ಡ್ಯಾಮೇಜ್ ಕಂಟ್ರೋಲ್, ಪ್ರತಿತಂತ್ರವೇ ಅಜೆಂಡಾ
ಹುಬ್ಬಳ್ಳಿ: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಎರಡು ದಿನಗಳ ಕಾಲ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಇಂದು ಮತ್ತು ನಾಳೆ ನಡೆಯಲಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಉಸ್ತುವಾರಿ ಅರುಣ ಸಿಂಗ್, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರು, ಶಾಸಕರು ಸೇರಿದಂತೆ 800 ಮಂದಿ ಪಾಲ್ಗೊಳ್ಳಲಿದ್ದಾರೆ.
ಲಂಚದ ಪ್ರಕರಣದಲ್ಲಿ ಈಶ್ವರಪ್ಪನವರ ರಾಜೀನಾಮೆಯಿಂದ ಉದ್ಭವಿಸಿರುವ ಡ್ಯಾಮೇಜ್ ಕಂಟ್ರೋಲ್‌ಗೆ ಕಾರ್ಯಕಾರಿಣಿ ವೇದಿಕೆಯಾಗುವ ಸಾಧ್ಯತೆಗಳಿದ್ದು, ಕಾಂಗ್ರೆಸ್ ಈಶ್ವರಪ್ಪ ಬಂಧನಕ್ಕೆ ಪಟ್ಟು ಹಿಡಿದು ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ಮುಂದಾಗಿರುವ ಹಿನ್ನೆಲೆಯಲ್ಲಿ ಪ್ರತಿತಂತ್ರ ರೂಪಿಸಬೇಕಾದ ಅನಿವಾರ್ಯತೆ ಇದೆ.
ಪಕ್ಷದ ವರ್ಚಸ್ಸು ವೃದ್ಧಿ,ಅಲ್ಲದೇ ಮುಂದಿನ ಒಂದು ವರ್ಷದಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮುಂದಿನ ಕಾರ್ಯಯೋಜನೆ ಹೊಸಪೇಟೆ ಸಾಕ್ಷಿಯಾಗುವ ಸಾಧ್ಯತೆಗಳಿವೆ.
ಇಂದು ಸಂಜೆ 5 ಗಂಟೆಗೆ ಕಾರ್ಯಕಾರಿಣಿ ಉದ್ಘಾಟನೆಗೊಳ್ಳಲಿದ್ದು, ನಡ್ಡಾ, ಸಿಎಂ ಸೇರಿದಂತೆ ಪ್ರಮುಖರು ಭಾಷಣ ಮಾಡಲಿದ್ದು, ರಾತ್ರಿ 7ಕ್ಕೆ ಕೋರ್ ಕಮೀಟಿ ಸಭೆ ನಡೆಯಲಿಇದ್ದು, ನಾಳೆ ಬೆಳಿಗ್ಗೆ 10ಕ್ಕೆ ಸಂತೋಷಜಿಯವರ ವಿಶೇಷ ಭಾಷಣ, ನಡ್ಡಾ ಜತೆ ಪ್ರಮುಖರ ಸಂವಾದ,ಸಮಾರೋಪ ಸಮಾರಂಭದ ನಂತರ ಸಂಜೆ 6 ಕ್ಕೆ ಕಾರ್ಯಕರ್ತರ ಬಹಿರಂಗ ಸಭೆ ನಡೆಯಲಿದೆ.
ನಿಗಮ ಮಂಡಳಿ ನೇಮಕ,ಈಶ್ವರಪ್ಪರಿಂದ ತೆರವಾದ ಸ್ಥಾನವೂ ಸೇರಿದಂತೆ ಬೊಮ್ಮಾಯಿ ಅವರ ಸಂಪುಟದಲ್ಲಿ ಒಟ್ಟು ಐದು ಸಚಿವ ಸ್ಥಾನಗಳು ಖಾಲಿ ಇದ್ದು, ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಸಂಪುಟ ವಿಸ್ತರಣೆಯ ಸುಳಿವು ಸಿಗುತ್ತಿದ್ದಂತೆ ಸಚಿವಾಕಾಂಕ್ಷಿಗಳ ನಿರೀಕ್ಷೆ ಗರಿಗೆದರಿದ್ದು, ತಮ್ಮ ತಮ್ಮ ನಾಯಕರ ಮೂಲಕ ಲಾಬಿ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
ಸಚಿವಾಕಾಂಕ್ಷಿಗಳ ಪೈಕಿ ಕೆಲವರು ಹಿರಿತನದ ಆಧಾರದ ಮೇಲೆ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರೆ, ಕಿರಿಯರು ತಮಗೂ ಒಂದು ಅವಕಾಶ ಕೊಡಿ ಎಂಬ ಮನವಿ ಬೇಡಿಕೆ ಇಟ್ಟಿದ್ದು, ವಿಸ್ತರಣೆ ಕುರಿತು ಬಹುತೇಕ ಒಂದೆರಡು ದಿನಗಳಲ್ಲಿ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ.
ಕಾರ್ಯಕಾರಿಣಿ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲು, ಸಚಿವರಾದ ಆನಂದ ಸಿಂಗ್, ಶಶಿಕಲಾ ಜೊಲ್ಲೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಗೋ ಪೂಜೆಯಲ್ಲಿ ಪಾಲ್ಗೊಂಡರು. ಈಗಾಗಲೇ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು ನಿನ್ನೆಯೇ ಉಸ್ತುವಾರಿ ಸಿಂಗ್ ಆಗಮಿಸಿದ್ದು ಎಲ್ಲ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.