ಹುಬ್ಬಳ್ಳಿ: ‘ಹುಬ್ಬಳ್ಳಿಯ ಯುವರಾಜ ಸಿಂಗ್’ ಎಂದೇ ಕರೆಯಲ್ಪಡುವ ನಗರದ ಜೆ.ಜಿ. ಕಾಮರ್ಸ ಕಾಲೇಜ್‌ಲ್ಲಿ ದ್ವಿತೀಯ ಪಿ.ಯು.ಸಿ. ಓದುತ್ತಿರುವ ಎಡಗೈ ಸ್ಪಿನ್ನಿಗ ಅಲ್ಲದೇ ಮಧ್ಯಮ ಕ್ರಮಾಂಕದ ಹೊಡೆಬಡಿಯ ಆಟಗಾರ ರಾಜೇಂದ್ರ ಡಂಗನವರ ಪ್ರತಿಷ್ಠಿತ ವಿನೂ ಮಂಕಡ್ ಟ್ರೋಫಿಯಲ್ಲಿ ಪ್ರತಿನಿಧಿಸಲಿರುವ 19 ವರ್ಷದೊಳಗಿನ ರಾಜ್ಯ ತಂಡಕ್ಕೆ ಬಲಗಾಲಿಟ್ಟಿದ್ದಾನೆ.
ದಿ. 28ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ ಪಂಧ್ಯಾವಳಿಯಲ್ಲಿ ಆಡಲು ಧಾರವಾಡ ವಲಯದಿಂದ ಅರ್ಹತೆ ಪಡೆದ ರಾಜೇಂದ್ರ ಬಿಸಿಸಿಐ ಸಿ ಲೆವಲ್ ಹಾಗೂ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸೋಮಶೇಖರ ಶಿರಗುಪ್ಪಿ ಬಳಿ ತರಬೇತಿ ಪಡೆದಿದ್ದಾರೆ.
6ನೇ ವಯಸ್ಸಿಗೆ ಬ್ಯಾಟ್ ಹಿಡಿಯಲಾರಂಭಿಸಿದ ರಾಜೇಂದ್ರ ಸಿಸಿಕೆ ಧಾರವಾಡ ಪರ ಮೊದಲ ಡಿವಿಷನ್, ಬೆಂಗಳೂರಿನ ಫ್ರೆಂಡ್ಸ ಕ್ರಿಕೆಟ್ ಯೂನಿಯನ್ ಪರ ಸಹ ಆಟವಾಡಿದ್ದು, 14 ಮತ್ತು 16ರೊಳಗಿನ ತಂಡದಲ್ಲೂ ತನ್ನ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಸದ್ದು ಮಾಡಿದ್ದು, ಈಗ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಲು ಸಹಕಾರಿಯಾಯಿತು.
ಅನೀಶ್ವರ ಗೌತಮ್ ನಾಯಕನಾಗಿರುವ 19ರೊಳಗಿನ ತಂಡದಲ್ಲಿ ಸ್ಥಾನ ಪಡೆದಿರುವ ರಾಜೇಂದ್ರ ಸಾಮಾಜಿಕ ಕಾರ್ಯಕರ್ತ, ಸೆಂಟ್ರಲ್ ಬಿಜೆಪಿ ಮುಖಂಡ ಶಶಿಶೇಖರ ಡಂಗನವರ ಹಾಗೂ ಗೌರಿ ದಂಪತಿಗಳ ಪುತ್ರನಾಗಿದ್ದು, ಮಗ ಉತ್ತಮ ಸಾಧನೆ ಮಾಡುವ ವಿಶ್ವಾಸ ಹೊಂದಿದ್ದಾರೆ. ಓದಿನಲ್ಲೂ ಮುಂದಿರುವ ಈತ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.84ರಷ್ಟು ಅಂಕ ಗಳಿಸಿದ್ದಾನೆ.
ಹಲವು ವರ್ಷಗಳ ನಂತರ ವಾಣಿಜ್ಯ ರಾಜಧಾನಿಯ ಪ್ರತಿಭೆಯೊಂದು ರಾಜ್ಯ ತಂಡದಲ್ಲಿ ಸ್ಥಾನ ಪಡೆದಿದ್ದು, ಈಗಾಗಲೇ ಇಂದೋರ್ ತಲುಪಿರುವ ರಾಜೇಂದ್ರ ಉತ್ತಮ ಪ್ರದರ್ಶನದ ಮೂಲಕ ರಾಜ್ಯ ರಣಜಿ ತಂಡದಲ್ಲೂ ಅವಕಾಶ ಗಳಿಸುವಂತಾಗಲಿ ಎಂಬುದು ಈ ಭಾಗದ ಎಲ್ಲ ಕ್ರಿಕೆಟ್ ಪ್ರೇಮಿಗಳ ಹಾರೈಕೆಯಾಗಿದೆ.
ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರುವುದು ಖುಷಿ ತಂದಿದೆ. ಶಿರಗುಪ್ಪಿಯವರ ಸೂಕ್ತ ಮಾರ್ಗದರ್ಶನದ ಪರಿಣಾಮ ಈ ಹಂತ ಮುಟ್ಟಲು ಸಾಧ್ಯವಾಗಿದೆ. ಈ ಅವಕಾಶ ಸದುಪಯೋಗಪಡಿಸಿಕೊಳ್ಳುವೆ.
-ರಾಜೇಂದ್ರ ಡಂಗನವರ
ಟಿಎಸ್‌ಸಿಎಯಲ್ಲಿ ತರಬೇತಿ ಪಡೆದ ರಾಜೇಂದ್ರ ರಾಜ್ಯ ತಂಡಕ್ಕೆ ಆಯ್ಕೆಯಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಆತ ಇನ್ನೂ ಎತ್ತರಕ್ಕೆ ಬೆಳೆಯಲಿ.
-ಸೋಮಶೇಖರ ಶಿರಗುಪ್ಪಿ.ಮುಖ್ಯ ತರಬೇತುದಾರರು, ಟಿಎಸ್‌ಸಿಎ
ಬಾಲ್ಯದಿಂದಲೂ ಕ್ರಿಕೆಟ್‌ನ್ನು ಪ್ರೀತಿಸುವ ಬೌಲಿಂಗ್, ಬ್ಯಾಟಿಂಗ್ ಅಲ್ಲದೇ ಕ್ಷೇತ್ರ ರಕ್ಷಣೆಯಲ್ಲಿ ಪ್ರಬುದ್ಧತೆ ಹೊಂದಿದ್ದು ಆತ ದೇಶಕ್ಕಾಗಿ ಆಡಬೇಕೆಂಬುದು ನನ್ನ ಬಯಕೆ. ಅಲ್ಲದೇ ಟಿಎಸ್‌ಸಿಎಯಲ್ಲಿ ನೀಡಿದ ಉತ್ತಮ ತರಬೇತಿ ಸಹಾಯಕ್ಕೆ ಬಂದಿದೆ.
ಶಶಿಶೇಖರ ಡಂಗನವರ, ರಾಜೇಂದ್ರ ತಂದೆ