ಮಿಂಚಿದ ನವೀನ್, ಪವನ್
ಧಾರವಾಡ: ಭರ್ಜರಿ ಆಟದ ಪ್ರದರ್ಶನ ನೀಡಿದ ಸ್ಥಳೀಯ ರೋವರ್ಸ್ ಬಾಸ್ಕೆಟ್‌ಬಾಲ್ ಕ್ಲಬ್ ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆ(ಕೆಎಸ್‌ಬಿಬಿಎ) ಹಾಗೂ ಧಾರವಾಡ ಜಿಲ್ಲಾ ಬಾಸ್ಕೆಟ್‌ಬಾಲ್ ಸಂಸ್ಥೆ(ಡಿಡಿಬಿಎ)ಗಳ ಆಶ್ರಯದಲ್ಲಿ ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ನಡೆದ ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಲೀಗ್(ಕೆಬಿಎಲ್)ನ ಬೆಳಗಾವಿ ವಿಭಾಗದ ಪಂದ್ಯಾವಳಿಯಲ್ಲಿ ಪ್ರಶಸ್ತಿ ಬಾಚಿಕೊಂಡಿದೆ.
ನಗರದ ಕೋರ್ಟ ಸರ್ಕಲ್ ಬಳಿಯಿರುವ ರೋವರ್ಸ್ ಬಾಸ್ಕೆಟ್‌ಬಾಲ್ ಅಂಕಣದಲ್ಲಿ ಭಾನುವಾರ ಸಂಜೆ ನಡೆದ ಪ್ರಶಸ್ತಿ ಹೋರಾಟದಲ್ಲಿ ರೋವರ್ಸ್ ಕ್ಲಬ್ ಹುಬ್ಬಳ್ಳಿಯ ಮಿರ್‍ಯಾಕಲ್ ತಂಡದೆದುರು 47-36 ಪಾಯಿಂಟ್‌ಗಳಿಂದ ಜಯಿಸಿತು. ವಿಜಯಿ ತಂಡ ಮಧ್ಯಂತರಕ್ಕೆ 30-21 ಪಾಯಿಂಟ್‌ಗಳಿಂದ ಮುಂದಿತ್ತು. ನವೀನ್(12) ಹಾಗೂ ಪವನ್(9) ವಿಜಯಿಗಳ ಪರ ಮಿಂಚಿದರೆ, ನಿಕ್ಸನ್(4) ಹಾಗೂ ಆಕಾಶ(9) ಹುಬ್ಬಳ್ಳಿ ತಂಡದ ಪರ ಉತ್ತಮ ಹೋರಾಟ ಪ್ರದರ್ಶಿಸಿದರು.
ನಗರದ ಮಿಸ್ಟಿಕ್ ತೀವ್ರ ತುರುಸಿನಿಂದ ಕೂಡಿದ್ದ ಪಂದ್ಯದಲ್ಲಿ ಇಲ್ಲಿಯದೇ ಆದ ಮಲ್ಲಸಜ್ಜನ ತಂಡವನ್ನು 38-35 ಪಾಯಿಂಟ್‌ಗಳಿಂದ ಪರಾಭವಗೊಳಿಸಿ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿತು. ವಿರಾಮಕ್ಕೆ ಅದು 18-19ರಿಂದ ಹಿಂದಿತ್ತು. ವಿಜಯಿಗಳ ಪರ ನಿತಿಶ್(14) ಹಾಗೂ ಆಕಾಶ(9) ತಂಡದ ಗೆಲುವಿನಲ್ಲಿ ಮಿಂಚಿದರೆ, ಶಶಾಂಕ ಎಸ್.(12) ಹಾಗೂ ರಾಹುಲ್ ಎಚ್.(12) ದಿಟ್ಟ ಪ್ರತಿರೋಧವೊಡ್ಡಿದರು.
ಇದಕ್ಕೂ ಮೊದಲು ನಡೆದ ರೋಚಕ ಸೆಮಿಫೈನಲ್ ಪಂದ್ಯವೊಂದರಲ್ಲಿ ರೋವರ್ಸ್ ಕ್ಲಬ್ ಮಿಸ್ಟಿಕ್ ಎದುರು 53-49 ಪಾಯಿಂಟ್‌ಗಳ ಗೆಲುವು ದಾಖಲಿಸಿತ್ತು. ಮಧ್ಯಂತರಕ್ಕೆ ಎದುರಾಳಿಗಳೆದುರು 44-27 ಪಾಯಿಂಟ್‌ಗಳಿಂದ ಮುಂದಿದ್ದ ರೋವರ್ಸ್ ಪರ ವಿಶ್ವ(18) ಹಾಗೂ ಪವನ(12) ಮಿಂಚಿದರೆ, ಮಿಸ್ಟಿಕ್ ಪರ ಆಕಾಶ(17) ಏಕಾಂಗಿಯಾಗಿ ಹೋರಾಡಿದರು.
ಇನ್ನೊಂದು ಸೆಮಿಫೈನಲ್‌ನಲ್ಲಿ ಹುಬ್ಬಳ್ಳಿಯ ಮಿರ್‍ಯಾಕಲ್ ಸ್ಥಳೀಯ ಮಲ್ಲಸಜ್ಜನ ತಂಡದೆದುರು ಎರಡು ಪಾಯಿಂಟ್‌ಗಳ(57-55) ರೋಚಕ ಜಯ ಸಾಧಿಸಿತು. ಮಧ್ಯಂತರಕ್ಕೆ ತಂಡಗಳೆರಡೂ 22-22ರ ಸಮಸ್ಥಿತಿಯಲ್ಲಿದ್ದವು. ವಿಜಯಿಗಳ ಪರ ಆಕಾಶ(12) ಹಾಗೂ ನಿಕ್ಸನ್(11) ಮಿಂಚಿದರೆ, ಮಲ್ಲಸಜ್ಜನದ ಚಿನ್ಮಯ(22) ಹಾಗೂ ಕಾರ್ತಿಕ(12) ದಿಟ್ಟ ಪ್ರತಿರೋಧವೊಡ್ಡಿದರು.
ಮಹಾಪೌರ ಈರೇಶ ಅಂಚಟಗೇರಿ, ಮಹಾನಗರ ಪಾಲಿಕೆ ಸದಸ್ಯ ಸುರೇಶ ಬೇದರೆ ಹಾಗೂ ನಗರದ ಹೋಟೆಲ್ ಮಾಲಕರ ಸಂಘದ ಅಧ್ಯಕ್ಷ ಮಹೇಶ ಶೆಟ್ಟಿ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಿದರು. ಕೆಎಸ್‌ಬಿಬಿಎ ಉಪಾಧ್ಯಕ್ಷ ಹಾಗೂ ಕೆಬಿಎಲ್ ನಿಮಂತ್ರಕ ಗುಣಶೇಖರ, ಕೆಬಿಎಲ್‌ನ ಇನ್ನೋಬ್ಬ ನಿಮಂತ್ರಕ ವಿಜಯ ಬಳ್ಳಾರಿ, ರಾಮಣ್ಣ ದಾಸಣ್ಣವರ, ಶ್ರೀಕಾಂತ ಕಂಚಿಬೈಲ್, ಶಿವು ಬಳ್ಳಾರಿ, ಶಿವು ಅಮಿನಗಡ, ರಾಜಾರಾಮ ಮೊಕಾಶಿ, ವೇದಗೋಪಾಲ ಉಡುಪಿ, ಕುಮಾರ ಚಿನಿವಾಲ, ಸೇರಿದಂತೆ ಇತರರಿದ್ದರು.