ಇದು ಎಂದೆಂದಿಗೂ ಮರೆಯದ ಕ್ಷಣ; ಭಾರತದ ಪರ ಆಡುವ ಕಲ್ಪನೆಯೂ ಇರಲಿಲ್ಲ
ಹುಬ್ಬಳ್ಳಿ ರಾಜನಗರ ಮೈದಾನದ ಪೆವಿಲಿಯನ್‌ಗೆ ಸುನೀಲ್ ಜೋಶಿ ಹೆಸರು ನಾಮಕರಣ
ಪ್ರಸನ್ನಕುಮಾರ ಹಿರೇಮಠ
ಹುಬ್ಬಳ್ಳಿ: ಸ್ಥಳೀಯ ರಾಜನಗರದ ಕೆಎಸ್‌ಸಿಎ (KSCA) ಕ್ರೀಡಾಂಗಣದ ಪೆವಿಲಿಯನ್ ಬ್ಲಾಕ್‌ವೊಂದಕ್ಕೆ ಹಿರಿಯ ಕ್ರಿಕೆಟಿಗ ಸುನೀಲ್ ಜೋಶಿ ಅವರ ಹೆಸರನ್ನು ನಾಮಕರಣ ಮಾಡುವ ಮೂಲಕ ಅವರ ಸಾಧನೆಯನ್ನು ಗೌರವಿಸಲಾಯಿತು. ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ನೂತನ ಪೆವಿಲಿಯನ್ ಬ್ಲಾಕ್ ಅನ್ನು ಉದ್ಘಾಟಿಸಿದರು.

ಕಣ್ಣೀರಾದ ಜೋಶಿ: ತಮ್ಮ ಹೆಸರಿನ ನಾಮಫಲಕ ಅನಾವರಣಗೊಳ್ಳುತ್ತಿದ್ದಂತೆಯೇ ಸುನೀಲ್ ಜೋಶಿ ಅವರು ಅತ್ಯಂತ ಭಾವುಕರಾಗಿ ಕಣ್ಣೀರು ಹಾಕಿದರು. ನಂತರ ಮಾತನಾಡಲು ನಿಂತಾಗ, ಅತೀವ ಸಂತೋಷ ಹಾಗೂ ಗದ್ಗದಿತ ಕಂಠದಿಂದಾಗಿ ಕೆಲಕಾಲ ಮಾತುಗಳೇ ಹೊರಬರಲಿಲ್ಲ.
ಹುಬ್ಬಳ್ಳಿ ನನ್ನ ಕ್ರಿಕೆಟ್ ಭವಿಷ್ಯದ ತಾಯಿ: ’ನನಗೆ ಇಷ್ಟು ದೊಡ್ಡ ಕೀರ್ತಿ ಸಿಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ರಾಷ್ಟ್ರಕವಿ ಕುವೆಂಪು ಅವರು ಹೇಳುತ್ತಿದ್ದಂತೆ, ನಮ್ಮ ಇಂದಿನ ಸಾಧನೆ ಯಾರಿಗಾದರೂ ಪ್ರೇರಣೆಯಾಗಬೇಕು. ಅಂತಹ ದಿನ ಇಂದು ನನ್ನ ಪಾಲಿಗೆ ಬಂದಿದೆ’ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಜೋಶಿ, ’ನಾನು 14 ವರ್ಷದವನಿದ್ದಾಗ ಗದಗದಿಂದ ಹುಬ್ಬಳ್ಳಿಗೆ ಬಂದು ಅಭ್ಯಾಸ ಮಾಡುತ್ತಿದ್ದೆ. ನನ್ನ ಜನ್ಮಸ್ಥಳ ಗದಗ ಆದರೂ, ನನ್ನ ಕ್ರಿಕೆಟ್ ಭವಿಷ್ಯವನ್ನು ಕಟ್ಟಿಕೊಟ್ಟಿದ್ದು ಮಾತ್ರ ಇದೇ ಹುಬ್ಬಳ್ಳಿ. ಭಾರತದ ಪರ ಆಡುತ್ತೇನೆ ಎಂಬ ಕಲ್ಪನೆಯೂ ಅಂದಿರಲಿಲ್ಲ. ನನ್ನ ಪರಿಶ್ರಮ ಹಾಗೂ ಈ ಮಣ್ಣಿನ ಗುಣ ನನ್ನನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ’ ಎಂದು ಕೃತಜ್ಞತೆ ಸಲ್ಲಿಸಿದರು.

ಗುರುಗಳು ಮತ್ತು ಕುಟುಂಬಕ್ಕೆ ಧನ್ಯವಾದ:
ತಮ್ಮ ಯಶಸ್ಸಿನ ಹಿಂದೆ ಕೋಚ್‌ಗಳು ಹಾಗೂ ಎ.ಕೆ. ಕ್ರಿಕೆಟ್ ಅಕಾಡೆಮಿಯ ಪಾತ್ರ ದೊಡ್ಡದಿದೆ ಎಂದ ಅವರು, ಪಾಲಕರು, ಸಹೋದರರಾದ ಅಶೋಕ್, ಆಯ್ಕೆ ಸಮಿತಿ ಹಾಗೂ ತಮ್ಮ ಪತ್ನಿಯ ಸಹಕಾರವನ್ನು ಸ್ಮರಿಸಿದರು. ’ದೇಶಕ್ಕಾಗಿ ಆಡುವಾಗ ಮಗ ಆರ್ಯನ್ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಿಲ್ಲ’ ಎಂದು ಸಣ್ಣ ನೋವಿನೊಂದಿಗೆ ಕುಟುಂಬದ ತ್ಯಾಗವನ್ನು ನೆನೆದರು.

ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್, ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ ಪ್ರಸಾದ್, ಕಾರ್ಯದರ್ಶಿ ಸಂತೋಷ್ ಮೆನನ್, ಜಂಟಿ ಕಾರ್ಯದರ್ಶಿ ಬಿ.ಕೆ. ರವಿ, ಖಜಾಂಚಿ ಮಧುಕರ್, ಉಪಾಧ್ಯಕ್ಷ ಸುಜೀತ್ ಸೋಮಸುಂದರ್, ಅವಿನಾಶ ವೈದ್ಯ, ಮಂಜುನಾಥ, ವೀರಣ್ಣ ಸವಡಿ, ಡಾ.ರವನೀತ್ ಜೋಶಿ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


