ಹುಬ್ಬಳ್ಳಿ-ಧಾರವಾಡ ಸುದ್ದಿ

ದುರಹಂಕಾರಿ ಜೋಶಿ ಸೋಲಿಸಿ : ದಿಂಗಾಲೇಶ್ವರಶ್ರೀ ರಣಕಹಳೆ

ನವಲಗುಂದ : ಸ್ವಾಭಿಮಾನಿ ಮತದಾರರೇ, ಇದೊಂದು ಸಾರಿ ಸ್ವಾರ್ಥ ರಾಜಕಾರಣಕ್ಕೆ, ಜಾತಿ ದ್ವೇಷದ ರಾಜಕಾರಣಕ್ಕೆ, ಮೋದಿ ಹೆಸರು ಹೇಳಿಕೊಂಡು ಇಲ್ಲಿ ನಾನೇನು ಮಾಡಿದರೂ ನಡೆಯುತ್ತದೆ. ಹೆಂಗೂ ನನ್ನನ್ನು ಆರಿಸಿ ತರುತ್ತಾರೆ ಎಂಬ ಪ್ರಲ್ಹಾದ ಜೋಶಿಯವರ ದುರಹಂಕಾರದ ರಾಜಕಾರಣಕ್ಕೆ ಪಾಠ ಕಲಿಸಿರಿ, ಜೋಶಿಯವರ ವಿರುದ್ಧವಾಗಿ ಮತಚಲಾಯಿಸಿ ಸ್ವಾಭಿಮಾನ ಉಳಿಸಿಕೊಳ್ಳಿ ಎಂದು ಶಿರಹಟ್ಟಿ ಫಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿಯವರು ಜೋಶಿ ವಿರುದ್ಧ ರಣಕಹಳೆ ಊದಿದರು.
ಪಟ್ಟಣದಲ್ಲಿ ಗುರುವಾರ ನಡೆದ ಸ್ವಾಭಿಮಾನಿ ಮತದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಧಾರವಾಡ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿಯವರ ವಿರುದ್ಧ ಹರಿಹಾಯ್ದರು.


ಇದುವರೆಗೂ ಅಹಂನಿಂದ ವರ್ತಿಸುತ್ತಿದ್ದ ಜೋಶಿಯವರಿಗೆ ಈಗ ಎಚ್ಚರವಾಗಿದೆ. ಈಗ ಪ್ರತಿ ಊರುಗಳಲ್ಲಿರುವ ಜಂಗಮರನ್ನೂ ಮಾತನಾಡಿಸಲು ಯತ್ನಿಸುತ್ತಿದ್ದಾರೆ. ಇದುವರೆಗೂ ತಿರುಗಿಯೂ ನೋಡದ ಅವರಿಗೆ ಈಗ ಎಲ್ಲ ಸಮಾಜದವರು ಬೇಕಾಗಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ, ಮತಗಳಿಗಾಗಿ ಎಲ್ಲ ಸಮಾಜದವರಿಗೆ ದುಂಬಾಲು ಬೀಳುತ್ತಿದ್ದಾರೆ. ಮನೆಮನೆಗೆ ಅಲೆಯುತ್ತಿದ್ದಾರೆ ಎಂದು ಪ್ರಲ್ಹಾದ ಜೋಶಿಯವರ ವರ್ತನೆಗಳನ್ನು ಮತದಾರರ ಎದುರು ಸ್ವಾಮೀಜಿ ಬಿಚ್ಚಿಟ್ಟರು.


ಯಾವಾಗ ದಿಂಗಾಲೇಶ್ವರ ಸ್ವಾಮಿಗಳು ಹೊರಬಂದರೋ, ಈಗ ಮಠ-ಮಂದಿರ, ಗುಡಿಗುಂಡಾರ, ಎಲ್ಲ ಸಮಾಜದವರು ಜೋಶಿಯವರಿಗೆ ನೆನಪಾಗಿದ್ದಾರೆ. ಇದುವರೆಗೂ ಬೇರೆ ಸಮಾಜದವರನ್ನು ಸೌಜನ್ಯಕ್ಕಾದರೂ ಮಾಡನಾಡಿಸದ ಜೋಶಿ ಈಗ ಪ್ರತಿಯೊಬ್ಬರ ಬಳಿ ಅಲೆಯುತ್ತಿದ್ದಾರೆ. ಸ್ವಾಭಿಮಾನಿ ಮತದಾರರೇ ನೀವು ನಿಮ್ಮ ಮಗಳನ್ನು ಕೊಡುವಾಗ ’ಕನ್ಯಾದಾನ’ ಮಾಡುತ್ತೀರಿ. ಅದರಿಂದ ನಿಮ್ಮ ಮನೆತನದ ಗೌರವ ಹೆಚ್ಚುತ್ತದೆ. ಕನ್ಯಾ ಮಾರಾಟ ಮಾಡಿದರೆ ಮನೆತನದ ಮರ್ಯಾದೆಗೆ ಕುಂದುಬರುತ್ತದೆ. ಅದೇ ರೀತಿ ಮತ ನೀಡುವಾಗಲೂ ಕೂಡ ’ಮತದಾನ’ ಮಾಡಿರಿ. ಮತ ಮಾರಾಟ ಮಾಡಬೇಡಿರಿ. ಮತಮಾರಾಟ ಮಾಡಿದರೆ ದೇಶದ ಮರ್ಯಾದೆಗೆ ಧಕ್ಕೆಯುಂಟಾಗುತ್ತದೆ. ಆದ್ದರಿಂದ ಚುನಾವಣೆ ವೇಳೆಯಲ್ಲಿ ಮತ ಖರೀದಿಸಲು ಬರುವ ಪಾಪಿಗಳ ಹಣಕ್ಕೆ ಮತ ಮಾರಾಟ ಮಾಡಿಕೊಳ್ಳಬೇಡಿ ಎಂದರು.


ನಾನು ಚಿಕ್ಕವನಿದ್ದಾಗಲೇ ಸಮಾಜ ಸೇವೆಗಾಗಿಯೇ ಮನೆತೊರೆದು ಬಂದು ಕೂಲಿ ಮಾಡಿ ಅಂಗಿ-ಚೊಣ್ಣ ತೊಟ್ಟಿರುವವನು. ದುಡ್ಡುಮಾಡಲು ಬಂದವನಲ್ಲ. ಯುವಕರೇ ನೀವು ಶ್ರಮಪಟ್ಟು ಗಳಿಸಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಿ ಪಾಪಿಗಳ ಹಣಕ್ಕೆ ಮಾರುಹೋಗದಿರಿ ಯಾರದೇ ಹಣಕ್ಕಾಗಿ ಮತ ಮಾರಿಕೊಳ್ಳಬೇಡಿರಿ. ಇದೊಂದು ಬಾರಿ ನೀಚ ರಾಜಕಾರಣದ, ದುರಹಂಕಾರಿ ವರ್ತನೆಯ ಪ್ರಲ್ಹಾದ ಜೋಶಿ ವಿರುದ್ಧ ಮತ ಚಲಾಯಿಸಿ ನಿಮ್ಮ ಸ್ವಾಭಿಮಾನ ಉಳಿಸಿಕೊಳ್ಳಿ ಎಂದು ಹೇಳಿದರು. ಸಮಾವೇಶದಲ್ಲಿ ಹಲವು ಮಠಾಧೀಶರು, ಸಹಸ್ರಾರು ಸ್ವಾಭಿಮಾನಿ ಮತದಾರರು ಭಾಗವಹಿಸಿ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದರು.


ಕಲ್ಯಾಣ ರಾಜ್ಯದ ಸಂಕಲ್ಪ:

ಈ ಲೋಕಸಭೆ ಚುನಾವಣೆ ಮುಗಿದ ತಕ್ಷಣವೇ ನಮ್ಮ ಯುವಕ-ಯುವತಿಯರಿಗೆ, ಎಲ್ಲ ಸಮುದಾಯಗಳ ಅಭಿವೃದ್ಧಿ ದೃಷ್ಟಿಯಿಂದ ಮಹತ್ವದ ಘೋಷಣೆಯೊಂದನ್ನು ಮಾಡಲು ನಿರ್ಧರಿಸಿದ್ದೇವೆ. ಬಸವಣ್ಣನವರ ಕಲ್ಯಾಣ ರಾಜ್ಯವನ್ನು ಕಟ್ಟುವ ಸಂಕಲ್ಪವನ್ನು ಮಾಡಿದ್ದೇವೆ. ಅದರ ಸಾಕಾರಕ್ಕಾಗಿ ಎಲ್ಲರೂ ಶ್ರಮಿಸೋಣ ಎಂದು ಕರೆನೀಡಿದರು.

administrator

Related Articles

Leave a Reply

Your email address will not be published. Required fields are marked *