.
ನಿರ್ಗಮಿತ ಸಿಎಂ ಯಡಿಯೂರಪ್ಪ ಹಿಟ್ ಲೀಸ್ಟನಲ್ಲಿ ಮೊದಲ ಸ್ಥಾನದಲ್ಲಿ ಬಸನಗೌಡ ಪಾಟೀಲ ಯತ್ನಾಳ ಇದ್ದರೆ, ಎರಡನೇ ಹೆಸರು ಅರವಿಂದ ಬೆಲ್ಲದ ಆಗಿದೆ.ಈಗಾಗಲೇ ಸಿಎಂ ತಾವು ಹೇಳಿದವರನ್ನೇ ಮಾಡುವಲ್ಲಿ ಯಶಸ್ವಿಯಾಗಿರುವ ಅವರು ಈ ಇಬ್ಬರನ್ನು ಸಂಪುಟಕ್ಕೆ ಯಾವುದೇ ಕಾರಣಕ್ಕೂ ತೆಗೆದುಕೊಳ್ಳಬಾರದೆಂಬ ಲಕ್ಷಣರೇಖೆ ಹಾಕಿದ್ದಾರೆನ್ನಲಾಗಿದೆ ಎಂಬ ಮಾತು ಬಿಜೆಪಿ ವಲಯದಲ್ಲೇ ಕೇಳಿ ಬಂದಿದೆ.ಹಾಗಾಗಿ ಬೆಲ್ಲದಗೆ ಮಂತ್ರಿ ಭಾಗ್ಯ ಕಷ್ಟ ಎಂಬ ಮಾತೂ ಕೇಳಿ ಬಂದಿದೆ.
ಕಳಸಾ-ಬ0ಡೂರಿ ಹೋರಾಟದ ಪಾದಯಾತ್ರೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಜತೆ ಮುನೇನಕೊಪ್ಪ ಅವರು ಹೆಜ್ಜೆ ಹಾಕಿದ್ದವರಲ್ಲದೇ ಅವರ ಆತ್ಮೀಯ ಬಳಗದವರಲ್ಲೊಬ್ಬರು. ಹೀಗಾಗಿ ಅವರಿಗೆ ಅನುಕೂಲವಾಗಿ ಪರಿಣಮಿಸಲಿದೆ.
ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದ ಶಾಸಕರಿಗೆ ಇದುವರೆಗೆ ಮಂತ್ರಿಗಿರಿ ಸಿಕ್ಕಿಲ್ಲವಾಗಿದ್ದು ಅಮೃತ ದೇಸಾಯಿಯವರೂ ಶಾಸಕರಾಗಿದ್ದರೂ ಬೊಮ್ಮಾಯಿಯವರು ಅದೇ ಸಮುದಾಯದವರಾದ್ದರಿಂದ ಅವರಿಗೆ ಕಷ್ಟ ಎನ್ನಲಾಗುತ್ತಿದೆ.