ಕ್ರಿಕೆಟ್: ರಾಜ್ಯ ತಂಡಕ್ಕೆ ಯರೇಗೌಡ ಮುಖ್ಯ ಕೋಚ್
ಹೈದ್ರಾಬಾದ ಮತ್ತು ಉತ್ತರ ಕರ್ನಾಟಕ ಕ್ರಿಕೆಟ್ ಪ್ರೇಮಿಗಳಿಗೆ ಸಂತಸ
ಹುಬ್ಬಳ್ಳಿ: ಉತ್ತರ ಕರ್ನಾಟಕದ ಅತ್ಯುತ್ತಮ ಕ್ರಿಕೆಟ್ ಪ್ರತಿಭೆ, ರಣಜಿ ಸೇರಿದಂತೆ ಪ್ರತಿಷ್ಠಿತ ಟ್ರೋಫಿಗಳ ಪಂದ್ಯಗಳಲ್ಲಿ ಆಡಿ ಮಹತ್ತರ ಸಾಧನೆ ತೋರಿದ ಸೋಮಶೇಖರ ಎನ್. ಶಿರಗುಪ್ಪಿಯವರಿಗೆ ಮತ್ತೊಮ್ಮೆ ರಾಜ್ಯಮಟ್ಟದ ಮಾನ್ಯತೆ ದೊರೆತಿದ್ದು, ಈ ಭಾಗದ ಕ್ರಿಕೆಟ್‌ಪ್ರೇಮಿಗಳಿಗೆ ಸಂತಸ ತಂದಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ 23ವರ್ಷದೊಳಗಿನವರ ತಂಡಕ್ಕೆ ಸೋಮಶೇಖರ್ ಶಿರಗುಪ್ಪಿ ಮುಖ್ಯ ಕೋಚ್ ಆಗಿ ನೇಮಕವಾಗಿದ್ದು ಈ ಸಂತಸಕ್ಕೆ ಕಾರಣವಾಗಿದೆ. ಪ್ರಸ್ತುತ ಹುಬ್ಬಳ್ಳಿಯ ಕೆನರಾ ಬ್ಯಾಂಕ್ ವೃತ್ತ ಕಚೇರಿಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಶಿರಗುಪ್ಪಿಯವರು ಕ್ರಿಕೆಟ್‌ಗೂ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.
ಕ್ರಿಕೆಟ್‌ನಲ್ಲಿ ವೃತ್ತಿಪರ ಸಾಧನೆ: ಮಾಜಿ ರಣಜಿ ಟ್ರೋಫಿ ಆಟಗಾರ ಮತ್ತು ಬಿಸಿಸಿಐ ಲೆವೆಲ್ ಸಿ ಪ್ರಮಾಣೀಕೃತ ತರಬೇತುದಾರ ಮತ್ತು ಕ್ರಿಕೆಟ್ ತರಬೇತಿ ಮತ್ತು ಆಟಗಾರರ ಅಭಿವೃದ್ಧಿಯಲ್ಲಿ ವ್ಯಾಪಕ ಅನುಭವ ಹೊಂದಿರುವ ಶಿರಗುಪ್ಪಿಯವರು ಯುವ ಪ್ರತಿಭೆಗಳಿಗೆ ಅವರ ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸಲು ಮಾರ್ಗದರ್ಶನ ನೀಡುವಲ್ಲಿ ಸಮರ್ಥರು.
ಆಟಗಾರರ ಕೌಶಲ ವರ್ಧನೆ, ಕಾರ್ಯತಂತ್ರದ ಮೇಲೆ ಗಮನ ಕೇಂದ್ರೀಕರಿಸಿ ವೈಯಕ್ತಿಕ ಮತ್ತು ತಂಡದ ಅಗತ್ಯಗಳಿಗೆ ಅನುಗುಣವಾಗಿ ತರಬೇತಿ ಕಾರ್ಯಕ್ರಮ ರಚಿಸಿ ಕಾರ್ಯಗತಗೊಳಿಸುವಲ್ಲಿಯೂ ಇವರು ನಿಪುಣರು.
ಕರ್ನಾಟಕ ರಾಜ್ಯ ಜೂನಿಯರ್ ತಂಡಗಳಾದ ಅಂಡರ್-19, ಅಂಡರ್-21 ಅಂಡರ್-23 ಮತ್ತು ಅಂಡರ್-25 ತಂಡಗಳನ್ನು ಸ್ವತಃ ಪ್ರತಿನಿಧಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಮುಂದೆ ರಣಜಿ ಟ್ರೋಫಿಯಲ್ಲಿ ಕರ್ನಾಟಕ ಮತ್ತು ಗೋವಾವನ್ನು, ದುಲೀಪ್ ಟ್ರೋಫಿಯಲ್ಲಿ ದಕ್ಷಿಣ ವಲಯವನ್ನು, ಇರಾನಿ ಟ್ರೋಫಿಯಲ್ಲಿ ಕರ್ನಾಟಕವನ್ನು ಯಶಸ್ವಿಯಾಗಿ ಪ್ರತಿನಿಧಿಸಿದ್ದಾರೆ.
ಕ್ರಿಕೆಟ್ ಸಾಧನೆಗಳು:
1996, 98, 99ರಲ್ಲಿ ಮೂರು ಬಾರಿ ರಣಜಿ ಟ್ರೋಫಿ ಗೆದ್ದ ಕರ್ನಾಟಕ ತಂಡದ ಸದಸ್ಯ. 1997 ಮತ್ತು 1998 ರಲ್ಲಿ ಇರಾನಿ ಟ್ರೋಫಿ ಗೆದ್ದ ಕರ್ನಾಟಕ ತಂಡದ ಸದಸ್ಯರಾಗಿದ್ದರು. 41ಪ್ರಥಮ ದರ್ಜೆ ಪಂದ್ಯ ಆಡಿದ್ದಾರೆ.
ಉತ್ತರ ಕರ್ನಾಟಕದ ಕ್ರಿಕೆಟ್ ಪ್ರತಿಭೆ ಸೋಮಶೇಖರ ಶಿರಗುಪ್ಪಿಯವರು ಮೊದಲಿನಿಂದಲೂ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸುತ್ತಲೇ ಬಂದಿದ್ದಾರೆ. ಇದೀಗ ಒಲಿದು ಬಂದ 23ರ ವಯೋಮಾನದವರ ತಂಡದ ಮುಖ್ಯ ಕೋಚ್ ಹುದ್ದೆ ಅವರ ಸಾಧನೆಗೆ ಸಾಕ್ಷಿಯಾಗಿದೆಯಲ್ಲದೇ ಈ ಭಾಗದ ಕ್ರಿಕೆಟ್ ಪ್ರೇಮಿಗಳಿಗೆ ಸಂತಸ ತಂದಿದೆ. ಅವರ ಸಾಧನೆ ಹೀಗೆ ಮುಂದುವರಿಯಲಿ ಎಂದು ಆಶಿಸುವೆವು.
–ವೀರಣ್ಣ ಸವಡಿ, ಅಧ್ಯಕ್ಷ ಕೆಎಸ್‌ಸಿಎ, ಧಾರವಾಡ ವಲಯ
ಕ್ರಿಕೆಟ್: ರಾಜ್ಯ ತಂಡಕ್ಕೆ ಯರೇಗೌಡ ಮುಖ್ಯ ಕೋಚ್
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಸೀನಿಯರ್ ಹಾಗೂ ಜೂನಿಯರ್ ಕ್ರಿಕೆಟ್ ತಂಡಗಳ ತರಬೇತುದಾರರು ಮತ್ತು ಆಯ್ಕೆಗಾರರ ನೇಮಕವನ್ನು ಗುರುವಾರ ಪ್ರಕಟ ಮಾಡಿದೆ.
ಕರ್ನಾಟಕ ರಣಜಿ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕೆ. ಯರೇಗೌಡ ನೇಮಕವಾಗಿದ್ದಾರೆ. ಮನ್ಸೂರ್ ಅಲಿ ಖಾನ್ ಬೌಲಿಂಗ್ ಕೋಚ್ ಆಗಿದ್ದಾರೆ. ಶಬರೀಶ್ ಮೋಹನ್ ಫೀಲ್ಡಿಂಗ್ ಕೋಚ್ ಆಗಿದ್ದಾರೆ.
23 ವರ್ಷದೊಳಗಿನವರ ತಂಡಕ್ಕೆ ಸೋಮಶೇಖರ್ ಎನ್. ಶಿರಗುಪ್ಪಿ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಸೀನಿಯರ್ ಮತ್ತು ಜೂನಿಯರ್ ತಂಡಗಳ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಜೆ. ಅಭಿರಾಮ್ ಮುಂದುವರಿದಿದ್ದಾರೆ.
ಮಹಿಳಾ ತಂಡದ ಮುಖ್ಯ ಕೋಚ್ ಆಗಿ ಕರುಣಾ ಜೈನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕೆಎಸ್‌ಸಿಎ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಮಿತಿಗಳು ಇಂತಿವೆ: ರಾಜ್ಯ ಸೀನಿಯರ್ ಕ್ರಿಕೆಟ್ ತಂಡ: ಕೆ.ಯರೇಗೌಡ (ಮುಖ್ಯ ಕೋಚ್), ಮನ್ಸೂರ್ ಅಲಿ ಖಾನ್ (ಬೌಲಿಂಗ್ ಕೋಚ್), ಶಬರೀಶ್ ಪಿ ಮೋಹನ್ (ಫೀಲ್ಡಿಂಗ್ ಕೋಚ್)
23 ವರ್ಷದೊಳಗಿನವರು: ಸೋಮಶೇಖರ ಎನ್. ಶಿರಗುಪ್ಪಿ (ಮುಖ್ಯ ಕೋಚ್), ರೋಹಿತ್ ಸಬರವಾಲ್ (ಫೀಲ್ಡಿಂಗ್ ಕೋಚ್)
19 ವರ್ಷದೊಳಗಿನವರು: ಕೆ.ಬಿ. ಪವನ್ (ಮುಖ್ಯ ಕೋಚ್), ಎಸ್.ಎಲ್. ಅಕ್ಷಯ್ (ಬೌಲಿಂಗ್ ಕೋಚ್)
16 ಮತ್ತು 14 ವರ್ಷದೊಳಗಿನವರು: ಕುನಾಲ್ ಕಪೂರ್ (ಮುಖ್ಯ ಕೋಚ್), ಆದಿತ್ಯ ಬಿ ಸಾಗರ್ (ಸಹಾಯಕ ಕೋಚ್).
ಆಯ್ಕೆ ಸಮಿತಿ: ಸೀನಿಯರ್ ತಂಡ: ಜಿ. ಅಭಿರಾಮ್ (ಮುಖ್ಯಸ್ಥ), ಕೆ.ಎಲ್. ಅಶ್ವಥ್, ಸಿ. ರಘು, ಎನ್.ಸಿ. ಅಯ್ಯಪ್ಪ (ಆಯ್ಕೆಗಾರರು).
ಜೂನಿಯರ್ ತಂಡಗಳು: ಜೆ. ಅಭಿರಾಮ್ (ಮುಖ್ಯಸ್ಥ), ಎಂ.ವಿ. ಪ್ರಶಾಂತ್, ಕೆ.ಎಂ. ಅಯ್ಯಪ್ಪ, ಉದಿತ್ ಪಟೆಲ್, ರಘೋತ್ತಮ ನವಲಿ (ಆಯ್ಕೆಗಾರರು)
ಮಹಿಳೆಯರ ವಿಭಾಗ: ಸೀನಿಯರ್ ಮತ್ತು ೨೩ ವರ್ಷದೊಳಗಿನವರು: ಕರುಣಾ ಜೈನ್ (ಮುಖ್ಯ ಕೋಚ್).
19 ವರ್ಷದೊಳಗಿವನರು: ರಕ್ಷಿತಾ ಕೃಷ್ಣಪ್ಪ (ಮುಖ್ಯ ಕೋಚ್)
15 ವರ್ಷದೊಳಗಿನವರು: ರಾಖಿ ಗಂಗಲ್ (ಮುಖ್ಯ ಕೋಚ್)
ಆಯ್ಕೆ ಸಮಿತಿ: ಸೀನಿಯರ್ ಸಮಿತಿ: ಸುನಿತಾ ಅನಂತಕೃಷ್ಣನ್ (ಮುಖ್ಯಸ್ಥರು), ಮುಕ್ತಾ ಆರ್ ಅಳಗೇರಿ, ಅರುಣಾ ರೆಡ್ಡಿ, ಡಾ. ನಿವೇದಿತಾ ರೇಶ್ಮೆ (ಆಯ್ಕೆಗಾರರು).
ಜೂನಿಯರ್ ಸಮಿತಿ: ಶರ್ಮಿಳಾ ಸಿದ್ಧೋಧನನ್ (ಮುಖ್ಯಸ್ಥರು), ರಂಜಿನಿ ಕುಮಾರ್, ಸಬಾ ಸಿದ್ಧಿಕಿ, ಮೀನಾ ಕುಮಾರಿ (ಆಯ್ಕೆಗಾರರು).