ನವಲಗುಂದ: ಕೋವಿಡ್ ನಿರ್ವಹಣೆಯಲ್ಲಿ ನವಲಗುಂದ ಮತ ಕ್ಷೇತ್ರದಲ್ಲಿ ತಾಲೂಕಾ ಆಡಳಿತ ಸಮರ್ಥವಾಗಿ ನಿರ್ವಹಿಸಿದ್ದು ಪಾಸಿಟಿವ್ ಪ್ರಕರಣಗಳು ಹತೋಟಿಯಲ್ಲಿ ಇದೆ ಎಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೊರೊನಾ ನಿಯಂತ್ರಣಕ್ಕಾಗಿ ಕ್ಷೇತ್ರದ 37 ಗ್ರಾಮ ಪಂಚಾಯತಿಗಳಿಗೆ ತಾವೇ ಖುದ್ದಾಗಿ ಭೇಟಿ ನೀಡಿ ಜನಜಾಗೃತಿ ಸಭೆ ನಡೆಸಿರುವುದಾಗಿ ಹೇಳಿದರು.
ಸರಕಾರದಿಂದ ಪ್ರತಿ ಗ್ರಾಮ ಪಂಚಾಯತಗೆ 50 ಸಾವಿರ ರೂಗಳ ಅನುದಾನ ನೀಡಲಾಗಿದೆ ಅಲ್ಲದೇ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಥಮವಾಗಿ ನವಲಗುಂದ ಮತಕ್ಷೇತ್ರದಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಯಾಗುತ್ತಿರುವುದು ಈ ಭಾಗದ ಜನರ ಸೌಭಾಗ್ಯ ಎಂದರು.
ಕ್ಷೇತ್ರದಲ್ಲಿ ಒಟ್ಟು 2131 ಪಾಸಿಟಿವ್ ಪ್ರಕರಣ ವರದಿಯಾಗಿದ್ದು ಇದರಲ್ಲಿ 1250 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 330 ಜನರು ಮನೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 65 ಜನರು ಮೃತಪಟ್ಟರೆ ಎಂದು ವಿವರಿಸಿದರು.
ಗ್ರಾಮೀಣ ಜನರು ಭಯ ಬಿಟ್ಟು ಲಸಿಕೆ ಪಡೆಯಲು ಮುಂದಾಗುವಂತೆ ಆಶಾ, ಅಂಗನವಾಡಿ ಕಾರ್ಯಕರ್ತರು, ಶಿಕûಕರು, ಕಂದಾಯ ಇಲಾಖೆ ಹಾಗೂ ವೈದ್ಯಕೀಯ ಸಿಬ್ಬಂದಿ ನಿರಂತರ ಶ್ರಮಿಸುತ್ತಿದೆ ಎಂದರು.
ಕೋಟ್ಯಂತರ ವೆಚ್ಚದ ಆಮ್ಲಜನಕ ಉತ್ಪಾದನೆ ಘಟಕ ದಾನವಾಗಿ ನೀಡಿದ ದೇಶಪಾಂಡೆ ಫೌಂಡೇಶನ್ ಸಹಿತ ಸಹಾಯ ಮಾಡಿದ ನಿರಾಮಯ ಫೌಂಡೇಷನ್, ಎಬಿವಿಪಿ, ಆರ್‍ಎಸ್‍ಎಸ್, ಕ್ಷಮತಾ ಸಂಘಟನೆ ಹಾಗೂ ವಿವಿಧ ಸಂಘಟನೆಗಳಿಗೆ ಕೃತಜ್ಞತೆ ಸಲ್ಲಿಸಿದರು.
ಗೋಷ್ಠಿಯಲ್ಲಿ ತಹಶೀಲ್ದಾರ ನವೀನ ಹುಲ್ಲೂರ, ಜಿಲ್ಲಾ ವೈದ್ಯಾಧಿಕಾರಿ ಡಾ. ಎಸ್.ಎಂ.ಹೋನಕೇರಿ, ಪಿಎಸ್‍ಐ ಜಯಪಾಲ ಪಾಟೀಲ, ಮುಖಂಡರಾದ ಸಿದ್ದಣ್ಣ ಕಿಟಗೇರಿ, ಎಸ್.ಡಿ.ದಾನಪ್ಪಗೌಡರ, ಸುಭಾಷ ಗಾಳಪ್ಪನವರ, ನಾಗಪ್ಪ ಹರ್ತಿ ಇದ್ದರು.