ವಲಯ ಮಟ್ಟದ ಆಯ್ಕೆ ಪಾರದರ್ಶಕವಾಗಿಲ್ಲ
ಹುಬ್ಬಳ್ಳಿ: ಧಾರವಾಡ ವಲಯ ಮಟ್ಟದ ೧೯ ಮತ್ತು 23 ವಯೋಮಿತಿಯ ಕ್ರಿಕೆಟ್ ತಂಡದ ಆಯ್ಕೆಯಲ್ಲಿ ಕೆಎಸ್ ಸಿಎ ಧಾರವಾಡ ವಲಯ ನಿಯಮ ಗಾಳಿಗೆ ತೂರಿದೆ ಎಂಬ ಸಂತ್ರಸ್ತ ಕ್ರೀಡಾಪಟುಗಳ ಪಾಲಕರ ಮನವಿಯನ್ನು ಪುರಸ್ಕರಿಸಿದ ನಗರದ ಪ್ರಧಾನ ದಿವಾಣಿ ನ್ಯಾಯಾಲಯ (ಕಿರಿಯ ವಿಭಾಗ)ಪುರಸ್ಕರಿಸಿ ನಿಮಂತ್ರಕ ನಿಖಿಲ್ ಭೂಸದಗೆ ನಿನ್ನೆ ತುರ್ತು ನೋಟಿಸ್ ಜಾರಿ ಮಾಡಿದೆ.
ಲಕ್ಷ್ಮಿಬಾಯಿ ರಾಘವೇಂದ್ರ ಶೆಲ್ಲೇದ, ಶೋಭಾ ಆರ್.ಪಾಟೀಲ, ಮಂಜುಳಾ ಎಸ್.ನಿಂಬಕ್ಕನವರ, ರಾಜೇಂದ್ರಕುಮಾರ ಹಾವೇರಿ, ನೀಲಕಂಠಗೌಡ ಮಲ್ಲಿಕಾರ್ಜುನಗೌಡ ಪಾಟೀಲ ಮತ್ತು ಲಲಿತ ರತಿಲಾಲ ಪಟೇಲ ಸೇರಿ ಒಟ್ಟು 6 ಜನ ಸಂತ್ರಸ್ತ ಪಾಲಕರು, ಕೆಎಸ್ ಸಿಎ ನಿಮಂತ್ರಕ ನಿಖಿಲ್ ಭೂಸದ, 19 ಮತ್ತು 23 ವಯೋಮಿತಿಯ ವಲಯ ಮಟ್ಟದ ಆಯ್ಕೆಯಲ್ಲಿ ಕೆಎಸ್ ಸಿಎ ನಿಯಮಾವಳಿಗಳನ್ನು ಗಾಳಿಗೆ ತೂರಿ ಯಾವುದೇ ಪಾರದರ್ಶಕತೆಗೆ ಅವಕಾಶ ನೀಡದೆ,
ನಿಮಂತ್ರಕ ನಿಖಿಲ್ ಭೂಸದ, ನೂರಾರು ಪ್ರತಿಭಾವಂತ ಕ್ರಿಕೆಟ್ ಪಟುಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.
ಸಂತ್ರಸ್ತರ ಪಾಲಕರ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಬಿ.ಎಸ್.ಅಸುಂಡಿ, ಕೆಎಸ್‌ಸಿಎ ಧಾರವಾಡ ಘಟಕದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಯಶಸ್ವಿಯಾದ ಹಿನ್ನೆಲೆಯಲ್ಲಿ ಅರ್ಜಿದಾರರ ಮನವಿ ಪುರಸ್ಕರಿಸಿದ ನ್ಯಾಯಾಧೀಶರು, ಪ್ರತಿವಾದಿ ನಿಖಿಲ್ ಭೂಸದ ಅವರಿಗೆ, ನ್ಯಾಯಾಲಯಕ್ಕೆ ತುರ್ತು ಹಾಜರಾಗುವಂತೆ ಸೂಚಿಸಿ, ಮುಂದಿನ ವಿಚಾರಣೆಯನ್ನು ಇದೇ 23 ಕಾಯ್ದಿರಿಸಿ ಆದೇಶ ನೀಡಿದ್ದಾರೆ.