ಹುಬ್ಬಳ್ಳಿ-ಧಾರವಾಡ ಸುದ್ದಿ
ಮೇಯರ್ ಚುನಾವಣೆ: ಬಿಜೆಪಿ ಸದಸ್ಯರು ರೆಸಾರ್ಟನಿಂದ ನೇರ ಮತದಾನಕ್ಕೆ

ಮೇಯರ್ ಚುನಾವಣೆ: ಬಿಜೆಪಿ ಸದಸ್ಯರು ರೆಸಾರ್ಟನಿಂದ ನೇರ ಮತದಾನಕ್ಕೆ

ಅಪರೇಷನ್‌ಗೆ ಅವಕಾಶ ಇಲ್ಲದಂತೆ ಮುನ್ನೆಚ್ಚರಿಕೆ

ಹುಬ್ಬಳ್ಳಿ: ರಾಜ್ಯದಲ್ಲಿ ಕಮಲ ಸರ್ಕಾರದ ಆಡಳಿತಕ್ಕೆ ತರಲು ತಾವೇ ಹುಟ್ಟು ಹಾಕಿದ ’ಆಪರೇಷನ್’ ಅಸ್ತ್ರ ತಮಗೆ ತಿರುಮಂತ್ರವಾಗಬಾರದೆಂಬ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ದಿ. 20ರಂದು ನಡೆಯಲಿರುವ ಮೇಯರ್, ಉಪಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ತನ್ನ ಬಹುತೇಕ ಸದಸ್ಯರನ್ನು ದಾಂಡೇಲಿಯ ರೆಸಾರ್ಟ್‌ಗೆ ಸ್ಥಳಾಂತರಿಸಿದೆ.


ಮುಕ್ಕಾಲು ಪಾಲು ಸದಸ್ಯರು ನಿನ್ನೆಯೇ ಶಿಫ್ಟ್ ಆಗಿದ್ದು ಉಳಿದ ಕೆಲ ಹಿರಿಯರು ಇಂದು ರಾತ್ರಿ ವೇಳೆಗೆ ದಾಂಡೇಲಿಯ ಹಾದಿ ಹಿಡಿದು ಸೇರ್ಪಡೆಯಾಗಲಿದ್ದಾರೆ. ಕಾಂಗ್ರೆಸ್ ಪಾಲಿಕೆಯನ್ನು ತನ್ನ ಕೈವಶ ಮಾಡಿಕೊಳ್ಳಲು ಅಧಿಕಾರ ಮತ್ತು 50 ಲಕ್ಷದವರೆಗಿನ ಹಣದ ಆಮಿಷ ಒಡ್ಡುತ್ತಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ ಬೆನ್ನ ಹಿಂದೆಯೇ ತನ್ನ ಸದಸ್ಯರಿಗೆ ಯಾರೂ ಗಾಳ ಹಾಕಬಾರದೆಂಬ ಲೆಕ್ಕಾಚಾರದಿಂದ ರೆಸಾರ್ಟಗೆ ಕಳುಹಿಸಿದೆ.


ಸೋಮವಾರ ಬ್ರೆಜಿಲ್ ಪ್ರವಾಸದಲ್ಲಿರುವ ಪಾಲಿಕೆ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಬಹುದಾದ ಸುಪ್ರೀಮೋ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗಿದ್ದು ಅವರು ಸಹ ನೇರವಾಗಿ ರೆಸಾರ್ಟಗೆ ತೆರಳಿ ಅಲ್ಲಿಯೇ ಅಭಿಪ್ರಾಯ ಆಲಿಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದ್ದು, ನೇರವಾಗಿ ದಿ. 20ರ ಮುಂಜಾನೆ ನಾಮಪತ್ರ ಸಲ್ಲಿಸುವ ವೇಳೆಗೆ ಎಲ್ಲ ಸದಸ್ಯರನ್ನು ಕರೆತರಲು ಬಿಜೆಪಿ ಯೋಜನೆ ರೂಪಿಸಿದೆ.
ಇಂದು ಮತ್ತು ನಾಳೆ ರೆಸಾರ್ಟಗಳನ್ನೂ ಬದಲಿಸುವ ಸಾಧ್ಯತೆಗಳಿದ್ದು ಸೋಮವಾರ ಎಲ್ಲರನ್ನೂ ಒಂದೆಡೆ ಸೇರಿಸಲಿದ್ದು ಜೋಶಿಯವರೊಂದಿಗೆ ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ ಪಾಲ್ಗೊಳ್ಳಲಿದ್ದಾರೆ.
ತೆರಳಿರುವವರಲ್ಲಿ ಅನೇಕರು ತಮ್ಮ ಕುಟುಂಬ ಸದಸ್ಯರೊಂದಿಗೆ ಹೋಗಿದ್ದಾರೆ. ಪಾಲಿಕೆ ಒಟ್ಟು ಲೆಕ್ಕಾಚಾರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೇರುವ ಸ್ಪಷ್ಟ ಬಹುಮತ ಹೊಂದಿದ್ದರೂ ಮಾಜಿ ಸಿಎಂ ಜಗದೀಶ ಶೆಟ್ಟರ್ ಫ್ಯಾಕ್ಟರ್‌ಗೆ ಹೆದರಿ ಬಿಜೆಪಿ ತನ್ನ ಸದಸ್ಯರನ್ನು ಸ್ಥಳಾಂತರಿಸಿದೆ.


82 ಸದಸ್ಯರ ಪಾಲಿಕೆಯಲ್ಲಿ ಮೂವರು ಪಕ್ಷೇತರರ ಬೆಂಬಲದೊಂದಿಗೆ 42 ಬಲ ಹೊಂದಿದ್ದು ನಾಲ್ವರು ಜನಪ್ರತಿನಿಧಿಗಳ ಮತದಿಂದ ಅದು 46 ಆಗಲಿದೆ. 33 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌ಗೆ ಇಬ್ಬರು ಪಕ್ಷೇತರರ ಬೆಂಬಲವಿದ್ದು, ಎಂಐಎಂ ,ಇನ್ನೋರ್ವ ಪಕ್ಷೇತರ ಅಲ್ಲದೇ ಎರಡು ಜನಪ್ರತಿನಿಧಿಗಳ ಬೆಂಬಲ ಕೂಡಿದರೂ೪೧ ಆಗಲಿದೆ. ವಿನಯ ಕುಲಕರ್ಣಿ ಅವಕಾಶ ದೊರೆಯದೆ ಹೋದಲ್ಲಿ 40ರ ಗಡಿಯಲ್ಲೇ ನಿಲ್ಲಲಿದೆ. ಕನಿಷ್ಟ 5-6 ಸದಸ್ಯರು ಗೈರು ಹಾಜರಾದಲ್ಲಿ ಫಲಿತಾಂಶದಲ್ಲಿ ಏರು ಪೇರು ನಿಶ್ಚಿತ ಎನ್ನಲಾಗಿದೆ.ಮೇಲ್ನೋಟಕ್ಕೆ ಅಂತಹ ಯತ್ನ ಕಾಂಗ್ರೆಸ್ ಪಾಳೆಯದಲ್ಲಿ ಗಂಭೀರವಾಗಿ ನಡೆದಿಲ್ಲ. ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡದವರಿಗೆ ಮತ್ತೆ ಮಣೆ ಹಾಕಬೇಕೋ, ಬಹುಸಂಖ್ಯಾತರನ್ನು ಗದ್ದುಗೆಗೆ ಕೂಡ್ರಿಸಬೇಕೋ,ಅಥವಾ ಉಳಿದವರನ್ನು ಪರಿಗಣಿಸಬೇಕೋ ಎಂಬ ಚಿಂತನೆ ನಡೆದಿದ್ದು ದಿ.19ರಂದು ಜೋಶಿಯವರು ಬಂದ ನಂತರವೇ ಅಖೈರುಗೊಳ್ಳಲಿದೆ.

ಬಹುಸಂಖ್ಯಾತರಿಗೋ -ಇತರರಿಗೋ?

ಮೇಯರ್ ರೇಸ್‌ನಲ್ಲಿ ಹುಬ್ಬಳ್ಳಿಯ ಮೀನಾಕ್ಷಿ ವಂಟಮೂರಿ, ಮಾಜಿ ಮೇಯರ್ ರಾಧಾಬಾಯಿ ಸಫಾರೆ, ರೂಪಾ ಶೆಟ್ಟಿ, ಪೂಜಾ ಸತೀಶ ಶೇಜವಾಡಕರ, ಉಪಮೇಯರ್ ಉಮಾ ಮುಕುಂದ, ಸೀಮಾ ಮೊಗಲಿಶೆಟ್ಟರ್ ಹಾಗೂ ಧಾರವಾಡದ ಜ್ಯೋತಿ ಪಾಟೀಲ ಹೆಸರು ಮುಂಚೂಣಿಯಲ್ಲಿದೆ.


ಉಪಮೇಯರ ಸ್ಥಾನಕ್ಕೆ ಶಂಕರ ಶೇಳಕೆ, ಸತೀಶ ಹಾನಗಲ್, ಸಂತೋಷ ಚವ್ಹಾಣ ಮುಂತಾದವರು ರೇಸ್‌ನಲ್ಲಿದ್ದಾರೆ.
ಕಾಂಗ್ರೆಸ್‌ನಲ್ಲಿ ಸಹ ಮೇಯರ್ ಸ್ಥಾನಕ್ಕೆ ಸುವರ್ಣ ಕಲಕುಂಟ್ಲ, ಅಕ್ಷತಾ ಅಸುಂಡಿ,ಕವಿತಾ ಕಬ್ಬೇರ ಪರಿಗಣನೆಗೆ ಬರಬಹುದಾಗಿದೆ.

ಗೆಲುವಿಗೆ ಪ್ರಯತ್ನ: ಅಲ್ತಾಫ್ ಹಳ್ಳೂರ 

ಹುಬ್ಬಳ್ಳಿ: ಬಿಜೆಪಿಯವರಿಗೆ ತಮ್ಮ ಪಕ್ಷದ ಸದಸ್ಯರ ಮೇಲೆ ನಂಬಿಕೆ ಇಲ್ಲದ್ದರಿಂದ ರೆಸಾರ್ಟಗೆ ಕರೆದೊಯ್ದಿದ್ದಾರೆ.ನಾವು ಅಭ್ಯರ್ಥಿ ಕಣಕ್ಕಿಳಿಸುತ್ತೇವೆ.ಈ ಬಾರಿಯೂ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಹೇಳಿದ್ದಾರೆ.
’ಸಂಜೆ ದರ್ಪಣ’ದೊಂದಿಗೆ ಮಾತನಾಡಿದ ಅವರು ನಾಳೆ ಪಾಲಿಕೆ ಸದಸ್ಯರ ಸಭೆ ಕರೆದಿದ್ದು, ಮತ್ತೊಮ್ಮೆ ಅಭಿಪ್ರಾಯ ಕೇಳಲಾಗುವುದು. ಮಾಜಿ ಸಿಎಂ ಜಗದೀಶ ಶೆಟ್ಟರ್, ಉಸ್ತುವಾರಿ ಸಚಿವ ಸಂತೋಷ ಲಾಡ, ಶಾಸಕರಾದ ಪ್ರಸಾದ ಅಬ್ಬಯ್ಯ, ವಿನಯ ಕುಲಕರ್ಣಿ ಇತರರ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು ಬಿಜೆಪಿಗೆ ಹಾಗೂ ನಮಗೆ ಅಲ್ಪ ಅಂತರವಿದೆ ಕಾದು ನೋಡೋಣ ಎಂದರಲ್ಲದೇ ೧೯ರ ಸಂಜೆಯೊಳಗೆ ಮೇಯರ್, ಉಪಮೇಯರ್ ಅಭ್ಯರ್ಥಿ ಅಂತಿಮಗೊಳಿಸುತ್ತೇವೆ ಎಂದರು.

ಆಮಿಷಕ್ಕೆ ನಮ್ಮ ಸದಸ್ಯರಾರೂ ಮರಳಾಗುವುದಿಲ್ಲ: ಮಹೇಶ ಟೆಂಗಿನಕಾಯಿ

ಕಾಂಗ್ರೆಸ್‌ನ ಆಮಿಷಕ್ಕೆ ನಮ್ಮ ಸದಸ್ಯರಾರೂ ಮರಳಾಗುವುದಿಲ್ಲ. ಆದರೂ ಮುನ್ನೆಚ್ಚರಿಕೆಯಿಂದ ಎಲ್ಲರೂ ಒಂದೆಡೆ ಇರುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ೧೯ಕ್ಕೆ ಎಲ್ಲ ಅಭಿಪ್ರಾಯರ ಆಲಿಸುತ್ತೇವೆ. ಪಾಲಿಕೆಯಲ್ಲಿ ಮತ್ತೆ ನಮ್ಮ ಬಾವುಟವೇ ಹಾರಲಿದೆ.
ಮಹೇಶ ಟೆಂಗಿನಕಾಯಿ
ಶಾಸಕ, ರಾಜ್ಯ ಪ್ರ.ಕಾರ್ಯದರ್ಶಿ

 

administrator

Related Articles

Leave a Reply

Your email address will not be published. Required fields are marked *