ತುಮಕೂರು: ಶಾಲಾ ಮಕ್ಕಳ ಬಿಸಿಯೂಟದ ಯೋಜನೆಗೆ ಡಾ.ಶಿವಕುಮಾರ ಸ್ವಾಮೀಜಿ ಹೆಸರು ಇಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.
ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯುತ್ಸವ ಪ್ರಯುಕ್ತ ಸಿದ್ಧಗಂಗಾ ಕ್ಷೇತ್ರದಲ್ಲಿ ಆಯೋಜಿಸಿರುವ ’ನಡೆದಾಡುವ ದೇವರ ಬಸವ ಭಾರತ’ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿದ ಬಿ.ವೈ.ವಿಜಯೇಂದ್ರ, ರಾಜ್ಯದಲ್ಲಿ ಲಕ್ಷಾಂತರ ಮಕ್ಕಳಿಗೆ ನೀಡುತ್ತಿರುವ ಬಿಸಿಯೂಟ ಯೋಜನೆಗೆ ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರಿಡಬೇಕು ಎಂದು ಸಿಎಂಗೆ ಮನವಿ ಮಾಡಿದರು.
ಈ ಮನವಿ ಪರಿಗಣಿಸಿದ ಸಿಎಂ, ಮಕ್ಕಳ ಬಿಸಿಯೂಟದ ಯೋಜನೆಗೆ ಸಿದ್ಧಗಂಗಾ ಶ್ರೀಗಳ ಹೆಸರು ಇಡುವುದಾಗಿ ವೇದಿಕೆಯಲ್ಲೇ ಘೋಷಿಸಿದರು.
ಸಾವಿನ ನಂತರವೂ ಬದುಕಿರುವುದು ನೈಜ ಸಾಧಕನಿಂದ ಮಾತ್ರ ಸಾಧ್ಯ. ಡಾ.ಶಿವಕುಮಾರ ಸ್ವಾಮೀಜಿ ಕೇವಲ ಪರಮಪೂಜ್ಯರಾಗಿಲ್ಲ, ಬದುಕಿಗೆ ದಾರಿ ತೋರಿದ ಹಾಗೂ ಬದುಕು ಕಟ್ಟಿ ಕೊಟ್ಟ ಮಹಾನ್ ಸಾಧಕರು. ಸ್ವಾಮೀಜಿ ಅವರಲ್ಲಿ ದೈವಶಕ್ತಿ ಇತ್ತು. ಅವರ ಶ್ರದ್ಧೆ, ನಿಷ್ಠೆ ಹಾಗೂ ಪರಿಶ್ರಮ ಅವರ ಧ್ಯೇಯವಾಗಿತ್ತು. ಅದನ್ನು ಪರಿಪಾಲನೆ ಮಾಡುವುದು ನಮ್ಮ ಕರ್ತವ್ಯ. ಎಲ್ಲಾ ಸಮುದಾಯ, ವರ್ಗದ ಜನರನ್ನು ಪ್ರೀತಿಸಿ, ಬದುಕು ಕಟ್ಟಿಕೊಟ್ಟ ಮಹಾನ್ ಚೇತನ ಸಿದ್ಧಗಂಗಾ ಶ್ರೀಗಳು. ಸರ್ವೋದಯ ಹಾಗೂ ಅತ್ಯೋಂದಯ ಪರಿಕಲ್ಪನೆ ಮಠದಲ್ಲಿ ಸದಾ ನಡೆಯುತ್ತಿದೆ. ಇದು ಕರ್ನಾಟಕಕ್ಕೆ ವಿಸ್ತಾರವಾಗ ಬೇಕು ಎಂದು ಬೊಮ್ಮಾಯಿ ಹೇಳಿದರು. ’ನಡೆದಾಡುವ ದೇವರ ಬಸವ ಭಾರತ’ ಕಾರ್ಯಕ್ರಮವನ್ನು ಕೇಂದ್ರ ಸಚಿವ ಅಮಿತ್ ಶಾ ಉದ್ಘಾಟಿಸಿದರು. ಸುತ್ತೂರು ಮಠದ ಶ್ರೀಗಳು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಅರಗ ಜ್ಞಾನೇಂದ್ರ, ಪ್ರಹ್ಲಾದ್ ಜೋಶಿ, ಸಿ.ಟಿ.ರವಿ, ರೇಣುಕಾಚಾರ್ಯ, ಬಸವರಾಜು, ಮಾಧುಸ್ವಾಮಿ, ವಿಜಯೇಂದ್ರ ಸೇರಿದಂತೆ ಇತರರಿದ್ದರು.