ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಬ್ಬರ ಕಡಿಮೆಯಾಗುತ್ತಿದ್ದು, ಹಿನ್ನೆಲೆಯಲ್ಲಿ ಸರ್ಕಾರವು ಹಂತ ಹಂತವಾಗಿ ಅನ್ಲಾಕ್ ಪ್ರಕ್ರಿಯೆ ಆರಂಭಿಸಿದ್ದು, ಜುಲೈ ೫ ರಿಂದ ಅನ್ಲಾಕ್ ೩.೦ ಜಾರಿಯಾಗುವ ಸಾಧ್ಯತೆ ಇದೆ.
ಕೊರೊನಾ ಪಾಸಿಟಿವ್ ರೇಟ್ ಕಡಿಮೆ ಇರುವ ಜಿಲ್ಲೆಗಳಲ್ಲಿ ಅನ್ಲಾಕ್ ೩.೦ ಜಾರಿಗೆ ತರಲು ತಜ್ಞರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆನ್ನಲಾಗಿದ್ದು, ಚಿತ್ರಮಂದಿರ, ಮಾಲ್, ಕ್ಲಬ್, ಬಾರ್, ಸ್ವಿಮ್ಮಿಂಗ್ ಪೂಲ್ಗೆ ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದೆ.
ಜುಲೈ ೫ ರಿಂದ ಬೆಳಗ್ಗೆಯಿಂದ ಸಂಜೆವರೆಗೂ ಚಿತ್ರಮಂದಿರ, ಮಾಲ್, ಕ್ಲಬ್, ಬಾರ್, ಸ್ವಿಮ್ಮಿಂಗ್ ಪೂಲ್ ತೆರೆಯಲು ಅನುಮತಿ ನೀಡುವ ಸಾಧ್ಯತೆ ಇದ್ದು, ಶೇ. ೫೦ ರಷ್ಟು ಗ್ರಾಹಕರಿಗೆ ಅವಕಾಶ ನೀಡಬಹುದು ಎನ್ನಲಾಗಿದೆ. ಬಾರ್ಗಳಲ್ಲಿ ಟೇಬಲ್ ಸರ್ವಿಸ್ ಗೆ ಅವಕಾಶ ಸಿಗುವ ಸಾಧ್ಯತೆ ಇದ್ದು, ೫ ರ ನಂತರ ನೈಟ್ ಕರ್ಪ್ಯೂ ಮುಂದುವರೆಯಬಹುದು. ಈಗ ನೈಟ್ ಕರ್ಪ್ಯೂ ಸಂಜೆ ೬ ಗಂಟೆಯಿಂದ ಜಾರಿಯಲ್ಲಿದ್ದು, ನಂತರ ಸಂಜೆ ೭ ಗಂಟೆಯಿಂದ ನೈಟ್ ಕರ್ಪ್ಯೂ ಜಾರಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.