ಧಾರವಾಡ ವಲಯ ಆರಂಭಕಾರನ ಅಮೋಘ ಸಾಧನೆ
pareexith
ಹುಬ್ಬಳ್ಳಿ : ನಗರದ ಮೂರುಸಾವಿರಮಠ ಕಲಾ ಮತ್ತು ವಾಣಿಜ್ಯ ಕಾಲೇಜಿನ ಬಿ.ಎ.ಮೊದಲನೆ ವರ್ಷದ ವಿದ್ಯಾರ್ಥಿ ಹಾಗೂ ಧಾರವಾಡದ ವಲಯದ ಆರಂಭಕಾರ ಪರೀಕ್ಷಿತ ವಕ್ಕುಂದ ಬೆಂಗಳೂರಿನಲ್ಲಿ ನಡೆದಿರುವ 25 ವರ್ಷದೊಳಗಿನವರ ಎಸ್.ಎ.ಶ್ರೀನಿವಾಸನ್ ಸ್ಮರಣಾರ್ಥ ಅಂತರ ವಲಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಕರ್ಷಕ ದ್ವಿಶತಕ ಬಾರಿಸುವ ಮೂಲಕ ಸುದ್ದಿ ಮಾಡಿದ್ದಾರೆ.
ನಿನ್ನೆ ಆರಂಭಗೊಂಡ ರಾಯಚೂರ ವಲಯದ ವಿರುದ್ಧದ ಪಂದ್ಯದಲ್ಲಿ ಆರಂಭಕಾರನಾಗಿ ಅಂಕಣಕ್ಕಿಳಿದ ಪರೀಕ್ಷಿತ 258 ಎಸೆತಗಳನ್ನೆದುರಿಸಿ 25 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ರಾಯಚೂರಿನ ಶಶಿಕುಮಾರಗೆ ವಿಕೆಟ್ ಒಪ್ಪಿಸುವ ಮುನ್ನ 202 ರನ್ ಹೊಡೆದರು ಇವರ ಮಹತ್ವದ ಕೊಡುಗೆಯ ಪರಿಣಾಮ ಧಾರವಾಡ ವಲಯ ಐದು ವಿಕೆಟ್ ನಷ್ಟಕ್ಕೆ 411ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು. ಇನ್ನೋರ್ವ ಆಟಗಾರ ಬೆಳಗಾವಿಯ ಅಂಗದರಾಜ ಹಿತ್ತಲಮನಿ(109), ಚಿರಾಗ್ ನಾಯಕ 38 ರನ್ನುಗಳ ಮಹತ್ವದ ಕಾಣಿಕೆ ನಡೆದರು. ಎರಡು ದಿನಗಳ ಪಂದ್ಯದಲ್ಲಿ ಇಂದು ರಾಯಚೂರ ವಲಯದ ಬ್ಯಾಟಿಂಗ್ ನಡೆದಿದೆ.
ಶಿಶಿರ ಭವಾನೆ ನಂತರ ದ್ವಿಶತಕ ಹೊಡೆದ ಮೊದಲ ಧಾರವಾಡ ವಲಯ ಆಟಗಾರ ಪರೀಕ್ಷಿತ ಆಗಿದ್ದು, ಧಾರವಡದವನಾದ ಈತ ಎಸ್ ಡಿಎಂ ಕ್ರಿಕೆಟ್ ಪರ ಆಡುತ್ತಾನೆ. ಕಳೆದ ಫೆಬ್ರುವರಿಯಲ್ಲಿ ಸಿ.ಕೆ.ನಾಯ್ಡು ಟ್ರೋಫಿಗೆ ಆಯ್ಕೆ ಮಾಡಲಾಗಿರುವ 33 ಸಂಭವನೀಯ ಆಟಗಾರರ ತಂಡದಲ್ಲೂ ಈತ ಸ್ಥಾನ ಪಡೆದಿದ್ದ. ಈಗಾಗಲೇ 19 ವರ್ಷದೊಳಗಿನ ರಾಜ್ಯ ತಂಡವನ್ನೂ ವಕ್ಕುಂದ ಪ್ರತಿನಿಧಿಸಿ ವಲಯಕ್ಕೆ ಕೀರ್ತಿ ತಂದಿದ್ದಾನೆ. ಪರೀಕ್ಷಿತ ಸಾಧನೆಗೆ ವಲಯ ಚೇರ್ಮನ್ ವೀರಣ್ಣ ಸವಡಿ ಸೇರಿದಂತೆ ಎಲ್ಲ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.