ತಂದೆಯ ಕೋಪ ಎದುರಿಸಲಾರದೇ ಮನೆಬಿಟ್ಟು ಹೋದ ಬಾಲಕನೊಬ್ಬ 2024ರ ’ಟಿ-20’ ಕ್ರಿಕೆಟ್‌ನ ’ವಿಶ್ವವಿಜೇತ’ ತಂಡದ ಮಾಸ್ಟರ್ ಮೈಂಡ್‌ಗಳಲ್ಲೊಬ್ಬನಾಗಿ ನಿಲ್ಲುತ್ತಾನೆ. ಆ ಎತ್ತರದ ಮಟ್ಟಕ್ಕೆ ಬೆಳೆಯುತ್ತಾನೆ ಎಂಬುದು ಕೇಳಲು ದಂತಕತೆಯಂತಿದ್ದರೂ ನಾವು ನಂಬಲೇಬೇಕು.
ಆ ದಂತಕತೆಯ ಹೀರೊನನ್ನು ಹಾಗೂ ಆತನ ಹಿಂದಿನ ಅವಿರತ ಶ್ರಮದ ಕತೆಯನ್ನೊಮ್ಮೆ ತಿಳಿಯುವ ಕುತೂಹಲ ಈಗ ಎಲ್ಲೆಡೆ ಕೆರಳಿದೆ. ಇದೀಗ ’ಆ ಹೀರೊನ ಜೀವನಪಯಣವೇ ಒಂದು ಸಾಧನಾ ಮಾರ್ಗ’ ಎಂಬಂತಾಗಿದೆ. ಯಾರೀ ಸಾಧಕ ತಿಳಿಯೋಣ ಬನ್ನಿ..!
ಆ ಹುಡುಗನಿಗೆ ಕ್ರಿಕೆಟ್ ಆಡುವ, ಅದರಲ್ಲೇನಾದರೂ ಮಹತ್ತರ ಸಾಧನೆ ಮಾಡುವ ಹುಚ್ಚು.. ಆದರೆ ಅವನ ತಂದೆಗೋ ಬ್ಯಾಟ್-ಬಾಲ್ ಕಂಡರೇ ಆಗದಂಥ ಕೋಪ. ನಿತ್ಯ ತಂದೆ ಮಗನ ಈ ವಾಗ್ವಾದಕ್ಕೆ ತೆರೆಯೆಳೆಯಲೇಬೇಕು.. ತಾನು ಜೀವಕ್ಕಿಂತ ಹೆಚ್ಚು ಪ್ರೀತಿಸುವ ಕ್ರಿಕೆಟ್ ಆಟದಲ್ಲಿ ದಿಗ್ಗಜನಾಗಿ ತಂದೆಯ ಎದುರು ನಿಲ್ಲಬೇಕೆಂಬ ಅದಮ್ಯ ಸಂಕಲ್ಪ ತೊಟ್ಟು ಜೇಬಿನಲ್ಲಿದ್ದ ಕೇವಲ 21ರೂ.ಗಳ ಧೈರ್ಯದೊಂದಿಗೆ ಕರಾವಳಿ ಕರ್ನಾಟಕದ ಕುಮಟಾದಿಂದ ಉತ್ತರ ಕರ್ನಾಟಕದ ಹುಬ್ಬಳ್ಳಿಯೆಡೆಗೆ ಸಾಗಿದ ಈ ಕಥಾ ನಾಯಕನೇ ರಾಘವೇಂದ್ರ ದೀವಗಿ, ಟೀಮ್ ಇಂಡಿಯಾದ ಅತ್ಯಂತ ಪ್ರೀತಿಯ ರಾಘು.
ಕಲ್ಲುಮುಳ್ಳಿನ ಹಾದಿ :
ಊರಿಂದ ಹೊರಟ ಹುಡುಗ ಹುಬ್ಬಳ್ಳಿಗೆ ತಲುಪಿದಾಗ ಗುರುತು ಪರಿಚಯ ಏನೂ ಇರಲಿಲ್ಲ. ಒಂದಷ್ಟು ದಿನ ಬಸ್‌ಸ್ಟ್ಯಾಂಡಿನಲ್ಲಿ, ದೇವಸ್ಥಾನದಲ್ಲಿ ವಾಸ. ಕೊನೆಗೆ ಎಲ್ಲಿಯೂ ಆಶ್ರಯ ಸಿಗದೇ ವರ್ಷಗಟ್ಟಲೇ ಸ್ಮಶಾನದಲ್ಲಿ ವಾಸಿಸುತ್ತ ಹುಬ್ಬಳ್ಳಿಯಲ್ಲಿ ನಡೆಯುವ ಕ್ರಿಕೆಟ್ ಆಟಗಳು, ಪಂದ್ಯಗಳು, ಅವಕ್ಕೆ ಸಂಬಂಧಿಸಿದ ವ್ಯಕ್ತಿಗಳೊಡನೆ ಸಂಪರ್ಕ, ಹೀಗೆ ತನ್ನ ಕ್ರಿಕೆಟ್ ಕನಸಿಗೆ ಬಣ್ಣ ತುಂಬಲು ಹಗಲಿರುಳು ತುಡಿತ. ಅದರ ಪ್ರತಿಫಲ ಎಂಬಂತೆ ಇಲ್ಲಿನ ಬಿಡಿಕೆ ಸ್ಪೋರ್ಟ್ಸ್ ಫೌಂಡೇಶನ್‌ನಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾನೆ. ಅಲ್ಲಿಂದ ಮುಂದೆ ಸಾಗುವ ಕ್ರೀಡಾಪಯಣ ಇವರನ್ನು 2002-03 ರಲ್ಲಿ 16 ಹಾಗೂ 17ವರ್ಷದೊಳಗಿನವರ ವಿಭಾಗದಲ್ಲಿ ಆಪ್‌ಸ್ಪಿನ್ನರ್ ಕ್ರಿಕೆಟ್‌ಪಟುವಾಗಿ ಧಾರವಾಡ ಝೋನ್ ಪ್ರತಿನಿಧಿಸುವಂತೆ ಮಾಡುತ್ತದೆ. ಇನ್ನೇನು ಕನಸು ನನಸಾಗುವ ಸಮಯ ಬಂದೇ ಬಿಟ್ಟಿತು ಎನ್ನುವಷ್ಟರಲ್ಲೇ ಕೈ ಮುರಿದು ಇವರ ಉತ್ಸಾಹಕ್ಕೆ ತಣ್ಣೀರು ಸುರಿಯುತ್ತದೆ. ಆದರೇನು? ಕೈಮುರಿದಿತ್ತೇ ಹೊರತು ಕನಸು ಮುರಿಯಲಿಲ್ಲ.
ಈ ಅನಿರೀಕ್ಷಿತ ಹೊಡೆತ ಅವರನ್ನು ಕ್ರಿಕೆಟಿಗನಾಗುವ ಕನಸಿಗಿಂತಲೂ ಒಂದು ಹೆಜ್ಜೆ ಮೇಲಕ್ಕೆ ಒಯ್ಯುತ್ತದೆ. ಕ್ರೀಡಾಳುಗಳಿಗೆ ತರಬೇತಿದಾರನಾಗುವಂತೆ ಮಾಡುತ್ತದೆ. ರಾಘು ಅವರ ಹಗಲಿರುಳೆನ್ನದ ಶ್ರಮ ಅವರನ್ನು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕರೆದೊಯ್ಯುತ್ತದೆ. ಅಲ್ಲಿ 2-3 ಕ್ಲಬ್‌ನಲ್ಲಿ ಕೆಲಸ ಮಾಡಿದ ಇವರನ್ನು ತಿಲಕ ನಾಯ್ಡು ಗಮನಿಸಿ ಜಾವಗಲ್ ಶ್ರೀನಾಥ ಅವರಿಗೆ ಪರಿಚಯಿಸುತ್ತಾರೆ. ಅದೇ ವೇಳೆ ನ್ಯಾಶನಲ್ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ಗೆ ಸೇರಿಸಿಕೊಂಡು ಕೋಚ್ ತರಬೇತಿ ಕೋರ್ಸ್ ಪೂರ್ಣಗೊಳಿಸುತ್ತಾರೆ. ಅಲ್ಲಿಂದ ಆರಂಭವಾದ ಜರ್ನಿ ಹಿಂದೆ ತಿರುಗಿ ನೋಡದಂತೆ ಮುನ್ನಡೆಸುತ್ತದೆ.
ಟೀಮ್ ಇಂಡಿಯಾದ ಅಚ್ಚುಮೆಚ್ಚಿನ ರಾಘು
2011ರಲ್ಲಿ ಟೀಮ್ ಇಂಡಿಯಾದ ತರಬೇತಿ ಸಹಾಯಕರಾಗಿ ತಂಡ ಸೇರಿಕೊಂಡ ಇವರು ಜಾವಗಲ್ ಶ್ರೀನಾಥ, ಸಚಿನ್ ತೆಂಡೂಲ್ಕರ್, ಟೀಮ ಇಂಡಿಯಾ ಹೆಡ್‌ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಇಡೀ ತಂಡದ ಅಚ್ಚುಮೆಚ್ಚಿನ ರಾಘು ಆಗಿ ಬೆಳೆಯುತ್ತಾರೆ. ಕೋಚ್‌ಗಳಾದ ವಿಜಯ ಭಾರದ್ವಾಜ, ಪವನ ದೇಶಪಾಂಡೆ ಮತ್ತಿತರರಿಂದ ಪ್ರಶಂಸೆಗಳಿಸುತ್ತಾರೆ.
2017ರ ಚಾಂಪಿಯನ್ಸ್ ಟ್ರೋಫಿಯ ಸಂದರ್ಭದಲ್ಲಿ ಸ್ವತಃ ವಿರಾಟ್ ಕೊಹ್ಲಿ ’ಇಂದು ನನ್ನ ಯಶಸ್ಸಿನಲ್ಲಿ ಈ ವ್ಯಕ್ತಿಯ ಪಾತ್ರ ದೊಡ್ಡದಾಗಿದೆ, ಆದರೆ ಅವನ ಕಠಿಣ ಪರಿಶ್ರಮ ಕೆಲವೊಮ್ಮೆ ಜಗತ್ತಿಗೆ ಗಮನಕ್ಕೆ ಬರುವುದಿಲ್ಲ’ ಎಂದು ಪ್ರಶಂಸಿರುವುದು ರಾಘು ಅವರ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ.
ಥ್ರೋಡೌನ್ ಸ್ಪೆಶಲಿಸ್ಟ್ :
ಟೀಮ್ ಇಂಡಿಯಾದ ತರಬೇತಿದಾರ ರಾಘವೇಂದ್ರ ಥ್ರೋಡೌನ್ ಸ್ಪೆಶಲಿಸ್ಟ್. ಸೈಡ್ ಆರ್ಮ್ ಎಂಬ ಸಾಧನದೊಂದಿಗೆ ೧೫೦ ಕಿಮೀ ಸ್ಪೀಡ್‌ನಲ್ಲಿ ಅವರು ಹಾಕುವ ಬಾಲ್‌ಗಳನ್ನು ಎದುರಿಸಲು ಧೈರ್ಯಬೇಕು ಎಂದು ರೋಹಿತ್‌ಶರ್ಮಾ, ವಿರಾಟ್ ಕೋಹ್ಲಿಯವರೇ ಹೇಳುತ್ತಾರೆ. ಪ್ರ್ಯಾಕ್ಟಿಸ್ ಸೆಶನ್‌ನಲ್ಲಿ ರಾಘು ಅವರ ಈ ಬಾಲ್‌ಗಳು ಬೌನ್ಸ್‌ರಗಳು, ಶಾರ್ಟ್ ಪಿಚ್ ಬಾಲ್‌ಗಳನ್ನು ಎದುರಿಸಲು ಬ್ಯಾಟರ್‌ಗಳಿಗೆ ಧೈರ್ಯ ತುಂಬುತ್ತದೆ. ಆಕಾಶದೆತ್ತರಕ್ಕೆ ಬಾಲ್ ಎಸೆಯುವ ಇವರು, ಕ್ಯಾಚ್ ಹಿಡಿಯಲು ಕೂಡ ಪ್ರ್ಯಾಕ್ಟಿಸ್ ಮಾಡಿಸುತ್ತಾರೆ.
ತೆರೆಮರೆಯಲ್ಲೇ ಉಳಿದ ಸಾಧಕ :
ಸದಾ ಹಣೆಯ ಮೇಲೊಂದು ಕುಂಕುಮಬೊಟ್ಟು, ಸಾದಾಸೀದಾ ವೇಷದಲ್ಲೇ ಗುರುತಿಸಿಕೊಳ್ಳುವ ರಾಘು ವಾಸ್ತವವಾಗಿ ತೆರೆಮರೆಯಲ್ಲೇ ಕಾರ್ಯನಿರ್ವಹಿಸುತ್ತಾರೆ. ಭಾರತೀಯ ಕ್ರಿಕೆಟ್ ತಂಡದ ಬೆನ್ನೆಲುಬಾಗಿರುವ ಅವರು ಆಟಗಾರರಿಗೆ ನಿರಂತರವಾಗಿ ಬೆಂಬಲ ನೀಡುತ್ತಿದ್ದು, ಇವರು ಕರ್ನಾಟಕದ ಹೆಮ್ಮೆಯ ಪುತ್ರ ಎಂದು ಹೇಳಿಕೊಳ್ಳಲು ಖುಷಿಯಾಗುತ್ತದೆ.