ಹುಬ್ಬಳ್ಳಿ-ಧಾರವಾಡ ಸುದ್ದಿ
ಕರ್ನಾಟಕ ರಣಜಿ ತಂಡದಲ್ಲಿ ಉತ್ತರ ಕರ್ನಾಟಕದ ಕಲಿಗಳು

ಕರ್ನಾಟಕ ರಣಜಿ ತಂಡದಲ್ಲಿ ಉತ್ತರ ಕರ್ನಾಟಕದ ಕಲಿಗಳು

ರೋಹಿತ್, ಸುಜಯ್ ಆರ್ಭಟಕ್ಕೆ ಕಾದಿರುವ ಕ್ರಿಕೆಟ್ ಪ್ರೇಮಿಗಳು

ಪ್ರಸನ್ನಕುಮಾರ ಹಿರೇಮಠ
ಹುಬ್ಬಳ್ಳಿ: ರಾಜ್ಯ ರಣಜಿ ತಂಡದಲ್ಲಿ ಉತ್ತರ ಕರ್ನಾಟಕ ಪ್ರತಿಭೆಗಳಿಗೆ ಮತ್ತೊಮ್ಮೆ ಅವಕಾಶ ಸಿಕ್ಕಿದ್ದು, ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್‌ನ ರೋಹಿತ್ ಕುಮಾರ್ ಎಸಿ ಹಾಗೂ ಬೆಳಗಾವಿಯ ಸುಜಯ್ ಸಾತೇರಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಮತ್ತೆ ಉತ್ತರ ಕರ್ನಾಟಕದ ಕ್ರಿಕೆಟ್ ಕಲಿಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚುವ ಅವಕಾಶ ದೊರೆತಂತಾಗಿದೆ.


ಬಹಳ ವರ್ಷಗಳ ನಂತರ ಉತ್ತರ ಕರ್ನಾಟಕದ ಆಟಗಾರರಿಗೆ ರಾಜ್ಯ ರಣಜಿ ತಂಡದಲ್ಲಿ ಸ್ಥಾನ ದೊರೆತಿರುವುದು ಈ ಭಾಗದ ಕ್ರಿಕೆಟ್ ಪ್ರಿಯರಲ್ಲಿ ಸಂತಸವನ್ನು ಉಂಟು ಮಾಡಿದೆ. ಎಡಗೈ ಸ್ಪಿನ್ ಮಾಂತ್ರಿಕ ರೋಹಿತ್ ಕುಮಾರ್, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹಾಗೂ ವಿಕೆಟ್ ಕೀಪರ್ ಸುಜಯ್ ಸಾತೇರಿ, ಈ ಬಾರಿ ತಮ್ಮ ಕೈಚಳಕ ತೋರಿಸಲು ಸನ್ನದ್ಧರಾಗಿದ್ದಾರೆ.
ಸುಜಯ್ ಸಾತೇರಿ ಈಗಾಗಲೇ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದು, ತಮ್ಮ ಬ್ಯಾಟಿಂಗ್ ಸಾಮರ್ಥ್ಯ ತೋರಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಫೀಲ್ಡ್‌ಗೆ ಇಳಿಯುವ ಸುಜಯ್ ಬ್ಯಾಟ್‌ನಿಂದ ಈಗಾಗಲೇ ಸುಮಾರು ಶತಕ ಸಿಡಿದಿವೆ. ಇದೀಗ ರಾಜ್ಯದ ರಣಜಿ ತಂಡವನ್ನು ಪ್ರತಿನಿಧಿಸುತ್ತಿದ್ದು, ಅವರ ಬ್ಯಾಟ್‌ನಿಂದ ಮತ್ತಷ್ಟು ಶತಕಗಳು ಸಿಡಿಯುವ ವಿಶ್ವಾಸ ಹೆಚ್ಚಾಗಿದೆ.
ಈ ಕುರಿತು ’ಸಂಜೆ ದರ್ಪಣ’ದೊಂದಿಗೆ ಸಂತಸ ಹಂಚಿಕೊಂಡ ಸುಜಯ್, ‘ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಮೂಲಕ ಕ್ರಿಕೆಟ್‌ನಲ್ಲಿ ನನ್ನ ಪಯಣವನ್ನು ಆರಂಭಿಸಿದ್ದೇನೆ. ರಾಜ್ಯ ತಂಡದಲ್ಲಿ ಸ್ಥಾನ ದೊರೆತಿರುವುದು ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಬರುವ ದಿನಗಳಲ್ಲಿ ಮತ್ತಷ್ಟು ಶ್ರಮ ವಹಿಸಿ, ತಂಡದ ಗೆಲುವಿಗೆ ಶ್ರಮಿಸುತ್ತೇನೆ’ ಎಂದು ತಿಳಿಸಿದ್ದಾರೆ.


ಬ್ಯಾಟಿಂಗ್ ಜೊತೆಗೆ ವಿಕೆಟ್‌ಗಳ ಹಿಂದೆಯೂ ಅದೇ ಕೈಚಳಕ ಪ್ರದರ್ಶನ ನೀಡುವ ಸುಜಯ್, ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಉತ್ಸಾಹದಲ್ಲಿದ್ದಾರೆ.
ರೋಹಿತ್‌ಕುಮಾರ್: ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್‌ನ ರೋಹಿತ್‌ಕುಮಾರ್, ರಾಜ್ಯದ ರಣಜಿ ತಂಡದಲ್ಲಿ ಸ್ಪಿನ್ ಬೌಲಿಂಗ್ ಹೊಣೆಯನ್ನು ನಿಭಾಯಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ರಾಣೆಬೆನ್ನೂರಿನ ರೋಹಿತ್‌ಕುಮಾರ್, 15 ನೇ ವಯಸ್ಸಿನಲ್ಲಿಯೇ ಕ್ರಿಕೆಟ್ ಮೈದಾನಕ್ಕೆ ಇಳಿದವರು. ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ ಮೂಲಕ ತಮ್ಮ ಕ್ರಿಕೆಟ್ ಸಾಧನೆಯ ಮೆಟ್ಟಿಲುಗಳನ್ನು ಏರುತ್ತಿದ್ದಾರೆ. ಗದಗಿನ ಸುನೀಲ್ ಜೋಶಿ ಹಾಗೂ ಧಾರವಾಡದ ಆನಂದ ಕಟ್ಟಿ ನಂತರ ಇದೀಗ ರೋಹಿತ್‌ಕುಮಾರ್ ರಾಜ್ಯ ತಂಡದಲ್ಲಿ ಆಡುವ ಉತ್ತರ ಕರ್ನಾಟಕ ಪ್ರತಿಭೆಯಾಗಿದ್ದಾರೆ.
ತಮ್ಮ ಆಯ್ಕೆಯ ಬಗ್ಗೆ ಅನಿಸಿಕೆ ಹಂಚಿಕೊಂಡಿರುವ ರೋಹಿತ್‌ಕುಮಾರ್, ’ಮಯಾಂಕ್, ಮನೀಷ್ ಅವರಂತಹ ಆಟಗಾರರ ಜೊತೆಗೆ ಮೈದಾನಕ್ಕೆ ಇಳಿಯುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ. ಈ ಆಟಗಾರರ ಜೊತೆಗೆ ಆಡುವ ಅವಕಾಶ ಸಿಕ್ಕಿರುವುದು ಅದೃಷ್ಟ ಎಂದು ಬಣ್ಣಿಸಿದ್ದಾರೆ.


ಜ.5 ರಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಲಿರುವ ರಣಜಿ ಪಂದ್ಯದಲ್ಲಿ ಉತ್ತರ ಕರ್ನಾಟಕದ ಕ್ರಿಕೆಟ್ ಕಲಿಗಳು ಮೈದಾನಕ್ಕೆ ಇಳಿಯಲಿದ್ದು, ಮತ್ತೊಮ್ಮೆ ಕ್ರಿಕೆಟ್ ಅಂಗಳದಲ್ಲಿ ಉತ್ತರ ಕರ್ನಾಟಕದ ವೈಭವ ಮರುಕಳಿಸುವ ವಿಶ್ವಾಸ ಹೆಚ್ಚಾಗಿದೆ.


ಆಯ್ಕೆಯಾದ ಆಟಗಾರರಿಗೆ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವೀರಣ್ಣ ಸವಡಿ, ಕಾರ್ಯದರ್ಶಿ ಮುರಗೇಶ್ ಹಂಚಿನ, ಜಂಟಿ ಕಾರ್ಯದರ್ಶಿ ಸಂಜಯ್ ಗಾಮಿ, ಹಿರಿಯ ಆಟಗಾರರಾದ ಮಹೇಶ ಪಾಟೀಲ, ಮನೋಜ್ ಕುಮಾರ್ ಮಲ್ಹೋತ್ರಾ, ರಿಯಾಜ್ ಖತೀಬ್, ನಿಜಾಮುದ್ದೀನ್ ಸೇರಿದಂತೆ ಇತರ ಕ್ರಿಕೆಟ್ ಆಟಗಾರರು ಉತ್ತಮ ಪ್ರದರ್ಶನ ನೀಡಲಿ ಎಂದು ಶುಭ ಹಾರೈಸಿದ್ದಾರೆ.

ಉತ್ತರ ಕರ್ನಾಟಕದಿಂದ ರಣಜಿ ಆಡಿರುವ ಗದಗಿನ ಸುನೀಲ್ ಜೋಶಿ ಹಾಗೂ ಧಾರವಾಡದ ಆನಂದ ಕಟ್ಟಿ ನಂತರ ಇದೀಗ ರೋಹಿತ್‌ಕುಮಾರ್ ಕೂಡಾ ಎಡಗೈ ಸ್ಪೀನರ್ ಆಗಿ ಹಾಗೂ ಧಾರವಾಡದ ಸೋಮಶೇಖರ ಶಿರಗುಪ್ಪಿ, ಅವಿನಾಶ ವೈದ್ಯ ಇಬ್ಬರು ವಿಕೆಟ್ ಕಿಪರ್ ಆಗಿ ಆಯ್ಕೆಯಾಗಿದ್ದರು ಅವರ ಸಾಲಿಗೆ ಈಗ ಸುಜಯ್ ರಾಜ್ಯ ತಂಡದಲ್ಲಿ ಆಡುವ ಈ ಭಾಗದ ಆಟಗಾರರಾಗಿದ್ದಾರೆ.

ಸಾಮರ್ಥ್ಯಕ್ಕೆ ಅವಕಾಶ

ರೋಹಿತ್ ಆಯ್ಕೆಯ ಮೂಲಕ ಪ್ರತಿಭೆಗಳಿಗೆ ಅವಕಾಶವಿದೆ ಎಂಬುದು ಸಾಬೀತಾಗಿದೆ. ಈ ಮೂಲಕ ಉತ್ತರ ಕರ್ನಾಟಕದ ಕ್ರಿಕೆಟ್ ಪಟುಗಳಿಗೆ ಒಂದು ರೀತಿಯಲ್ಲಿ ಸ್ಫೂರ್ತಿ ದೊರೆತಂತಾಗಿದೆ. ಯಾವುದೇ ಶಿಫಾರಸು ಇಲ್ಲದೇ ರಾಜ್ಯ ರಣಜಿ ತಂಡಕ್ಕೆ ರೋಹಿತ್‌ಕುಮಾರ್ ಅವರು ಆಯ್ಕೆಯಾಗಿರುವುದು ಸಾಮರ್ಥ್ಯಕ್ಕೆ ಅವಕಾಶ ಇದ್ದೇ ಇದೆ ಎಂಬುದನ್ನು ತೋರಿಸುತ್ತದೆ


ವೀರಣ್ಣ ಸವಡಿ, ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ

 

 

 

administrator

Related Articles

Leave a Reply

Your email address will not be published. Required fields are marked *