ರಾಜ್ಯ ಯು-19 ಕ್ರಿಕೆಟ್ ತಂಡಕ್ಕೆ ಧಾರವಾಡದ ಸುಜಯ ಆಯ್ಕೆ
ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಕೆಎಸ್‌ಸಿಎ ಮುಂಬರುವ ವಿನೂ ಮನ್ಕಡ್ ಟ್ರೋಫಿ ೨೦೨೬-೨೭ರ ಅಂಡರ್-೧೯ ಪುರುಷರ ಕ್ರಿಕೆಟ್ ಪಂದ್ಯಾವಳಿಗಾಗಿ ಕರ್ನಾಟಕ ತಂಡವನ್ನು ಪ್ರಕಟಿಸಿದೆ.

ಅ. 8ರಿಂದ 16ರ ವರೆಗೆ ವಿಶಾಖಪಟ್ಟಣಂ (ವೈಜಾಗ್)ನಲ್ಲಿ ಪಂದ್ಯಗಳು ನಡೆಯಲಿವೆ. ತಂಡ: ಅನ್ವಯ್ ದ್ರಾವಿಡ್ (ನಾಯಕ ಮತ್ತು ವಿಕೆಟ್ ಕೀಪರ್), ನಿತೀಶ್ ಆರ್ಯ, ಧ್ರುವ್ ಕೃಷ್ಣನ್, ಆರ್. ರೋಹಿತ್ ರೆಡ್ಡಿ, ಆದರ್ಶ್ ಎಸ್.ಜೆ., ಸುಜಯ್ ಕೊರವರ್, ವರುಣ್ ಪಟೇಲ್ (ವಿಕೆಟ್ ಕೀಪರ್), ಅನಿಕೇತ್ ರೆಡ್ಡಿ, ಪಿ.ತೇಜಸ್ ರೆಡ್ಡಿ, ಸಮರ್ಥ ಎಂ. ಕುಲಕರ್ಣಿ, ವೈಭವ್ ಸಿ., ಗೌರವ್ ವೆಂಕಟೇಶ್, ರತನ್ ಬಿ.ಆರ್., ಪ್ರೀತಮ್ ರಾಜ್ ಕೆ., ಧ್ಯಾನನ್ ಎಂ. ಹಿರೇಮಠ.
ಕುನಾಲ್ ಕಪೂರ್ ಮುಖ್ಯ ತರಬೇತುದಾರರು, ರಾಜು ಭಟ್ಕಳ ಬೌಲಿಂಗ್ ತರಬೇತುದಾರರು, ಮಹಾಲಿಂಗ ಮ್ಯಾನೇಜರ್, ಬಸವರಾಜ ದಮ್ಮಕನವರ್ ದೈಹಿಕ ಸಾಮರ್ಥ್ಯ ತರಬೇತುದಾರರು, ಪ್ರಜ್ವಲ್ ಫಿಸಿಯೋಥೆರಪಿಸ್ಟ್, ರಾಜೀವ್ ಪಿ. ಕಾರ್ಯಕ್ಷಮತೆ ವಿಶ್ಲೇಷಕರಾಗಿದ್ದಾರೆ.

ಧಾರವಾಡದ ಹೆಮ್ಮೆ: ರಾಜ್ಯ ಯು-19 ಕ್ರಿಕೆಟ್ ತಂಡಕ್ಕೆ ಸುಜಯ ಕೊರವರ್ ಆಯ್ಕೆ!
ವಿನೂ ಮನ್ಕಡ್ ಟ್ರೋಫಿ: ರಾಜ್ಯ ತಂಡದಲ್ಲಿ ಮಿಂಚಲಿದ್ದಾರೆ ಫಸ್ಟ್ ಅಕಾಡೆಮಿಯ ಸುಜಯ
ಧಾರವಾಡದ ಹೆಮ್ಮೆ ಸುಜಯ ಕೊರವರ್ ಆಯ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು (ಕೆಎಸ್‌ಸಿಎ) ಮುಂಬರುವ ವಿನೂ ಮನ್ಕಡ್ ಟ್ರೋಫಿ 2026-27ರ ಅಂಡರ್-19 ಪುರುಷರ ಕ್ರಿಕೆಟ್ ಪಂದ್ಯಾವಳಿಗಾಗಿ ಪ್ರಕಟಿಸಿರುವ ರಾಜ್ಯ ತಂಡದಲ್ಲಿ ಕೆಎಸ್‌ಸಿಎ ಧಾರವಾಡ ವಲಯದ ಪ್ರತಿಭೆ, ಫಸ್ಟ್ ಕ್ರಿಕೆಟ್ ಅಕಾಡಮಿಯ ಕ್ರೀಡಾಪಟು ಸುಜಯ ಕೊರವರ್ ಸ್ಥಾನ ಪಡೆದುಕೊಂಡಿದ್ದಾರೆ.
ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಪ್ರಾದೇಶಿಕ ಪ್ರತಿಭೆಗಳಿಗೆ ದೊಡ್ಡ ವೇದಿಕೆಯಾಗಿರುವ ಈ ಆಯ್ಕೆಯು ಕ್ರೀಡಾವಲಯದಲ್ಲಿ ಸಂಚಲನ ಮೂಡಿಸಿದೆ. ಅತ್ಯುತ್ತಮ ಆಟದ ಶೈಲಿ ಮತ್ತು ಪರಿಶ್ರಮದ ಮೂಲಕ ಸುಜಯ ರಾಜ್ಯ ಮಟ್ಟದ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವುದು ಸ್ಥಳೀಯ ಕ್ರಿಕೆಟ್ ಪ್ರಿಯರಿಗೆ ಹಾಗೂ ಯುವ ಆಟಗಾರರಿಗೆ ದೊಡ್ಡ ಸ್ಫೂರ್ತಿಯಾಗಿದೆ.
ಸುಜಯ ಅವರ ಈ ಗಮನಾರ್ಹ ಸಾಧನೆಗೆ ಧಾರವಾಡ ವಲಯ ನಿಮಂತ್ರಕ ವೀರಣ್ಣ ಸವಡಿ, ಚೇರಮನ್ ಅಲ್ತಾಫ್ ಕಿತ್ತೂರ ಹಾಗೂ ಉತ್ತರ ಕರ್ನಾಟಕದ ಹರ್ಷಿತ ಕ್ರೀಡಾಭಿಮಾನಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದು, ರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ ಅವರು ಅತ್ಯುತ್ತಮ ಪ್ರದರ್ಶನ ನೀಡಿ ಕೀರ್ತಿ ತರಲಿ ಎಂದು ಹಾರೈಸಿದ್ದಾರೆ.


