ಹುಬ್ಬಳ್ಳಿ: ಸುಮಾರು 30 ತಿಂಗಳ ಕಾಲ ಚುನಾಯಿತ ಪ್ರತಿನಿಧಿಗಳಿಲ್ಲದಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣಾ ಮತದಾನ ಮುಕ್ತಾಯಗೊಂಡಿದ್ದು ಮತದಾನ ಪ್ರಮಾಣ ಕಡಿಮೆಯಾಗಿರುವುದು ಬಿಜೆಪಿಯಲ್ಲಿ ಸ್ಪಲ್ಪ ಮಟ್ಟಿಗೆ ಆತಂಕವನ್ನುಂಟು ಮಾಡಿದ್ದರೆ, ಕೈ ಪಾಳೆಯದಲ್ಲಿ ಹೊಸ ಉತ್ಸಾಹ ಮನೆ ಮಾಡುವಂತೆ ಮಾಡಿದೆ.
ರಾಜಕೀಯ ಪಕ್ಷಗಳು ಆಯಾ ವಾರ್ಡಿನ ಮತದಾನದ ಅಂಕಿ ಅಂಶ ಆಧರಿಸಿ ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿದ್ದು ಟಾರ್ಗೆಟ್ 65 ಹೊಂದಿದ್ದ ಬಿಜೆಪಿ ಈಗ 45 ಕ್ಕೆ ಕಡಿಮೆಯಾಗುವುದಿಲ್ಲ ಎಂಬ ಹಂತಕ್ಕೆ ಬಂದು ತಲುಪಿದೆ.
ಕಾಂಗ್ರೆಸ್‌ಗೆ ಪೂರ್ವದಲ್ಲಿ ಬಂಪರ್ ಹಾಗೂ ಸೆಂಟ್ರಲ್‌ನಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆಯಿದ್ದು 35ರ ಅಂಕಿ ದಾಟುವದೆಂಬ ಹುರುಪು ಮೊದಲ ಬಾರಿಗೆ ಸುಮಾರು ಒಂದು ದಶಕದ ನಂತರ ಕಾಣಿಸಿಕೊಂಡಿದೆ.
ಈಗಾಗಲೇ ಬೆಂಗಳೂರು ಮೂಲದ್ದೆಂದು ಹೇಳಲಾದ “ಬೆಟರ್ ಕರ್ನಾಟಕ” ಹಾಗೂ “ಸಿಕ್ರೇಟ್ ಐ ಕ್ಯಾಪ್ಚರ್” ಸಂಸ್ಥೆಗಳು ನಡೆಸಿದ ಹು-ಧಾ ಮಹಾನಗರ ಪಾಲಿಕೆಯ ಚುನಾವಣೋತ್ತರ ಸಮೀಕ್ಷಾ ವರದಿಗಳು ನಿನ್ನೆ ಬೆಳಗಿನಿಂದ ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದು, ಅನೇಕ ಅಭ್ಯರ್ಥಿಗಳ ನಿದ್ದೆಗೆಡಿಸಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಬಹುಮತ ಸಾಧ್ಯವಿಲ್ಲ ಅತಂತ್ರ ಪಾಲಿಕೆ ಲೆಕ್ಕಾಚಾರದ ಸಮೀಕ್ಷೆಗಳು ಹರಿದಾಡುತ್ತಿವೆ.
ಎರಡೂ ಸಂಸ್ಥೆಗಳ ಸಮೀಕ್ಷಾ ವರದಿಗಳು ಕೇವಲ ಹೆಸರು ಬದಲಾವಣೆ ಮಾತ್ರ ಬದಲಾವಣೆಗೊಂಡು ಯಥಾವತ್ ಅಂಕಿ ಅಂಶಗಳು ಇರುವುದರಿಂದ ಸಾಕಷ್ಟು ಗುಮಾನಿಗೂ ಕಾರಣವಾಗಿದೆ.
ರಾಜ್ಯ ಗುಪ್ತದಳ ಕೆಲ ದಿನಗಳ ಹಿಂದೆ ಅವಳಿನಗರದಲ್ಲಿ 50ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದೆಂಬ ವರದಿ ಕಳಿಸಿತ್ತೆನ್ನಲಾಗಿದೆ.ಚುನಾವಣೆಯ ನಂತರ ಅವರ ಅಂದಾಜು ಸಹ 40 ರ ಮೇಲಕ್ಕೆ ಬಂದು ನಿಂತಿದೆ ಎನ್ನಲಾಗಿದೆ. ಸೆಂಟ್ರಲ್‌ನಲ್ಲಿ ಬಿಜೆಪಿ 15 ಕಾಂಗ್ರೆಸ್ 7ಕ್ಕೂ ಹೆಚ್ಚು ಗೆಲ್ಲಲಿದೆ ಎಂದು ಗುಪ್ತದಳ ಅಂದಾಜಿಸಿದೆ ಎನ್ನಲಾಗಿದೆ.
ಕೆಲ ಅತ್ಯಂತ ವಿದ್ಯಾವಂತರ ವಾರ್ಡುಗಳಲ್ಲೇ ಅತ್ಯಂತ ಕಡಿಮೆ ಮತದಾನವಾಗಿದ್ದು ಅದರಲ್ಲೂ ಸೆಂಟ್ರಲ್ ಹಾಗೂ ಪಶ್ಚಿಮದಲ್ಲಿ ತೀವ್ರ ಕುಸಿತ ಕಂಡಿರುವುದು ಬಿಜೆಪಿಗೆ ಕಗ್ಗಂಟಾಗಿದೆ. ಕಮಲದ ಭದ್ರಕೋಟೆಯಲ್ಲೇ ಮತದಾದ ಕಡಿಮೆಯಾಗಿರುವುದು ಕಾಂಗ್ರೆಸ್‌ಗೆ ಸ್ವಲ್ಪ ಅನುಕೂಲಕರ ಎಂಬ ಮಾತುಗಳು ಬಿಜೆಪಿ ವಲಯದಲ್ಲೇ ಕೇಳಿ ಬಂದಿದೆ.
ತನ್ಮಧ್ಯೆ ಈ ಬಾರಿ ಅವಳಿನಗರದಲ್ಲಿ ಸುಮಾರು 6 ಕ್ಕೂ ಹೆಚ್ಚು ಪಕ್ಷೇತರರು ಗೆಲುವು ಸಾಧಿಸಬಹುದೆಂದು ಹೇಳಲಾಗುತ್ತಿದ್ದು ಇದು ರಾಷ್ಟ್ರೀಯ ಪಕ್ಷಗಳಿಗೆ ಸವಾಲಾಗುವ ಸಾಧ್ಯತೆಗಳಿವೆ.
ಈ ಬಾರಿ 35 ರ ಗಡಿದಾಟುವುದು ಕಠಿಣ ಎಂಬ ಅಭಿಪ್ರಾಯವನ್ನು ಸ್ವತಃ ಸಂಘ ಪರಿವಾರದ ಮೂಲಗಳೇ ಹೇಳಿದೆ ಎನ್ನಲಾಗುತ್ತಿದೆ.
ಅವಳಿನಗರದ ವಿವಿಧ ಪಕ್ಷಗಳ ಹಾಗೂ ವಿವಿಧ ವಾರ್ಡಗಳ ಮುಖಂಡರ ಅಭಿಮತದಂತೆ ಅಧಿಕಾರ ಹಿಡಿಯಲು ಬಿಜೆಪಿ ಮತ್ತು ಕಾಂಗ್ರೆಸ್‌ಗೆ 5 ರಿಂದ 8 ಸ್ಥಾನಗಳ ಕೊರತೆಯಾಗುವ ಮಾತು ಕೇಳಿ ಬಂದಿದೆ.
ಸಿಕ್ರೆಟ್ ಐ ಕ್ಯಾಪ್ಟರ್ / ಬೆಟರ್ ಕರ್ನಾಟಕ ಸಮೀಕ್ಷೆ
ಕಾಂಗ್ರೆಸ್ 34 ರಿಂದ 38
ಬಿಜೆಪಿ 30 ರಿಂದ 34
ಜೆಡಿಎಸ್ 02 ರಿಂದ 04
ಇತರರು 03 ರಿಂದ 08
ಗುಪ್ತದಳದ ಸಮೀಕ್ಷೆಯನ್ವಯ ಬಿಜೆಪಿ 40 ಕ್ಕೂ ಅಧಿಕ
ಕಾಂಗ್ರೆಸ್ 30 ಕ್ಕೂ ಅಧಿಕ
ಇತರರು 5 ರಿಂದ 8 ಸ್ಥಾನಗಳು
ಸಂಘದ ಮೂಲಗಳ ಉಲ್ಲೇಖ ಬಿಜೆಪಿ 30 ರಿಂದ 35
ಚುನಾವಣೋತ್ತರ ಲೆಕ್ಕಾಚಾರ ಹಾಗೂ ವರದಿಗಳು ಏನೆ ಇದ್ದರೂ ನಾಳೆ ಮಧ್ಯಾಹ್ನದ ವೇಳೆಗೆ ಸ್ಪಷ್ಟ ಫಲಿತಾಂಶ ಹೊರ ಬೀಳಲಿದ್ದು ಕೆಲವಡೆ ಭಾರಿ ಬೆಟ್ಟಿಂಗ ಸಹ ನಡೆದಿದೆ ಎನ್ನಲಾಗಿದೆ.ಅನೇಕರು ದೇವರಿಗೆ ಮೊರೆ ಹೋಗಿದ್ದಾರೆ.
ಪಾಲಿಕೆ ರಹಸ್ಯ ನಾಳೆ ಬಹಿರಂಗ
ಕೃಷಿ ವಿವಿಯಲ್ಲಿ ಮತ ಎಣಿಕೆಗೆ ಸಕಲ ವ್ಯವಸ್ಥೆ 12 ರೊಳಗೆ ಎಲ್ಲ ಘಲಿತಾಂಶ
ಹುಬ್ಬಳ್ಳಿ: ಕಳೆದ ತಿಂಗಳು ಚುನಾವಣೆ ದಿಢೀರ್ ಘೋಷಣೆಯಾಗಿ ತದನಂತರ ಟಿಕೆಟ್‌ಗಾಗಿ ಗುದ್ದಾಡಿ ನಾಮಪತ್ರ ಸಲ್ಲಿಸಿ ನಂತರ ಏಳು ದಿನ ವಾರ್ಡುಗಳಲ್ಲಿ ಸುತ್ತಾಡಿ,ಮತದಾರರನ್ನು ಓಲೈಸಿ ತಮ್ಮ ಅಸ್ತಿತ್ವಕ್ಕಾಗಿ ಶ್ರಮಿಸಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣಾ ಕಣದಲ್ಲಿರುವ 420 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಾಳೆ ಪ್ರಕಟವಾಗಲಿದೆ.
ಶುಕ್ರವಾರ ನಡೆದ ಮತದಾನದಲ್ಲಿ ಶೇ. 53.81ರಷ್ಟು ಜನರು ಹಕ್ಕು ಚಲಾಯಿಸಿದ್ದು ಕಳೆದ ಬಾರಿಗಿಂತ ಶೇ.13 ರಷ್ಟು ಕಡಿಮೆಯಾಗಿರುವುದು ಎಲ್ಲ ರಾಜಕೀಯ ಪಕ್ಷಗಳನ್ನು ಚಿಂತೆಗೀಡು ಮಾಡಿದೆ.
ಧಾರವಾಡದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಎಲ್ಲ 82 ವಾರ್ಡುಗಳ ಮತ ಎಣಿಕೆ ಕೇಂದ್ರ ತೆರೆಯಲಾಗಿದೆ.ತ್ವರಿತ ಗತಿಯ ಮತ ಏಣಿಕೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಮಧ್ಯಾಹ್ನ 12 ಗಂಟೆಯೊಳಗೆ ಫಲಿತಾಂಶ ಸಂಪೂರ್ಣವಾಗಿ ಪ್ರಕಟವಾಗುವ ಸಾಧ್ಯತೆ ಇದೆ. ಮಧ್ಯಾಹ್ನ 2 ರೊಳಗೆ ಪಾಲಿಕೆಯ ಎಲ್ಲ ಚುನಾಯಿತ ನಗರ ಸೇವಕರು ಪ್ರಮಾಣ ಪತ್ರ ಪಡೆಯುವ ಸಾಧ್ಯತೆಗಳಿವೆ.
ಮತ ಏಣಿಕೆಗಾಗಿ ಇಲ್ಲಿನ 16 ರೂಮ್ ಗಳಲ್ಲಿ ರೂಮ್ ಗಳಲ್ಲಿ ವ್ಯವಸ್ಥೆ ಮಾಡಲಾಗಿz. 16 ಚುನಾವಣಾಧಿಕಾರಿಗಳಿದ್ದು ಓರ್ವ ಅಧಿಕಾರಿಗೆ ಒಂದು ರೂಮ್ ನಲ್ಲಿ ಮೂರು ಟೇಬಲ್ ವ್ಯೆವಸ್ಥೆ ಮಾಡಲಾಗಿದ್ದು ಏಕಕಾಲಕ್ಕೆ 48 ವಾರ್ಡಗಳ ಮತ ಎಣಕೆ ನಡೆಯಲಿದೆ.
ಮತ ಎಣಿಕೆ ಕೇಂದ್ರದಲ್ಲಿ ಅಭ್ಯರ್ಥಿ, ಮತ ಎಣಿಕೆ ಏಜೆಂಟ್ ಅಥವಾ ಅಭ್ಯರ್ಥಿ ಸೂಚಿಸಿದವರೊಬ್ಬರು ಮಾತ್ರ ಒಳ ಹೋಗಬಹುದಾಗಿದೆ.ಈಗಾಗಲೇ ಮತ ಎಣಿಕೆಗೆ ಎಲ್ಲ ಬಿಗಿ ಬಂದೋಬಸ್ತ ಹಾಗೂ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಒಂದು ಟೇಬಲ್ ನಲ್ಲಿ ಒಂದು ವಾರ್ಡಿನ ಮತ ಏಣಿಕೆ ಪೂರ್ಣಗೊಳಿಸಲು ಅರ್ಧಗಂಟೆಯಿಂದ ಮುಕ್ಕಾಲು ಗಂಟೆಯಾಗಬಹುದಾಗಿದ್ದು ಹತ್ತು ಗಂಟೆ ನಂತರ ಪಾಲಿಕೆ ಯಾರ ಪಾಲಾಗಲಿದೆ ಎಂಬ ಒಂದು ಸ್ಪಷ್ಟ ಚಿತ್ರಣ ದೊರೆಯಲಿದೆ.
82 ವಾರ್ಡ್‌ಗಳಲ್ಲಿ ಒಟ್ಟು 420 ಅಭ್ಯರ್ಥಿಗಳು ಸ್ಪರ್ದಿಸಿದ್ದು ಬಿಜೆಪಿ ಹಾಗೂ ಕಾಂಗ್ರೆಸ್ ಎಲ್ಲ ವಾರ್ಡಗಳಿಗೆ ಸ್ಪರ್ಧಿಸಿದ್ದು ಜೆಡಿಎಸ್ ಆಮ್ ಆದ್ಮಿ ಪಕ್ಷ ಸುಮಾರು 40 ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಎಐಎಂಐಎಂ ಹಾಗೂ ಕೈ.ಕಮಲ ಪಕ್ಷಗಳ ಪಾಲಿಗೆ ಮಗ್ಗುಲ ಮುಳ್ಳಾಗಿರುವ ಘಟಾನುಘಟಿ ಪಕ್ಷೇತರರ ಭವಿಷ್ಯ ನಾಳೆ ಬಹಿರಂಗಗೊಳ್ಳಲಿದೆ.