ಶೌಚಾಲಯದ ದುರ್ವಾಸನೆಗೆ ಸಾರ್ವಜನಿಕರು ಹೈರಾಣು
ನೂತನ ಜಿಲ್ಲಾಧಿಕಾರಿ ಇತ್ತ ಗಮನಹರಿಸಿದರೆ ಸುಧಾರಣೆ ಸಾಧ್ಯ
ಧಾರವಾಡ : ಇಲ್ಲಿನ ಉಪ ನೊಂದಣಾಧಿಕಾರಿ ಕಚೇರಿಯಲ್ಲಿನ ಅವ್ಯವಸ್ಥೆಯಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ.
ಮಿನಿವಿಧಾನ ಸೌಧದಲ್ಲಿರುವ ಉಪ ನೊಂದಣಾಧಿಕಾರಿಗಳ ಕಚೇರಿಗೆ ಆಸ್ತಿ ನೊಂದಣಿ, ವಿವಾಹ ನೊಂದಣಿ, ಋಣಭಾರ ಪ್ರಮಾಣ ಪತ್ರ ಪಡೆಯುವುದು ಸೇರಿದಂತೆ ತರಹೇವಾರಿ ಕೆಲಸದ ನಿಮಿತ್ತ ಸಾರ್ವಜನಿಕರು ಈ ಕಚೇರಿಗೆ ಬರುತ್ತಾರೆ.
ಕಚೇರಿಯ ಒಳಗೆ ಅನೇಕ ಅಡತಡೆಗಳ ಮಧ್ಯೆಯೂ ನೊಂದಣಿ ಮತ್ತಿತರ ಸೇವೆಗಳನ್ನು ಪ್ರತಿನಿತ್ಯ ಒದಗಿಸಲಾಗುತ್ತದೆ. ಕಚೇರಿಯ ಪ್ರವೇಶ ದ್ವಾರದ ಮುಂದೆ ದ್ವಿಚಕ್ರ ವಾಹನಗಳನ್ನು ಬೇಕಾಬಿಟ್ಟಿ ನಿಲ್ಲಿಸಲಾಗುತ್ತಿದೆ. ಹಿರಿಯ ನಾಗರಿಕರು, ವಿಕಲಚೇತನರು, ಮಹಿಳೆಯರು ಕೂಡ ತಮ್ಮ ಕೆಲಸಕ್ಕೆ ಕಚೇರಿಗೆ ಬರುವುದು ಸಾಮಾನ್ಯ. ಆದರೆ, ಕಚೇರಿ ಪ್ರಮುಖ ದ್ವಾರದ ಮುಂದೆಯೇ ಬೈಕ್ ಗಳ ನಿಲುಗಡೆಯಿಂದ ಒಳ ಪ್ರವೇಶಕ್ಕೆ ಅಡಚಣಿ ಆಗುತ್ತಿದೆ.
ವಿಕಲಚೇತನರು ಮತ್ತು ಹಿರಿಯ ನಾಗರಿಕರನ್ನು ಒಳಗೆ ಕರೆದೊಯ್ಯಲು ತ್ರಿಚಕ್ರ ಸೈಕಲ್ ಇದೆ. ಆದರೆ, ಕಚೇರಿಗೆ ತ್ರಿಚಕ್ರ ಸೈಕಲ್ ಒಳ ಹೋಗಲು ಬೈಕ್ ಗಳ ನಿಲುಗಡೆಯಿಂದ ತೊಂದರೆ ಆಗುತ್ತಿದೆ.
ಕಚೇರಿಯ ಮುಂಭಾಗದ ಆವರಣದಲ್ಲಿನ ಎದುರಿಗೆ ಬೈಕ್, ಕಾರುಗಳ ಪಾರ್ಕಿಂಗ್ ಗೆ ಸಾಕಷ್ಟು ಸ್ಥಳಾವಕಾಶವಿದೆ. ಆದಾಗ್ಯೂ ಕಚೇರಿಯ ಪ್ರವೇಶ ದ್ವಾರದ ಹತ್ತಿರವೇ ಬೈಕ್ ಮತ್ತು ಕಾರುಗಳನ್ನು ಪಾರ್ಕಿಂಗ್ ಮಾಡುತ್ತಿರುವುದು ತಲೆನೋವಾಗಿ ಪರಿಣಮಿಸಿದೆ. ಈ ರೀತಿಯ ಅನಾನುಕೂಲತೆಯ ಪರಿಸ್ಥಿತಿ ಇದ್ದರೆ ವಾಹನಗಳ ಮಾಲಿಕರಿಗೆ ತಿಳಿಸಿ ಹೇಳಲು ಅಥವಾ ಬೇರೆ ಕಡೆ ಪಾರ್ಕಿಂಗ್ ಮಾಡಲು ಸೂಚಿಸಲು ಓರ್ವ ಸಿಬ್ಬಂದಿ ಕೂಡ ಇಲ್ಲ. ಈ ಹಿಂದೆ ಹಂಗಾಮಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಸರಿಯಾಗಿ ಕೂಲಿ ಕೊಡದ ಕಾರಣ ಆತನೂ ಈಗ ಕಾಣಿಸುತ್ತಿಲ್ಲ.
ಕಚೇರಿಗೆ ಬರುವವರು ತಮ್ಮ ವಾಹನಗಳನ್ನು ಸ್ವಲ್ಪವೇ ಅಂತರದಲ್ಲಿನ ಖುಲ್ಲಾ ಜಾಗೆಯಲ್ಲಿ ನಿಲ್ಲಿಸುವುದನ್ನು ರೂಢಿಸಿಕೊಳ್ಳಬೇಕಿದೆ. ಅಥವಾ ಬೇಕಾಬಿಟ್ಟಿ ವಾಹನ ಪಾರ್ಕಿಂಗ್ ಮಾಡುವರನ್ನು ನಿಯಂತ್ರಿಸಲು ಓರ್ವ ವ್ಯಕ್ತಿಯನ್ನು ಕಚೇರಿಯ ಮುಖ್ಯಸ್ಥರು ನಿಯೋಜಿಸಬೇಕು. ಇಲ್ಲದಿದ್ದರೆ ನಿತ್ಯವೂ ಈ ಕಿರಿಕಿರಿ ತಪ್ಪಿದ್ದಲ್ಲ.
ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಿದರೆ ಸುಧಾರಣೆ ಕಾಣಬಹುದು. ಇಲ್ಲದಿದ್ದರೆ ಸಾರ್ವಜನಿಕರ ಹಿತಕ್ಕೆ ಗೌರವ ಇಲ್ಲದಂತಾಗುತ್ತದೆ.
ದುರ್ವಾಸನೆಯ ಆಗರ
ಇನ್ನು ಈ ಕಚೇರಿಯ ಶೌಚಾಲಯದ ಸ್ಥಿತಿ ಅತ್ಯಂತ ಕೆಟ್ಟದಾಗಿದೆ. ಸಮರ್ಪಕ ನೀರಿನ ಕೊರತೆ ಮತ್ತು
ಸರಿಯಾಗಿ ನಿರ್ವಹಣೆ ಇಲ್ಲದಿರುವುದರಿಂದ ಶೌಚಾಲಯದ ದುರ್ವಾಸನೆ ನಿರಂತರ ಮೂಗಿಗೆ ಅಪ್ಪಳಿಸುತ್ತದೆ. ಕಚೇರಿಗೆ ಬರುವ ಸಾರ್ವಜನಿಕರು ಶೌಚಾಲಯದಿಂದ ಹೊರಸೂಸುವ ದುರ್ವಾಸನೆಯಿಂದ ಅತ್ತ ಸುಳಿಯದಂತಾಗಿದೆ.
ಇತ್ತ ಕಚೇರಿಯ ತುಂಬೆಲ್ಲ ಅತಿಯಾದ ದುರ್ವಾಸನೆಯ ಕಿರಕಿರಿಯಿಂದ ಬೇಸತ್ತ ಸಾರ್ವಜನಿಕರು, ಬೇಗೆ ಕೆಲಸ ಮುಗಿದರೆ ಸಾಕಪ್ಪ ಎನ್ನುತ್ತಿದ್ದಾರೆ. ಇನ್ನು ಕಚೇರಿ ಸಿಬ್ಬಂದಿಯ ಗೋಳಂತು ಹೇಳತೀರದು. ಶೌಚಾಲಯದ ದುರ್ವಾಸನೆಯಿಂದ ಮುಕ್ತಿ ಯಾವಾಗ ಎಂದು ಕಾಯುತ್ತಿದ್ದಾರೆ.ಸಾರ್ವಜನಿಕರ ಆಕ್ರೋಶ
ಇತ್ತೀಚೆಗೆ ಹೆಚ್ಚಾದ ನೊಂದಣಿ ಶುಲ್ಕದಿಂದ ಅಪಾರ ಪ್ರಮಾಣದ ಆದಾಯ ಪ್ರತಿದಿನ ಇಲಾಖೆಗೆ ಸಂದಾಯ ಆಗುತ್ತಿದೆ. ಆದರೆ, ಕಚೇರಿಗೆ ಬರುವವರಿಗೆ ಸೂಕ್ತ ವ್ಯವಸ್ಥೆ ಸಿಗದಂತಾಗಿದೆ. ಜೊತೆಗೆ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಶೌಚಾಲಯದಂತಹ ಕನಿಷ್ಠ ಸೌಲಭ್ಯ ಲಭ್ಯವಾಗುತ್ತಿಲ್ಲ. ಈ ಹಿಂದೆ ಅದೇ ಕಟ್ಟಡದಲ್ಲಿದ್ದ ಕಚೇರಿಯನ್ನು ಕಾವೇರಿ-೨ ಅನುಷ್ಠಾನದ ಸಂದರ್ಭದಲ್ಲಿ ಹಿಂದಿನ ಭಾಗಕ್ಕೆ ಸ್ಥಳಾಂತರಿಸಲಾಯಿತು. ಬಳಿಕ ಜನರಿಗೆ ಕಚೇರಿಯಲ್ಲಿ ಜನರ ನಿರೀಕ್ಷಿತ ಮಟ್ಟದಲ್ಲಿ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಲಭ್ಯವಾಗುತ್ತಿದೆ. ಆದರೂ ಕೆಲವು ಸಮಸ್ಯೆಗಳಿಂದ ಸಬ್ ರಿಜಿಸ್ಟರ್ ಕಚೇರಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗುತ್ತಿದೆ.