ಬಾಲ್ ಬಾಯ್ ಆಗಿದ್ದವ ಇಂದು ಶಿವಮೊಗ್ಗ ತಂಡದ ಆಟಗಾರ
ಹುಬ್ಬಳ್ಳಿ : 2018ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ಬಾಲ್ ಬಾಯ್ ಆಗಿದ್ದ ಹುಡುಗನೊಬ್ಬ ಆಗಸ್ಟ 7ರಿಂದ ಆರಂಭವಾಗಲಿರುವ ಮಹಾರಾಜ ಟ್ರೋಫಿ ಕ್ರಿಕೆಟ್ನಲ್ಲಿ(ಎಂಪಿಎಲ್) ಆಡುವ ತಂಡವೊಂದರಲ್ಲಿ ಸ್ಥಾನ ಪಡೆಯುವ ಮೂಲಕ ವಾಣಿಜ್ಯ ರಾಜಧಾನಿಯ ಹಿರಿಮೆಯನ್ನು ಹೆಚ್ಚಿಸಿದ್ದಾನೆ.
ಹೌದು,ಈಗಾಗಲೇ ವಿನೂ ಮಂಕಡ್ ಟ್ರೋಫಿಯಲ್ಲಿ ಆಡಿರುವ ’ಹುಬ್ಬಳ್ಳಿಯ ಯುವರಾಜ ಸಿಂಗ್’ ಎಂದೆ ಕರೆಯಲ್ಟಡುವ ರಾಜೇಂದ್ರ ಡಂಗನವರ ಅವರೇ ಕೆಪಿಎಲ್ ಮಾದರಿಯಲ್ಲೇ ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂದ್ಯಾವಳಿಗೆ ಆಯ್ಕೆಯಾದವರಾಗಿದ್ದಾರೆ.
ಎಡಗೈ ಸ್ವಿನ್ನರ್ ಆಗಿರುವ ಅಲ್ಲದೇ ಮದ್ಯಮ ಕ್ರಮಾಂಕದಲ್ಲಿ ಹೊಡೆಬಡಿಯ ಬ್ಯಾಟಿಂಗ್ ಮೂಲಕ ಸದ್ದು ಮಾಡಿರುವ ರಾಜೇಂದ್ರ ಮಹಾರಾಜಾ ಟ್ರೋಪಿಯಲ್ಲಿ ಭಾಗವಹಿಸಲಿರುವ 6 ತಂಡಗಳಲ್ಲೊಂದಾದ ಶಿವಮೊಗ್ಗ ಸ್ಟ್ರೈಕರ್ಸ್ ತಂಡದ ಪಾಲಾಗಿದ್ದಾರೆ.ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಟಗಾರರ ಡ್ರಾಪ್ಟ್ ಪ್ರಕ್ರಿಯೆ ನಡೆದಿದ್ದು ಪ್ರತಿ ತಂಡಗಳು 18 ಆಟಗಾರರನನ್ನು ಕೊಂಡುಕೊಂಡಿವೆ. ಶಿವಮೊಗ್ಗ ತಂಡದಲ್ಲಿ ಕೆ.ಗೌತಮ್, ಕೆ.ಸಿ.ಕಾರ್ಯಪ್ಪ, ರೋಹನ್ ಕದಂ, ಕೆ.ವಿ.ಸಿದ್ದಾರ್ಥ,ಸ್ಟಾಲಿನ್ ಹೂವರ್ ಮುಂತಾದ ಉತ್ತಮ ಆಟಗಾರರ ದಂಡೆ ಇದ್ದು ಆಲ್ರೌಂಡರ್ ಆಗಿ ರಾಜೇಂದ್ರ ಆಯ್ಕೆಯಾಗಿದ್ದಾರೆ.
ಮಾಜಿ ರಣಜಿ ಆಟಗಾರ, ಹಿರಿಯ ಕೋಚ ಸೋಮಶೇಖರ ಶಿರಗುಪ್ಪಿಯವರ ಪ್ರೀತಿಯ ಶಿಷ್ಯರಲ್ಲೋರ್ವರಾದ ರಾಜೇಂದ್ರ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿಯಲ್ಲೇ ಕಳೆದ ಐದು ವರ್ಷಗಳಿಂದ ತರಬೇತಿ ನಡೆದಿದ್ದಾರೆ.
ಹಲವು ವರ್ಷಗಳ ನಂತರ ಹುಬ್ಬಳ್ಳಿಯ ಪ್ರತಿಭೆ ರಾಜ್ಯಮಟ್ಟದ ಪ್ರತಿಷ್ಠಿತ ಚುಟುಕು ಕ್ರಿಕೆಟ್ ಸಮರಕ್ಕೆ ಆಯ್ಕೆಯಾಗಿದ್ದು ಉತ್ತಮ ಪ್ರದರ್ಶನದ ಮೂಲಕ ರಣಜಿ ತಂಡದ ಬಾಗಿಲು ತಟ್ಟಲಿ ಎಂಬುದು ಹಾರೈಕೆಯಾಗಿದೆ. ಶಿವಮೊಗ್ಗ ಸ್ಟ್ರೈಕರ್ಸ್ ತಂಡಕ್ಕೆ ಮಗ ಆಯ್ಕೆ ಆಗಿರುವುದು ನಿಜಕ್ಕೂ ಖುಷಿ ತಂದಿದೆ. ಶಿರಗುಪ್ಪಿಯವರ ಸೂಕ್ತ ಮಾರ್ಗದರ್ಶನದಿಂದ ಈ ಹಂತ ತಲುಪಿದ್ದಾನೆ .ಸಿಕ್ಕ ಅವಕಾಶ ಸಮರ್ಪಕವಾಗಿ ಬಳಸಿಕೊಳ್ಳುವ ನಂಬಿಕೆಯಿದೆ.
– ಶಶಿ ಡಂಗನವರ
– ರಾಜೇಂದ್ರ ತಂದೆ
ಟಿಎಸ್ಸಿಎಯಲ್ಲಿ ತರಬೇತಿ ಪಡೆದ ರಾಜೇಂದ್ರ ವಿನೂ ಮಂಕಡ್ ಟ್ರೋಫಿಯಲ್ಲಿ ರಾಜ್ಯ ತಂಡ ಪ್ರತಿನಿಧಿಸಿದ್ದು ಉತ್ತಮ ಪ್ರದರ್ಶನ ನೀಡಿದ್ದಾರೆ. ಈಗ ರಾಜ್ಯದ ಅನೇಕ ಹಿರಿಯ ಆಟಗಾರರು ಇರುವ ಕೆಪಿಎಲ್ ಮಾದರಿಯ ಟೂರ್ನಿಗೆ ಆಯ್ಕೆಯಾಗಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಉತ್ತಮ ಸಾಧನೆ ಮಾಡಲಿ.
-ಸೋಮಶೇಖರ ಶಿರಗುಪ್ಪಿ,
ಮುಖ್ಯ ತರಬೇತುದಾರರು, ಟಿಎಸ್ಸಿಎ