ದಿಂಗಾಲೇಶ್ವರ ಶ್ರೀಗಳಿಂದ ಟ್ರ್ಯಾಕ್ಟರ್ ರ್‍ಯಾಲಿಗೆ ಚಾಲನೆ
ನರಗುಂದ (ಬಿ.ಎಂ.ಹೊರಕೇರಿ ವೇದಿಕೆ): ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು, ಕೃಷ್ಣಾ ಮೇಲ್ದಂಡೆ-ಮಹದಾಯಿ-ನವಲಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಒತ್ತಾಯಿಸಿ ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ ವತಿಯಿಂದ ಪರಿಷತ್ ಮಾಜಿ ವಿಪಕ್ಷ ನಾಯಕ ಎಸ್.ಆರ್.ಪಾಟೀಲ ನೇತೃತ್ವದಲ್ಲಿ ಹಮ್ಮಿಕೊಂಡ ಸಂಕಲ್ಪ ಯಾತ್ರೆಯ ಟ್ರಾಕ್ಟರ್ ರ್‍ಯಾಲಿಗೆ ಇಂದು ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು ಚಾಲನೆ ನೀಡಿದರು.
ಉತ್ತರ ಕರ್ನಾಟಕದ ಜಿಲ್ಲೆಗಳು ವಿವಿಧ ನದಿಗಳ ಮೂಲ ಹೊಂದಿದರೂ ಸಮರ್ಪಕವಾಗಿ ಬಳಸಿಕೊಳ್ಳದಿರುವುದರಿಂದ ಅಭಿವೃದ್ಧಿಯಿಂದ ವಂಚಿತವಾಗಿದೆ. ಕೈಗಾರಿಕೆಗಳ ರಹಿತ ಪ್ರದೇಶವಾಗಿ ಗುಳೇ ಹೋಗುವವರ ಸಂಖ್ಯೆಯೂ ಹೆಚ್ಚಾಗಿದೆ. ಕಾರಣ ಪ್ರತಿಯೊಬ್ಬರನ್ನು ಜಾಗೃತಿಗೊಳಿಸುವ ಉದ್ದೇಶದೊಂದಿಗೆ ಈ ರ್‍ಯಾಲಿ ಆರಂಭಗೊಂಡಿದ್ದು ಮುಂದೆ ಈ ಹೋರಾಟ ಬಹುದೊಡ್ಡ ಕ್ರಾಂತಿಯನ್ನು ಮಾಡಲಿದೆ ಎಂದರು.
ಹೋರಾಟದ ನೇತೃತ್ವ ವಹಿಸಿರುವ ಎಸ್,ಆರ್. ಪಾಟೀಲ ಮಾತನಾಡಿ ಕೃಷ್ಣ ಮೆಲ್ದಂಡೆ ಯೋಜನೆ ಮಹದಾಯಿ ಹಾಗೂ ನವಲಿ ಯೋಜನೆಗಳು ಕೂಡಲೇ ಪ್ರಾರಂಭವಾಗಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ಈ ಬ್ರಹತ್ ಸಂಕಲ್ಪಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಲ್ಲ ಕ್ಷೇತ್ರದಲ್ಲಿಯೂ ಉತ್ತರ ಕರ್ನಾಟಕ ಹಿಂದೆ ಬಿದ್ದಿದೆ ಈ ಮೂರು ಯೋಜನೆಗಳು ಅನುಷ್ಠಾನಗೊಳ್ಳಲು ನಾವು ಪಕ್ಷಾತೀತವಾಗಿ ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ನರಗುಂದ ಪತ್ರಿವನ ಮಹಾಸ್ವಾಮಿಗಳು, ಬೈರನಹಟ್ಟಿ ಮಹಾಸ್ವಾಮಿಗಳು, ಶಿರಕೋಳದ ಗುರುಸಿದ್ಧ ಶಿವಾಚಾರ್ಯರು, ಸುಳ್ಳ ಪಂಚಗ್ರಹ ಹಿರೇಮಠದ ಸಿದ್ರಾಮೇಶ್ವರ ಶಿವಾಚಾರ್ಯರು, ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ, ಬ್ಯಾಹಟ್ಟಿಯ ಮರುಳಸಿದ್ಧ ಶಿವಾಚಾರ್ಯರು, ನವಲಗುಂದದ ನಾಗಲಿಂಗ ಮಹಾಸ್ವಾಮಿಗಳು, ಅಣ್ಣಿಗೇರಿಯ ಹಾಜಿ ಅಬ್ದುಲ್ ಖಾದರ ಸನ್ನುಭಾಯಿ ಧರ್ಮಗುರುಗಳು, ಹೊಳೆಆಲೂರಿನ ಎಚ್ಚರಸ್ವಾಮಿಜಿ, ಸದಾಶಿವ ಮಹಾಂತ ಶಿವಾಚಾರ್ಯರು, ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಗುರುಪಾದ ಸ್ವಾಮಿಜಿ, ಪಂಡಿತ್ ಪ್ರವೀಣಕುಮಾರ ಮಹಾಸ್ವಾಮಿಜಿ, ಹುಬ್ಬಳ್ಳಿಯ ಫಾದರ್ ಜೋಸೆಫ್ ಲೋಫೆಸ್ ಸೇರಿದಂತೆ ಸರ್ವ ಸಮುದಾಯದ ಸ್ವಾಮೀಜಿಗಳು ಪಾಲ್ಗೊಂಡು ಶುಭ ಹಾರೈಸಿದರು.
ನರಗುಂದ ಮಾಜಿ ಶಾಸಕ ಬಿ.ಆರ್. ಯಾವಗಲ್, ರೋಣ ಮಾಜಿ ಶಾಸಕ ಜಿ. ಎಸ್ ಪಾಟೀಲ,ಅಜಯಕುಮಾರ್ ಸರನಾಯಕ್, ನಂಜಯ್ಯನಮಠ, ರಾಜ್ಯ ರೈತ ಸೇನೆ ಅಧ್ಯಕ್ಷ ಸೊಬರದಮಠ ಸ್ವಾಮೀಜಿ, ಎಂ.ಎನ್.ಪಾಟೀಲ, ರಾಜುಗೌಡ ಪಾಟೀಲ, ಪ್ರಕಾಶ ಅಂತರಗೊಂಡ, ರವಿ ಬಡ್ನಿ, ಮೇಟಿ ಸೇರಿದಂತೆ ನರಗುಂದ ನವಲಗುಂದ ಬಾದಾಮಿ ಬೀಳಗಿ ರಾಮದುರ್ಗ ಬಿಜಾಪುರ ಬಾಗಲಕೋಟ ಜಿಲ್ಲೆ ಹಾಗೂ ವಿವಿಧ ತಾಲೂಕುಗಳಿಂದ ಬ್ರಹತ್ ಪ್ರಮಾಣದಲ್ಲಿ ರೈತರು ಪಾಲ್ಗೊಂಡಿದ್ದರು.
ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸುವ ಯಾತ್ರೆಯು ಕೊಣ್ಣುರು, ಹೊಳೆ ಆಲೂರು, ಬಾದಾಮಿ ಮೂಲಕ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ರ್‍ಯಾಲಿ ಸಂಚರಿಸಿ ಏ.೧೭ರ ಮಧ್ಯಾಹ್ನ ೩.೩೦ಕ್ಕೆ ಬೀಳಗಿ ತಾಲೂಕಿನ ಬಾಡಗಂಡಿಯ ಬಾಪೂಜಿ ಅಂತಾರಾಷ್ಟ್ರೀಯ ಶಾಲಾ ಮೈದಾನದಲ್ಲಿ ಬೃಹತ್ ಸಮಾವೇಶವಾಗಿ ಮಾರ್ಪಾಡಾಗಲಿದೆ.
ಮಹದಾಯಿ ಹೋರಾಟ ಸಮಿತಿ, ರಾಜ್ಯ ರೈತ ಸಂಘ, ಬಾಗಲಕೋಟೆ ನಡುಗಡ್ಡೆ ಹೋರಾಟ ಸಮಿತಿ, ಉತ್ತರ ಕರ್ನಾಟಕ ನಿರ್ಮಾಣ ವೇದಿಕೆ, ಕೃಷ್ಣಾ ಮೇಲ್ದಂಡೆ ಯೋಜನೆ ಹಿತರಕ್ಷಣಾ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ಗುತ್ತಿ ಬಸವಣ್ಣ ಹೋರಾಟ ಸಮಿತಿ, ಕೃಷ್ಣಾ ತೀರ ಮುಳುಗಡೆ ಕ್ಷೇಮಾಭಿವೃದ್ಧಿ ಸಂಸ್ಥೆಗಳು ಹೋರಾಟ ಬೆಂಬಲಿಸಿದ್ದು, ರೈತರಿಂದ ಹೋರಾಟಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದೆ.