ಹುಬ್ಬಳ್ಳಿ-ಧಾರವಾಡ ಸುದ್ದಿ

ಮಹಾನಗರ , ಗ್ರಾಮೀಣ ’ಸಾರಥ್ಯ’ಕ್ಕೆ ಕಮಲ ಪಡೆಯಲ್ಲಿ ವ್ಯಾಪಕ ಪೈಪೋಟಿ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿಶೇಷ ಮಹತ್ವ – ಗ್ರಾಮಾಂತರದಲ್ಲಿ 17ಕ್ಕೂ ಹೆಚ್ಚು ಆಕಾಂಕ್ಷಿಗಳು

ಹುಬ್ಬಳ್ಳಿ : ಕಳೆದ ವಿಧಾನಸಭಾ ಸೋಲಿನ ಕರಿನೆರಳಿನಿಂದ ಹೊರ ಬರಲು ಹಾಗೂ ಆಂತರಿಕ ಭಿನ್ನಮತದಿಂದ ಕಂಗಾಲಾಗಿರುವ ರಾಜ್ಯ ಬಿಜೆಪಿಯ ನೂತನ ಸಾರಥಿ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಹೊಸ ಪಡೆಯ ಚಿಂತನ ಮಂಥನ ನಡೆದ ಬೆನ್ನಲ್ಲೇ ಜಿಲ್ಲಾ ಘಟಕಗಳನ್ನು ಪುನರ್ರಚಿಸಲು ಮುಂದಾಗಿದ್ದು ಹುಬ್ಬಳ್ಳಿ ಧಾರವಾಡ ಮಹಾನಗರ ಮತ್ತು ಧಾರವಾಡ ಗ್ರಾಮೀಣ ಎರಡೂ ಕಡೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿಯಿದ್ದು ಈ ಹಿನ್ನೆಲೆಯಲ್ಲಿ ವಿವರ ಸಂಗ್ರಹಿಸಲು ವೀಕ್ಷಕರು ನಿಯುಕ್ತಿಗೊಂಡಿದ್ದಾರೆ.


ಮಹಾನಗರ ವೀಕ್ಷಕರಾಗಿ ಬಹುಕಾಲದಿಂದ ಸಂಘಟನೆಯಲ್ಲಿರುವ ಫಣೀಶ ಹಾಗೂ ಗ್ರಾಮೀಣ ವೀಕ್ಷಕರಾಗಿ ಉಡುಪಿ ಶಾಸಕ ಯಶಪಾಲ ಸುವಣ್ಣ ಆಗಮಿಸಲಿದ್ದಾರೆ. ದಿ.೩೦ರಂದು ಮಹಾನಗರ ವ್ಯಾಪ್ತಿಯ ಪ್ರಮುಖರ ಸಭೆ ಹಾಗೂ ನಾಡಿದ್ದು ೩೧ರಂದು ಗ್ರಾಮೀಣ ವ್ಯಾಪ್ತಿಯ ಪ್ರಮುಖರ ಸಭೆ ಇಲ್ಲಿನ ಖಾಸಗಿ ಹೊಟೆಲ್‌ನಲ್ಲಿ ನಡೆಯಲಿದ್ದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರುಗಳು, ಮಾಜಿ ಶಾಸಕರುಗಳು ಸಹಿತ ಪ್ರಮುಖರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಹು.ಧಾ.ಮಹಾನಗರ ಅಧ್ಯಕ್ಷ ಪಟ್ಟ ಪ್ರಮುಖ ಸಮುದಾಯಕ್ಕೆ ಧಕ್ಕಿದರೆ, ಗ್ರಾಮೀಣ ಇತರೆ ಹಿಂದುಳಿದ ವರ್ಗಕ್ಕೆ ಧಕ್ಕಲಿದ್ದು, ಗ್ರಾಮೀಣ ಒಬಿಸಿ ಪಾಲಾದರೆ ಹು.ಧಾ. ಅವಳಿನಗರ ಲಿಂಗಾಯತರಿಗೆ ನಿಕ್ಕಿ ಎನ್ನುವಂತಹ ಲೆಕ್ಕಾಚಾರ ಇದ್ದು ಮುಂಬರುವ ಲೋಕಸಭೆ ಚುನಾವಣೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರೇ ಮತ್ತೆ ಕಣಕ್ಕಿಳಿಯುವದರಿಂದ ಅವರ ಇಶಾರೆಯ ಮೇಲೆ ನಿಂತಿದೆ ಎನ್ನಲಾಗುತ್ತಿದೆ. ಎಲ್ಲರ ಅಭಿಪ್ರಾಯಗಳನ್ನು ಕ್ರೋಡಿಕರಿಸಿ ರಾಜ್ಯ ಸಮಿತಿಯಲ್ಲಿ ಚರ್ಚಿಸಿ ಅಂತಿಮವಾಗಿ ಪ್ರಕಟಿಸುವ ಸಾಧ್ಯತೆಗಳಿವೆ.
ಅರವಿಂದ ಬೆಲ್ಲದ ಅವರು ಅರ್ಧಕ್ಕೆ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಕಳೆದ 17 ತಿಂಗಳಿಂದ ಅಧ್ಯಕ್ಷರಾಗಿರುವ ಸಂಜಯ ಕಪಟಕರ ಮತ್ತೊಂದು ಪೂರ್ಣಾವಧಿಗೆ ಬೇಡಿಕೆ ಇಟ್ಟಿದು ಅರ್ಧ ಡಜನ್‌ಗೂ ಹೆಚ್ಚು ಆಕಾಂಕ್ಷಿಗಳಿದ್ದಾರೆ.


ಹಾಲಿ ಮಹಾನಗರ ಪ್ರಧಾನ ಕಾರ್ಯದರ್ಶಿ ಅಲ್ಲದೇ ಸಂಘಟನಾ ನಿಪುಣರಾಗಿರುವ ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ, ಇನ್ನೋರ್ವ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಮಾಜಿ ಮಹಾಪೌರ ಈರೇಶ ಅಂಚಟಗೇರಿ, ಹಿರಿಯ ಪಾಲಿಕೆ ಸದಸ್ಯ,ಸಂಘಟನೆಯ ಆಳ ಅಗಲ ಬಲ್ಲ ವಿಜಯಾನಂದ ಶೆಟ್ಟಿ, ಎಂಸಿಎ ಮಾಜಿ ನಿರ್ದೇಶಕ ಅಲ್ಲದೇ ಹಲವು ವರ್ಷಗಳಿಂದ ಸಂಘಟನೆಯಲ್ಲಿರುವ ವಿರೇಶ ಸಂಗಳದ, ಮಹಾನಗರ ವಕ್ತಾರ ರವಿ ನಾಯಕ, ಪೂರ್ವ ಕ್ಷೇತ್ರದ ಪ್ರಭಾವಿ ಮುಖಂಡ ಸತೀಶ ಶೇಜವಾಡಕರ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಹೆಸರು ಪ್ರಭಲವಾಗಿ ಕೇಳಿ ಬರುತ್ತಿವೆ. ಆಕಾಂಕ್ಷಿಗಳು ಈಗಾಗಲೇ ಲಾಭಿಯಲ್ಲಿದ್ದು ಮಹಾನಗರ ಅಧ್ಯಕ್ಷ ಸ್ಥಾನ ಈ ಬಾರಿ ಬಹುಸಂಖ್ಯಾತ ಸಮುದಾಯಕ್ಕೆ ಅಥವಾ ಹಿಂದುಳಿದ ವರ್ಗಗಳಿಗೊ ಎಂಬುದು ಮಹತ್ವದ್ದಾಗಿದೆ.


ಮಹಾನಗರ ಅಧ್ಯಕ್ಷ ಸ್ಥಾನ ಬಹುತೇಕ ಸೆಂಟ್ರಲ್, ಮತ್ತು ಪಶ್ಚಿಮ ಕ್ಷೇತ್ರಗಳ ಪಾಲಾಗಿದ್ದು ಈ ಬಾರಿ ಅದು ಸೆಂಟ್ರಲ್‌ಗೆ ಮತ್ತೆ ಧಕ್ಕಲಿದೆಯೋ ಅಥವಾ ಅನೇಕ ವರ್ಷಗಳಿಂದ ಒಮ್ಮೆಯೂ ಸಂಘಟನಾ ಹಿರಿತನದ ಮಹತ್ವದ ಹುದ್ದೆ ದೊರೆಯದ ಪೂರ್ವದ ಪಾಲಾಗುವುದೊ ಕಾದು ನೋಡಬೇಕಾಗಿದೆ.
ಇನ್ನು ಗ್ರಾಮೀಣ ಅಧ್ಯಕ್ಷ ಸ್ಥಾನಕ್ಕೂ ಹಿಂದೆಂದೂ ಇರದ ಪೈಪೋಟಿಯಿದ್ದು ಇಲ್ಲಿಯೂ ಆಕಾಂಕ್ಷಿಗಳ ಸಂಖ್ಯೆ 20ರ ಸನಿಹಕ್ಕೆ ಬಂದು ನಿಂತಿದೆ. ಹಾಲಿ ಗ್ರಾಮೀಣ ಅಧ್ಯಕ್ಷ ಬಸವರಾಜ ಕುಂದಗೋಳಮಠ ಒಮ್ಮೆ ಕುಂದಗೋಳ ಮತ್ತು ಒಮ್ಮೆ ಕಲಘಟಗಿ ಲೆಕ್ಕಾಚಾರದಲ್ಲಿ ಸ್ಥಾನ ಅಲಂಕರಿಸಿದ್ದು, ಮೂರನೇ ಬಾರಿ ಅವರೂ ಮುಂದುವರಿಯಲು ತೀವ್ರ ಯತ್ನ ನಡೆಸಿದ್ದಾರೆ. ಅಲ್ಲದೇ ಹಾಲಿ ಪ್ರಧಾನ ಕಾರ್ಯದರ್ಶಿಗಳಾ ಶಿವಾನಂದ ಗುಂಡಗೋವಿ (ಧಾರವಾಡ), ನಿಂಗಪ್ಪ ಸುತಗಟ್ಟಿ (ಕಲಘಟಗಿ) ಮತ್ತು ಮಾಲತೇಶ ಶ್ಯಾಗೋಟಿ (ಕುಂದಗೋಳ) ಮೂವರು ಪ್ರಭಲ ಆಕಾಂಕ್ಷಿಗಳಾಗಿದ್ದು ತಮ್ಮದೇ ಲೆಕ್ಕಾಚಾರ ಹೊಂದಿದ್ದಾರೆ. ಧಾರವಾಡ ಮಾಜಿ ಜಿಲ್ಲಾ ಅಧ್ಯಕ್ಷರಾಗಿ ಸಮರ್ಥವಾಗಿ ಅಧಿಕಾರ ನಿಭಾಯಿಸಿರುವ ನಾಗರಾಜ ಗಾಣಿಗೇರ, ಯುವ ಮೋರ್ಚಾದ ಜಿಲ್ಲಾ ಅಧ್ಯಕ್ಷ ಶಂಕರ ಕೊಮಾರ ದೇಸಾಯಿ, ಓಬಿಸಿ ಮೋರ್ಚಾದ ಅಧ್ಯಕ್ಷ ಶಿವು ಬೆಳಾರದ, ಮಾಜಿ ಅಧ್ಯಕ್ಷರೂ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿರುವ ಈರಣ್ಣ ಜಡಿ ಮತ್ತೆ ಯತ್ನ ನಡೆಸಿದ್ದಾರೆ.


ಮಾಜಿ ಜಿ.ಪಂ ಅಧ್ಯಕ್ಷ ಅಡಿವೆಪ್ಪ ಮನಮಿ, ಮಾಜಿ ಹುಬ್ಬಳ್ಳಿ ತಾಲೂಕಾ ಅಧ್ಯಕ್ಷ ರಾಜು ಕಂಪ್ಲಿ, ಅಳ್ನಾವರದ ಶಿವಾಜಿ ಡೊಳ್ಳಿನ , ಕರಿಯಪ್ಪ ಕುರ್ಲಗೇರಿ, ಜಿಲ್ಲಾ ಯುವ ಮೋರ್ಚಾ ಮಾಜಿ ಉಪಾಧ್ಯಕ್ಷ ಪರಮೇಶ್ವರ ಉಳವಣ್ಣವರ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಸಿದ್ದನಗೌಡ ಪಾಟೀಲ, ಸಂತೋಷ ಜೀವನಗೌಡ್ರ ಅವರೂ ಉತ್ತುಕರಾಗಿದ್ದಾರೆನ್ನಲಾಗಿದೆ.
ಮಹಾನಗರ ಪಾಲಿಕೆ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರೂ ಗ್ರಾಮೀಣದ ಎಲ್ಲ ಭಾಗದಲ್ಲಿ ತಮ್ಮದೇ ಪಡೆ ಹೊಂದಿರುವ ಹುಬ್ಬಳ್ಳಿಯ ಶಿವಾನಂದ ಮುತ್ತಣ್ಣವರ ತಮ್ಮ ಹಿರಿತನ ಮತ್ತು ಸಂಘಟನಾ ಸಾಮರ್ಥ್ಯ ಪರಿಗಣಿಸಿ ಗ್ರಾಮೀಣ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಲು ನೀಡಲು ಹಕ್ಕೊತ್ತಾಯವನ್ನು ಸ್ವತಃ ಜೋಶಿಯವರ ಬಳಿಯೇ ಮಂಡಿಸಿದ್ದು ಇತರ ನಾಯಕರಿಗೂ ಮನವಿ ಮಾಡಿದ್ದಾರೆ.


ಹಾಲಿ ಕುಂದಗೋಳ ಶಾಸಕ ಎಂ.ಆರ್.ಪಾಟೀಲ, ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ, ಈರಣ್ಣ ಜಡಿ ಅಲ್ಲದೇ ಒಂದು ಅವಧಿ ಬಸವರಾಜ ಕುಂದಗೋಳಮಠ ಸೇರಿದಂತೆ ಜಿಲ್ಲಾ ಅಧ್ಯಕ್ಷಗಿರಿಯಲ್ಲಿ ಕುಂದಗೋಳ ಕ್ಷೇತ್ರದ ಪಾರಮ್ಯ ಹೆಚ್ಚಿದ್ದು, ನವಲಗುಂದ,ಕಲಘಟಗಿಗೂ ಅಧಿಕಾರ ಧಕ್ಕಿದ್ದು, ಹಾಗಾಗಿ ಈ ಬಾರಿ ಧಾರವಾಡ ತಾಲೂಕಿಗೆ ನೀಡಬೇಕೆಂಬ ಒತ್ತಡ ಪ್ರಭಲವಾಗಿ ಕೇಳಿ ಬಂದಿದೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರ ಇಲ್ಲದಿರುವುದರಿಂದ ಹಾಲಿ ಆಥವಾ ಮಾಜಿ ಶಾಸಕರಿಗೆ ನೀಡಬೇಕೆಂಬ ಚಿಂತನೆಯೂ ನಡೆದಿದೆ ಎನ್ನಲಾಗುತ್ತಿದ್ದು ಒಂದು ವೇಳೆ ಆ ಫಾರ್ಮುಲಾ ಅನುಷ್ಟಾನಕ್ಕೆ ಬಂದರೂ ಅಚ್ಚರಿಯೇನಿಲ್ಲ.ಗ್ರಾಮೀಣದಲ್ಲಿ ಇದುವರೆಗೆ ಸುಮಾರು 17 ಅಭ್ಯರ್ಥಿಗಳು ತಮ್ಮ ಅರ್ಜಿ ಸಲ್ಲಿಸಿದ್ದು ನಾಳೆಯೊಳಗೆ ಇನ್ನೂ ಕೆಲವರು ಸಲ್ಲಿಸಬಹುದಾಗಿದೆ ಎಂದು ಗ್ರಾಮೀಣ ಅಧ್ಯಕ್ಷ ಬಸವರಾಜ ಕುಂದಗೋಳಮಠ ಖಚಿತಪಡಿಸಿದ್ದಾರೆ.

ವೀಕ್ಷಕರು ನಾಳೆ ಮತ್ತು ನಾಡಿದ್ದು ಆಗಮಿಸಲಿದ್ದು ಸಭೆ ನಡೆಸಿ ಎಲ್ಲ ಪ್ರಮುಖರ ಅಹವಾಲು ಆಲಿಸಲಿದ್ದಾರೆ. ಈ ಬಾರಿ ಅವಳಿನಗರದಲ್ಲಿ ಅಧ್ಯಕ್ಷಸ್ಥಾನಕ್ಕೆ ಹಲವು ಆಕಾಂಕ್ಷಿಗಳಿದ್ದಾರೆ. ಎಲ್ಲರ ಅಭಿಪ್ರಾಯ ಪಡೆದು ವರಿಷ್ಠರು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ.


ಮಹೇಶ ಟೆಂಗಿನಕಾಯಿ
ಸೆಂಟ್ರಲ್ ಶಾಸಕರು

ಗ್ರಾಮೀಣದಲ್ಲಿ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಅನೇಕರು ಆಕಾಂಕ್ಷಿಗಳಿದ್ದು ಸಂಘಟನೆ ಎಲ್ಲ ಕ್ಷೇತ್ರಗಳಲ್ಲೂ ಬಲಿಷ್ಠವಾಗಿದ್ದು ಆ ಹಿನ್ನೆಲೆಯಲ್ಲಿ ಪೈಪೋಟಿ ಸಹಜ. ವೀಕ್ಷಕರಾದ ಉಡುಪಿ ಶಾಸಕ ಯಶಪಾಲ ಸುವರ್ಣ ಅವರು ಎಲ್ಲರ ಅಭಿಪ್ರಾಯ ಆಲಿಸಿ ವರಿಷ್ಠರಿಗೆ ವರದಿ ಸಲ್ಲಿಸುವರು.


ಎಂ.ಆರ್.ಪಾಟೀಲ
ಕುಂದಗೋಳ ಶಾಸಕರು

 

administrator

Related Articles

Leave a Reply

Your email address will not be published. Required fields are marked *