’ಆಕಾಶ’ದೆತ್ತರಕ್ಕೆ ’ಅಭಿ’ಮಾನ ’ಪರಮಾತ್ಮ’ನ ದೊಡ್ಮನೆಯತ್ತ ’ಅರಸು’
ಬೆಂಗಳೂರು: ತೀವ್ರ ಹೃದಯಾಘಾತಕ್ಕೆ ಒಳಗಾಗಿ ಶುಕ್ರವಾರ ಇಹಲೋಕ ಯಾತ್ರೆ ಮುಗಿಸಿದ ವರನಟ ಡಾ. ರಾಜಕುಮಾರ್ ಅವರ ಕಿರಿಯ ಪುತ್ರ, ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆಯನ್ನು ಇಂದೇ ಸಾಯಂಕಾಲ ನೆರವೇರಿಸಲು ನಿರ್ಧರಿಸಲಾಗಿತ್ತಾದರೂ ಅಂತಿಮವಾಗಿ ಮೊದಲಿನಂತೆ ನಾಳೆಯೇ ನಡೆಸಲು ನಿರ್ಧರಿಸಲಾಗಿದೆ.
ಕಂಠೀರವ ಸ್ಟುಡಿಯೋ ಆವರಣದಲ್ಲಿ ಡಾ. ರಾಜ್‌ಕುಮಾರ್ ಪ್ರತಿಷ್ಠಾನದ ಸ್ವಾಮ್ಯದಲ್ಲಿರುವ ಜಮೀನಿನಲ್ಲಿ ಸರ್ಕಾರದ ಸಕಲ ಗೌರವಗಳೊಂದಿಗೆ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಸಂಸ್ಕಾರ ನೆರವೇರಲಿದ್ದು, ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿರುವ ಕಂಠೀರವ ಕ್ರೀಡಾಂಗಣಕ್ಕೆ ನಾಡಿನ ವಿವಿಧ ಭಾಗಗಳಿಂದ ತಂಡೋಪತಂಡವಾಗಿ ಅಭಿಮಾನಿಗಳು ಹರಿದುಬರುತ್ತಲೇ ಇರುವುದರಿಂದ ಅಂತ್ಯಕ್ರಿಯೆ ನಡೆಸಲು ನಾಳೆ ನಿರ್ಧರಿಸಲಾಯಿತೆನ್ನಲಾಗಿದೆ.
ನಿನ್ನೆ ರಾತ್ರಿಯಿಂದಲೂ ಅಭಿಮಾನಿ ದೇವರುಗಳು ತಮ್ಮ ನೆಚ್ಚಿನ ಅಪ್ಪುವಿಗಾಗಿ ಕಣ್ಣೀರು ಹಾಕುತ್ತ ದೇವರನ್ನು ಶಪಿಸುತ್ತಾ, ಅಳುತ್ತಾ ಬರುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಇಡಿ ರಾಜ್ಯದ ಜನತೆ ತಮ್ಮ ಮನೆ ಸದಸ್ಯನೆಂದೆ ಭಾವಿಸಿ ನಾಡಿನ ಜನತೆ ಶ್ರದ್ದಾಂಜಲಿ ಅರ್ಪಿಸುತ್ತಿದ್ದಾರೆ. ಕ್ರೀಡಾಂಗಣದ ಸುತ್ತಮುತ್ತಲ ರಸ್ತೆಗಳೆಲ್ಲ ತುಂಬಿ ಹೋಗಿದ್ದು, ಕಾಪೆರ್ರೇಷನ್ ಸರ್ಕಲ್, ಮಲ್ಯ ರಸ್ತೆಸೇರಿದಂತೆ ಎಲ್ಲೆಡೆ ಜನಸಾಗರವೇ ತುಂಬಿದೆ.
ಅಭಿಮಾನಿಗಳ ದಂಡನ್ನು ನಿಯಂತ್ರಿಸಲು ಪೊಲೀಸರ ಹರಸಾಹಸಪಡುತ್ತಿದ್ದಾರೆ. ನಟ-ನಟಿಯರು, ರಾಜಕೀಯ ಮುಖಂಡರು ಸೇರಿದಂತೆ ಸಾಕಷ್ಟು ಮಂದಿ ಅಂತಿಮ ದರ್ಶನಕ್ಕಾಗಿ ಆಗಮಿಸುತ್ತಿದ್ದು, ಎಲ್ಲಿ ನೋಡಿದರಲ್ಲಿ ಜನಸಾಗರವೇ ಕಾಣುವಂತಾಗಿದೆ.
ಮಧ್ಯಾಹ್ನ 1.30ರ ವೇಳೆಗೆ ಪುನೀತ್ ಪುತ್ರಿ ದೆಹಲಿಗೆ ಬಂದು ಅಲ್ಲಿಂದ ಸಂಜೆ 4ರಿಂದ 5 ಗಂಟೆ ವೇಳೆಗೆ ಬೆಂಗಳೂರಿಗೆ ಬರಲಿದ್ದಾರೆ.
ಅಂತಿಮವಾಗಿ ನಾಳೆ ಪುನೀತ್ ಅಂತ್ಯಕ್ರಿಯೆಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರು, ಗಣ್ಯರಿಗೆ ಅವಕಾಶವಿದ್ದು, ಸಾರ್ವಜನಿಕ ರಿಗೆ ಅವಕಾಶ ಇಲ್ಲ, ಸಹಕರಿಸಬೇಕು ಅಭಿಮಾನಿಗಳು ಸಂಯಮದಿಂದ ವರ್ತಿಸಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ.
ಹುಬ್ಬಳ್ಳಿ ವರದಿ: ಹುಬ್ಬಳ್ಳಿಯ ಹೃದಯ ಭಾಗವಾದ ಕಿತ್ತೂರ ಚೆನ್ನಮ್ಮ ವರ್ತುಳದಲ್ಲಿ ಹುಬ್ಬಳ್ಳಿ ಅಟೋ ಮಾಲೀಕ ಹಾಗೂ ಚಾಲಕರ ಸಂಘದ ಆಶ್ರಯದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಯುವ ನಟನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಸ್ಟೇಡಿಯಂಗೆ ಸಿಎಂ ಭೇಟಿ
ನಟ ಪುನೀತ್ ರಾಜಕುಮಾರ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿರುವ ಕಂಠೀರವ ಕ್ರೀಡಾಂಗಣಕ್ಕೆ ಇಂದು ಬೆಳಿಗ್ಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ, ಪಾರ್ಥೀವ ಶರೀರದ ಅಂತಿಮ ದರ್ಶನದ ವ್ಯವಸ್ಥೆಯನ್ನು ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಪುನೀತ್ ಸಹೋದರ ರಾಘವೇಂದ್ರ ರಾಜಕುಮಾರ್ ಅವರೊಂದಿಗೆ ಸಮಾಲೋಚನೆ ನಡೆಸಿದರಲ್ಲದೇ ಈ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಜೊತೆಗಿದ್ದರು
ಸಂಯಮದಿಂದ ವರ್ತಿಸಿ
ನಾವು ಸಂಯಮ, ಜವಾಬ್ದಾರಿಯಿಂದ ವರ್ತಿಸಬೇಕಾಗಿದೆ. ಜನರು ಈ ವರೆಗೆ ಅತ್ಯುತ್ತಮವಾಗಿ ಸಹಕರಿಸಿದ್ದಾರೆ. ನಮ್ಮ ಜವಾಬ್ದಾರಿಯುತ ನಡವಳಿಕೆ ಡಾ. ರಾಜ್ ಕುಮಾರ್ ಹಾಗೂ ಪುನೀತ್ ಅವರಿಗೆ ಗೌರವ ಸಲ್ಲಿಸಿದಂತೆ. ಶಾಂತಿ, ಸ್ನೇಹದಿಂದ ಇರುವುದು ಕನ್ನಡಿಗರ ಸಂಸ್ಕೃತಿ. ಇದನ್ನು ನಾವು ಇಂದು ಮೆರೆಯಬೇಕಾಗಿದೆ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಮೆರವಣಿಗೆಯ ರೂಟ್ ಮ್ಯಾಪ್
ಸಾಗರೋಪಾದಿಯಲ್ಲಿ ಅಭಿಮಾನಿಗಳು ಆಗಮಿಸಿ ಪುನೀತ್ ಅಂತಿಮ ದರ್ಶನ ಪಡೆಯುತ್ತಿದ್ದು,ಮೆರವಣಿಗೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಕಂಠೀರವ ಸ್ಟೇಡಿಯಂ ನಿಂದ ಮೆರವಣಿಗೆ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ರೂಟ್ ಮ್ಯಾಪ್ ಸಿದ್ಧವಾಗಿದೆ.
ಕಾರ್ಪೊರೇಷನ್ ವೃತ್ತ, ಮೈಸೂರು ಬ್ಯಾಂಕ್ ಸರ್ಕಲ್, ಚಾಲುಕ್ಯ ಸರ್ಕಲ್, ವಿಂಡ್ಸನ್ ಮ್ಯಾನರ್, ಕಾವೇರಿ ಜಂಕ್ಷನ್, ಸ್ಯಾಂಕಿ ಕೆರೆ, ಯಶವಂತಪುರ, ಗೋವರ್ಧನ್, ಗೊರಗುಂಟೆ ಪಾಳ್ಯ ಸಿಗ್ನಲ್ ಮೂಲಕವಾಗಿ ಮೆರವಣಿಗೆ ಸಾಗಲಿದೆ. ಬಳಿಕ ಸಂಜೆ ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ಸಮಾಧಿ ಪಕ್ಕದಲ್ಲಿಯೇ ಪುನೀತ್ ಅಂತ್ಯಕ್ರಿಯೆ ನೆರವೇರಲಿದೆ.
ಸ್ವಯಂಘೋಷಿತ ಬಂದ್!
ಪುನೀತ್ ರಾಜ್ ಕುಮಾರ್ ನಿಧನರಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನೀರವ ಮೌನ ಕಂಡು ಬಂದಿದ್ದು, ಸ್ವಯಂ ಘೋಷಿತ ಬಂದ್ ಸ್ಥಿತಿ ನಿರ್ಮಾಣವಾಗಿದೆ.
ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್, ಶಿವಾಜಿನಗರ, ರಾಜಾಜಿನಗರ, ಜಯನಗರ, ವಿಜಯನಗರ ಸೇರಿದಂತೆ ಪ್ರಮುಖ ನಗರಳು ಸೇರಿದಂತೆ ತುಮಕೂರು ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಮೈಸೂರು ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ,ಹುಬ್ಬಳ್ಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನೀರವ ಮೌನ ಕಂಡುಬಂದಿದೆ.
ನಟ ಪುನೀತ್ ಅಗಲಿಕೆಯಿಂದ ನೊಂದಿರುವ ಅಭಿಮಾನಿಗಳು ತಮ್ಮ ವ್ಯಾಪರ ವಹಿವಾಟುಗಳನ್ನು ನಿಲ್ಲಿಸಿ, ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ರಾಜ್ಯಾದ್ಯಂತ ಖಾಸಗಿ ಶಾಲೆಗಳಿಗೆ ರಜೆ ನೀಡಿದ್ದರೆ, ಇಂದು ನಡೆಯಬೇಕಾಗಿದ್ದ ಪರೀಕ್ಷೆಗಳನ್ನು ಸಹ ಮುಂದೂಡಲಾಗಿದೆ.
ಪೊಲೀಸರ ಬಿಗಿ ಭದ್ರತೆ
ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಅವರ ಪಾರ್ಥಿವ ಶರೀರ ಇರಿಸಿರುವ ಕಂಠೀರವ ಕ್ರೀಡಾಂಗಣ ಹಾಗೂ ಅಂತ್ಯಕ್ರಿಯೆ ನಡೆಯಲಿರುವ ಕಂಠೀರವ ಸ್ಟುಡಿಯೊ ಬಳಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ನಿನ್ನೆ ಸಂಜೆಯಿಂದಲೇ ಕ್ರೀಡಾಂಗಣದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹಾಗೂ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್, ಭದ್ರತೆ ಉಸ್ತುವಾರಿ ನೋಡಿಕೊಳ್ಳು ತ್ತಿದ್ದಾರೆ. ಕಮಿಷನರೇಟ್ ವ್ಯಾಪ್ತಿಯ ಹಾಗೂ ಕೆಎಸ್‌ಆರ್‌ಪಿಯ ೫,೦೦೦ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಎಡಿಜಿಪಿಗಳು, ಹೆಚ್ಚುವರಿ ಕಮಿಷನರ್‌ಗಳು, ಜಂಟಿ ಕಮಿಷನರ್‌ಗಳು, ಡಿಸಿಪಿಗಳು, ಎಸಿಪಿಗಳು, ಇನ್‌ಸ್ಪೆಕ್ಟರ್‌ಗಳು, ಪಿಎಸ್‌ಐಗಳೂ ಭದ್ರತೆ ನೋಡಿಕೊಳ್ಳುತ್ತಿದ್ದಾರೆ.
ಪಾರ್ಥಿವ ಶರೀರದ ಅಂತಿಮ ಯಾತ್ರೆ ವೇಳೆಯಲ್ಲೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ರಸ್ತೆಯುದ್ದಕ್ಕೂ ಪೊಲೀಸರ ಕಾವಲು ಇರಲಿದೆ.
ವಿಧಿವಿಧಾನ ನೆರವೇರಿಸುವ ವಿನಯ
ಬೆಂಗಳೂರು: ಪುನೀತ್ ಪಾರ್ಥಿವ ಶರೀರದ ಅಂತಿಮ ವಿಧಿವಿಧಾನವನ್ನು ರಾಘವೇಂದ್ರ ರಾಜಕುಮಾರ್ ಅವರ ಪುತ್ರ. ವಿನಯ್ ರಾಜ್‌ಕುಮಾರ್ ನೆರವೇರಿಸಲಿದ್ದಾರೆನ್ನಲಾಗಿದೆ.
ರಾಘವೇಂದ್ರ ರಾಜಕುಮಾರ್ ಅವರ ಹಿರಿಯ ಪುತ್ರ ವಿನಯ್ ರಾಜಕುಮಾರ್ ಅವರು ಚಿಕ್ಕಪ್ಪನ ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವ ಕುರಿತು ಕುಟುಂಬದ ಸದಸ್ಯರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಪುನೀತ್ ರಾಜಕುಮಾರ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಹೀಗಾಗಿ ಪಾರ್ಥೀವ ಶರೀರದ ವಿಧಿ ವಿಧಾನಗಳನ್ನು ವಿನಯ್ ನೆರವೇರಿಸಲಿದ್ದಾರೆ ಎಂದು ಕುಟುಂಬದ ಸಮೀಪವರ್ತಿ ಮೂಲಗಳು ತಿಳಿಸಿವೆ.