ಹುಬ್ಬಳ್ಳಿ-ಧಾರವಾಡ ಸುದ್ದಿ

ಐಟಿಎಫ್ ಪಂದ್ಯಾವಳಿಗೆ ಪೇಡೆನಗರಿ ಸಜ್ಜು

17ರಿಂದ ಮುಖ್ಯ ಪಂದ್ಯಗಳು – ಪ್ರವೇಶ ಉಚಿತ

ಧಾರವಾಡ: ಅಂತರರಾಷ್ಟ್ರೀಯ ಟೆನಿಸ್ ಫೆಡರೇಶನ್ನಿನ ವಿಶ್ವ ಟೆನಿಸ್ ಟೂರ್ ಡಾಲರ್ 25 ಸಾವಿರ ಬಹುಮಾನ ಮೊತ್ತದ ಪುರುಷರ ಸಿಂಗಲ್ಸ್ ಮತ್ತು ಡಬಲ್ಸ್ ಟೆನಿಸ್ ಪಂದ್ಯಾವಳಿ ಧಾರವಾಡ ಜಿಲ್ಲಾ ಟೆನಿಸ್ ಸಂಸ್ಥೆ (ಡಿಡಿಎಲ್‌ಟಿಎ) ಆಶ್ರಯದಲ್ಲಿ ನಗರದಲ್ಲಿನ ರಾಜಾಧ್ಯಕ್ಷ ಪೆವಿಲಿಯನ್ ಆವರಣದಲ್ಲಿರುವ ಐದು ಹಾರ್ಡ್ ಕೋರ್ಟ್ ಅಂಗಣಗಳಲ್ಲಿ ಅ. 15 ರಿಂದ 22ರ ವರೆಗೆ ನಡೆಯಲಿದ್ದು, ಪಂದ್ಯಾವಳಿಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಅಸೋಸಿಯೇಷನ್ ಅಧ್ಯಕ್ಷರಾದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಅವರು ಟೆನಿಸ್ ಕ್ರೀಡಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪಂದ್ಯಾವಳಿಯ ಮಾಹಿತಿ ನೀಡಿದರು. ಪಂದ್ಯಾವಳಿಯನ್ನು 17ರಂದು ಬೆಳಿಗ್ಗೆ 8.30ಕ್ಕೆ ಕಾರ್ಮಿಕ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಉದ್ಘಾಟಿಸಲಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಖಾತೆ ಸಚಿವ ಬಿ. ನಾಗೇಂದ್ರ, ಶಾಸಕರಾದ ಅರವಿಂದ ಬೆಲ್ಲದ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಜಗತ್ತಿನ ವಿವಿಧ 20 ರಾಷ್ಟ್ರಗಳಿಂದ 44 ಟೆನಿಸ್ ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ಇದರಲ್ಲಿ 12 ಜನರು ಭಾರತೀಯ ಆಟಗಾರರಿದ್ದಾರೆ.
ಭಾರತ, ಅಮೇರಿಕಾ, ಫ್ರಾನ್ಸ್, ಜಪಾನ, ಮಲೇಶಿಯಾ, ನೆದರಲ್ಯಾಂಡ್, ಕೋರಿಯಾ, ಸ್ವೀಡನ್, ಗ್ರೇಟ್ ಬ್ರಿಟನ್, ಇಟಲಿ, ವಿಯಟ್ನಾಂ, ಆಸ್ಟ್ರೇಲಿಯಾ, ನೇಪಾಳ, ಸ್ವೀಜರಲ್ಯಾಂಡ್, ತೈಪೇ, ಅರ್ಜೆಂಟಿನಾ, ಉಕ್ರೇನ್, ಜರ್ಮನಿ, ಇರಾಕ ಮತ್ತು ಕೆಮರೂನ್ ರಾಷ್ಟ್ರಗಳ ಆಟಗಾರರು ತಮ್ಮ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ ಎಂದರು.

ಪಂದ್ಯಾವಳಿಯಲ್ಲಿ ಒಟ್ಟು 32 ಸಿಂಗಲ್ಸ್ ಅರ್ಹತಾ ಸುತ್ತಿನ ಪಂದ್ಯಗಳು ಮತ್ತು 32 ಮೇನ್ ಡ್ರಾ ಪಂದ್ಯಗಳು ನಡೆಯಲಿದ್ದು, ಈ ಪಂದ್ಯಗಳು ಅಕ್ಟೋಬರ್ 15, 16ರಂದು ನಡೆಯಲಿವೆ. ಅರ್ಹತಾ ಸುತ್ತಿನಲ್ಲಿ ಭಾರತದ 18 ಸೇರಿದಂತೆ ಒಟ್ಟು 27 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಮುಖ್ಯ ಡ್ರಾ ಪಂದ್ಯಗಳು 17 ರಿಂದ ನಡೆಯಲಿವೆ.

ಡಬಲ್ಸ್ ಪಂದ್ಯಗಳಲ್ಲಿ ನೇರವಾಗಿ ಮೇನ್ ಡ್ರಾ ಇರುತ್ತವೆ. 16 ಜೋಡಿಗಳು ಡಬಲ್ಸ್ ನಲ್ಲಿ ಭಾಗವಹಿಸುತ್ತವೆ. ಪ್ರತಿ ಪಂದ್ಯ ಬೆಸ್ಟ್ ಆಫ್ ಫೈವ್ ಸೆಟ್ಸ್ ಇರಲಿದೆ. ಅಂತಿಮ ಪಂದ್ಯಗಳು ಡಬಲ್ಸ್ ಹಾಗೂ ಸಿಂಗಲ್ಸ್ ಕ್ರಮವಾಗಿ ಅ. 21 ಹಾಗೂ 22ರಂದು ನಡೆಯಲಿವೆ. ಜಿ.ಆರ್. ಅಮರನಾಥ ಅವರು ಈ ಪಂದ್ಯಾವಳಿಯ ನಿರ್ದೇಶಕರಾಗಿದ್ದು, ಐಟಿಎಫ್ ಮತ್ತು ಕೆಎಸ್‌ಎಲ್‌ಟಿಎ ಉಸ್ತುವಾರಿಯಲ್ಲಿ ಪಂದ್ಯಾವಳಿ ಜರುಗಲಿದೆ .

ಬಹುಮಾನ ಮೊತ್ತ ಮತ್ತು ಪಂದ್ಯಾವಳಿಯ ಖರ್ಚಿಗಾಗಿ ಪ್ರಾಯೋಜಕರಿಂದ ನಿಧಿ ಸಂಗ್ರಹಿಸಲಾಗಿದ್ದು, ಈ ನಿಧಿಯ ಸದ್ಬಳಕೆ ಮಾಡಲಾಗುವುದು.
ಕ್ರೀಡಾ ಪ್ರೇಮಿಗಳಿಗೆ ಪಂದ್ಯ ವೀಕ್ಷಿಸಲು ಮತ್ತು ಕ್ರೀಡಾಪಟುಗಳಿಗೆ ವಸತಿ ಹಾಗೂ ಇತರ ಸೌಲಭ್ಯಗಳಿಗಾಗಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ಪಂದ್ಯಾವಳಿಗಳು ಪ್ರತಿದಿನ ಬೆಳಿಗ್ಗೆ 9ಗಂಟೆಯಿಂದ ಸಂಜೆ 5 ಗಂಟೆವರೆಗೆ ನಡೆಯಲಿವೆ. ಪ್ರೇಕ್ಷಕರಿಗೆ ಮುಕ್ತ ಅವಕಾಶವಿದೆ ಎಂದು ಹೆಗಡೆ ತಿಳಿಸಿದರು.
ನಿರ್ದೇಶಕ ಅಮರನಾಥ ಜಿ.ಆರ್, ಎಸ್ಪಿ ಡಾ.ಗೋಪಾಲ ಬ್ಯಾಕೋಡ, ಬಿಬಿಎಂಪಿ ವಲಯ ಆಯುಕ್ತ ಇಬ್ರಾಹಿಂ ಮೈಗೂರ, ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಸಂತೋಷಕುಮಾರ ಬಿರಾದಾರ, ಟೆನ್ನಿಸ್ ಅಸೋಸಿಯೇಷನ್ ಕಾರ್ಯದರ್ಶಿ ಸಂದೀಪ ಬಣವಿ, ಮಾಧ್ಯಮ ಸಮಿತಿ ಮುಖ್ಯಸ್ಥ ಗುರುರಾಜ ಜಮಖಂಡಿ ಪತ್ರಿಕಾಗೋಷ್ಠಿಯಲ್ಲಿದ್ದರು.

 

administrator

Related Articles

Leave a Reply

Your email address will not be published. Required fields are marked *