ಆರಂಭಿಕ ಪಂದ್ಯದಲ್ಲಿ ಡಿಸಿ ಇಲೆವನ್‌ಗೆ ಗೆಲುವು
ಹುಬ್ಬಳ್ಳಿ: ಬಿಡಿಕೆ ಫೌಂಡೇಷನ್ ಆಶ್ರಯದಲ್ಲಿ ಪಿಕೆಎಸ್ ಫೌಂಡೇಶನ್ ಪ್ರಾಯೋಜಿತ ಕಾರ್ಪೋರೇಟ್ ಟಿ20 ಕಪ್ ಪಂದ್ಯಾವಳಿಗೆ ಹು.ಧಾ.ಪಾಲಿಕೆ ಆಯುಕ್ತ ಬಿ. ಗೋಪಾಲಕೃಷ್ಣ ಹಾಗೂ ಪಿಕೆಎಸ್ ಫೌಂಡೇಶನ್ ವತಿಯಿಂದ ಸಮಾಜ ಸೇವಕ ವಿನೋದ ಪಟವಾ ಚಾಲನೆ ನೀಡಿದರು.
ಬಿಡಿಕೆ ಫೌಂಡೇಶನ್ ಟ್ರಸ್ಟಿ ಬಾಬಾ ಭೂಸದ, ನದೀಮ್ ಶೇಖ್, ಕೆಯುಡಬ್ಲುಜೆ ಸದಸ್ಯ ಗಣಪತಿ ಗಂಗೊಳ್ಳಿ, ಧಾಜಿಕಾನಿಪ ಪ್ರಧಾನ ಕಾರ್ಯದರ್ಶಿ ಸುಶೀಲೇಂದ್ರ ಕುಂದರಗಿ, ಖಜಾಂಚಿ ಬಸವರಾಜ ಹೂಗಾರ ಬಿಡಿಕೆಯ ಅಮಿತ್ ಭೂಸದ, ಅನಂತ ಭಾಗವತ, ಶಿವಾನಂದ ಗುಂಜಾಳ, ಅರ್ಮುಗಂ ಸೇರಿದಂತೆ ಅನೇಕರಿದ್ದರು.
ಮಾತನಾಡಿದ ಅತಿಥಿಗಳು ಬಿಡಿಕೆ ಫೌಂಡೇಷನ್ ವತಿಯಿಂದ ಇದೇ ಪ್ರಥಮ ಬಾರಿಗೆ ಉತ್ತರ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಲೆದರ್ ಬಾಲ್ ಟಿ20 ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದ್ದು, ಎಂಟು ತಂಡಗಳು ಪರಸ್ಪರ ಸೆಣಸಾಡಲಿದ್ದು, ಕ್ರೀಡಾ ಮನೋಭಾವನೆಯಿಂದ ಎಲ್ಲ ತಂಡಗಳು ಆಡಲು ಕರೆ ನೀಡಿದರು.
ಆರಂಭಿಕ ಪಂದ್ಯ ಧಾರವಾಡ ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಡಿಸಿ ಇಲೆವನ್ ತಂಡಗಳ ಮಧ್ಯೆ ನಡೆದು ಡಿಸಿ ತಂಡ 10 ವಿಕೆಟ್‌ಗಳ ಗೆಲುವು ದಾಖಲಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪತ್ರಕರ್ತರ ತಂಡ ಎದುರಾಳಿ ತಂಡದ ಕರಾರುವಾಕ್ ದಾಳಿಯೆದುರು 54ರನ್ನಿಗೆ ಸರ್ವಪತನ ಕಂಡಿತು. ಪ್ರಶಾಂತ ದಿನ್ನಿ 11 ಹಾಗೂ ಹರೀಶ ಕೊಡಚವಾಡ 14 ರನ್ನುಗಳಿಸಿದರು. ಸೈಯದ್ 3, ಚಾಂದ್ 5 ವಿಕೆಟ್ ಕಬಳಿಸಿದರು. 55 ರನ್ನುಗಳ ಗೆಲುವಿನ ಗುರಿಯನ್ನು
ಡಿಸಿ ಇಲೆವನ್ ತಂಡದ ಆರಂಭಕಾರರಾದ ಗೋಪಾಲ ಕೆ. ಹಾಗೂ ಗಿರೀಶ ತಲಾ 21 ರನ್ನುಗಳನ್ನು ಬಾರಿಸುವ ಮೂಲಕ ಸುಲಭ ಗೆಲುವು ತಂದಿತ್ತರು. ಪತ್ರಕರ್ತರ ತಂಡವನ್ನು ಒದೇಶ ಸಕಲೇಶಪುರ ಮುನ್ನಡೆಸಿದರೆ, ಪರಮಾನಂದ ಶಿವಳ್ಳಿಮಠ ಡಿಸಿ ಇಲೆವನ್ ನೇತೃತ್ವ ವಹಿಸಿದ್ದರು.