ತಾನು ಎಲ್ಲ ಕಡೆ ಇರುವುದಕ್ಕೆ ಸಾಧ್ಯ ಇಲ್ಲ ಎಂಬುದನ್ನು ಅರಿತು ದೇವರು ‘ತಾಯಿ’ ಯನ್ನು ಸೃಷ್ಠಿಸಿದ. ಹಾಗೆಯೇ ಏಕಕಾಲದಲ್ಲಿ ತನ್ನಿಂದ ಎಲ್ಲರನ್ನೂ ಸಲಹಲು ಸಾಧ್ಯವಿಲ್ಲ ಅಂತ ‘ತಂದೆ’ಯನ್ನು ಸೃಷ್ಠಿಸಿದ.
ಈ ಮಾತು ವಿಶ್ವವ್ಯಾಪಿಯಾಗಲು ಕಾರಣ ‘ಅಪ್ಪ’ ಅನ್ನುವ ಪದದಲ್ಲಿರುವ ಅಪಾಯ್ಯಮಾನ್ಯತೆ, ಕುಟುಂಬದ ಪರ ಇರುವ ಕಾಳಜಿ ಹಾಗೂ ಮಕ್ಕಳ ಬಗ್ಗೆ ಇರುವ ಜವಾಬ್ದಾರಿ. ನಿಜವಾಗ್ಲೂ ಬೆರಗುಗೊಳಿಸುತ್ತದೆ. ‘ಅಪ್ಪ’ ಅನ್ನುವ ಎರಡು ಅಕ್ಷರದಲ್ಲಿ ಸಾವಿರ ಆನೆಗಳ ಬಲವಿದೆ.
ನನ್ನ ಪೂಜ್ಯ ತಂದೆಯವರು ಭಾರತಿಯ ಸೇನೆಯ ಸೇನಾನಿ ದಿ. ಶ್ರೀ ಶೇಖರ ಅಪ್ಪಯ್ಯಾ ನಾಯಿಕರವರು ಹುಟ್ಟಿದ್ದು ಅಕ್ಟೋಬರ 01, 1948 ರಂದು ಬೆಳಗಾವಿ ಜಿಲ್ಲೆಯ ಸಂಕೇಶ್ವರ ನಗರದಲ್ಲಿ. ತಮ್ಮ ಮೂಲ ಹಾಗೂ ಪ್ರಾಥಮಿಕ ವಿದ್ಯಾಭ್ಯಾಸವನ್ನು 1966 ರವರೆಗೆ ಸಂಕೇಶ್ವರದಲ್ಲಿ ಪಡೆದು, ‘ದೇಶ ಸೇವೆಯೇ ಈಶ ಸೇವೆ’ ಎಂಬ ಧ್ಯೇಯದೊಂದಿಗೆ 1967ರ ಎಪ್ರಿಲ್ 24ರಂದು ಭಾರತೀಯ ಸೈನ್ಯ ಸೇರಿದರು. 1971 ರ ಇಂಡೋ-ಪಾಕ್ ಯುದ್ಧದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. ಅವರು ಸೇನೆಯಲಿ ಸಲ್ಲಿಸಿದ ಕೊಡುಗೆಯನ್ನು ಗುರ್ತಿಸಿ ಸೇನೆಯ ಹಿರಿಯ ಅಧಿಕಾರಿ ವೃಂದ ಅವರನ್ನು 1972ರಲ್ಲಿ ರಾಡಾರ್ ಟೆಕ್ನಾಲಜಿ ಕ್ಷೇತ್ರದ ಉನ್ನತ ಹಾಗೂ ವಿಶೇಷ ತಂತ್ರಜ್ಞಾನದ ತರಬೇತಿಗಾಗಿ ರಶಿಯಾ ದೇಶಕ್ಕೆ ಕಳಿಸಿಕೊಟ್ಟರು. ನಂತರ ಅವರು ಸೇನೆಯ ರಾಡಾರ ಕ್ಷೇತ್ರದಲ್ಲಿ 20 ವರ್ಷದ ಸುಧೀರ್ಘ ಸೇವೆಯನ್ನು ಸಲ್ಲಿಸಿದರು.
ಇಂದು ‘ವಿಶ್ವ ಅಪ್ಪಂದಿರ ದಿನ’ದ ಸಂದರ್ಭದಲ್ಲಿ ಅವರು ಹೇಳಿದ ಮಾತುಗಳು, ಹಲವಾರು ಕಲಿಕೆ, ಸಿದ್ಧಾಂತಗಳು ಮತ್ತೆ ಕಣ್ಮುಂದೆ ಬಂದವು. ತಂದೆಯವರ ಜೀವನದ ಧೃಡ ನಂಬಿಕೆಯು ‘ಓರ್ವ ವ್ಯಕ್ತಿ ತನ್ನ ಕರ್ಮಗಳಿಂದಲೇ ದೊಡ್ಡ ಯಶಸ್ವಿ ವ್ಯಕ್ತಿ ಆಗುತ್ತಾನೆಯೇ ವಿನಃ ಹುಟ್ಟಿನಿಂದಲ್ಲಾ’ ಎನ್ನುವ ಆಚಾರ್ಯ ಚಾಣಕ್ಯರ ಅರ್ಥಗರ್ಭಿತ ಮಾತುಗಳಲ್ಲಿತ್ತು. ಅವರು ತಮ್ಮ ನಂಬಿಕೆಗಳನ್ನು, ಮೌಲ್ಯಗಳನ್ನು ನಮ್ಮಲ್ಲಿ ತುಂಬಿದರು.
ಅವರು ತಮ್ಮ ಜೀವನಪರ್ಯಂತ ಒಂದು ಮಾತನ್ನು ಪ್ರತಿ ಹಂತದಲ್ಲಿ ಹೇಳ್ತಾ ಇದ್ದರು ಸಚ್ ಬೋಲನಾ ಸುಖಿ ರೆಹನಾ (ನಿಜ ಮಾತಾಡು ಸುಖಿಯಾಗಿರು). ಅದು ತಂದೆಯವರ ಬಳುವಳಿಯಾಗಿ ನಮ್ಮಲ್ಲಿ ಉಳಿದು, ಬದುಕು ಕಲಿಸಿ ಕೊಟ್ಟಿದೆ.
ಪರಿಸರ ಸ್ನೇಹಿ ಹಾಗೂ ಯೋಗಾಭ್ಯಾಸ ಪ್ರಿಯರಾದ ನನ್ನ ತಂದೆಯವರು ಸಾವಿರಾರು ಆಯುರ್ವೇದ ಸಸಿಗಳ ಮಾಹಿತಿಯನ್ನು ಹಾಗೂ ಲಕ್ಷಾಂತರ ಜನರಿಗೆ ಭಾರತೀಯ ಪುರಾತನ ಹಾಗೂ ಆರೋಗ್ಯ/ಯೋಗ ಶಾಸ್ತ್ರದ ಮಹತ್ವವನ್ನು ಪರಿಚಯಿಸಿ
ಶ್ರೀ ಜನಸಾಮಾನ್ಯರಲ್ಲಿ ಪ್ರಾಥಮಿಕ ಆರೋಗ್ಯ ಚಿಕಿತ್ಸೆಯ ಮಹತ್ವ ತಿಳಿಪಡಿಸಿ ಆರೋಗ್ಯ ವೃದ್ಧಿಸುವಲ್ಲಿ ಯಶಸ್ಸು ಕಂಡರು.
ನಮ್ಮ ತಂದೆಯವರ ಆಸೆ ಮತ್ತು ಪ್ರೇರಣೆ ಮೇರೆಗೆ ನಾನು ಹಾಗೂ ನನ್ನ ಪ್ರಿತೀಯ ತಮ್ಮನಾದ ಶ್ರೀ ಸತೀಶ ಶೇಖರ ನಾಯಿಕ ವೃತ್ತಿಪರ ಸಮಾಜ ಕಾರ್ಯದಲ್ಲಿ ಉನ್ನತ ವಿದ್ಯಾಭ್ಯಾಸ(ಬಿಎಸ್ಡಬ್ಲೂ ಮತ್ತು ಎಂಎಸ್ಡಬ್ಲೂ) ವನ್ನು ಪಡೆದು, ತಂದೆಯವರ ಹನ್ನೆರಡು ಆದ್ಯತೆಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಮಾಜದ ಸಾಧಕರನ್ನು ಗೌರವಿಸುವ ಕೆಲಸ ‘SHAKEER OF ONE STATE’ ಪ್ರಶಸ್ತಿಯ ಪ್ರದಾನ ಕಾರ್ಯದ ಮೂಲಕ ಅತ್ಯಂತ ಅರ್ಥಪೂರ್ಣ ರೀತಿಯಲ್ಲಿ ತಂದೆಯವರ ಹುಟ್ಟುಹಬ್ಬವನ್ನು ಪ್ರತಿವರ್ಷ ಅಕ್ಟೋಬರ್ ಒಂದರಂದು ಆಚರಿಸುತಿದ್ದೇವೆ.
ಕರ್ನಾಟಕದ ಸಾವಿರಾರು ಅಭ್ಯರ್ಥಿಗಳಿಗೆ ಭಾರತೀಯ ಸೈನ್ಯ ಭರ್ತಿ ಉಚಿತ ತರಬೇತಿಯನ್ನು ಕೊಟ್ಟು ಎಲ್ಲರಲ್ಲಿ ದೇಶ ಸೇವೆಯೇ ಈಶ ಸೇವೆ ಮನೋ ಭಾವನೆಯನ್ನು ಹುಟ್ಟು ಹಾಕಿ ಭಾರತೀಯ ಸೈನ್ಯ ಸೇರಲು ಪ್ರೇರೇಪಿಸಿದವರು ನನ್ನಪ್ಪ. ಸ್ವಾಮಿ ವಿವೇಕಾನಂದರ ಆದರ್ಶವನ್ನು ಬಾಳಿನುದ್ದಕ್ಕೂ ಅನುಸರಿಸಿಕೊಂಡು ಬಂದರು.
ನೀವು ಯಾವುದೇ ಸಮಸ್ಯೆಗಳನ್ನು ಎದುರಿಸದಿದ್ದಗರೆ, ನೀವು ತಪ್ಪಾದ ಹಾದಿಯಲ್ಲಿ ಪ್ರಯಾಣಿಸುತ್ತೀದ್ದಿರಿ ಎಂದು ನಮ್ಮನ್ನು ಎಚ್ಚರಿಸುತ್ತಿದ್ದರು. ಇದು ಇಂದು ನಮಗೆ ಬಾಳಿನ ಬುತ್ತಿಯಾಗಿದೆ.
LOW AIM IS CRIME ಮತ್ತು SUCCESS COMES BEFORE WORK ONLY IN DICTIONARY ಎಂಬ ಮಾತುಗಳನ್ನು ಪ್ರತಿಯೊಂದು ವೃತ್ತಿ ಅಥವಾ ವೈಯಕ್ತಿಕ ಸವಾಲು ಎದುರಿಸುತ್ತಿರುವ ಸಮಯದಲ್ಲಿ ಮರುಕಳಿಸುತ್ತಿದ್ದರು.
ಪ್ರತಿಯೊಬ್ಬ ವ್ಯಕ್ತಿಗೆ ತನ್ನ ಜೀವನದ ನಿಜವಾದ ಹಿರೋ ತಮ್ಮ ತಂದೆ ಎಂಬ ಭಾವನೆಯ ಮೇರೆಗೆ ನನ್ನ ಜೀವನದ ಪ್ರೇರಣಾ ಶಕ್ತಿ ನನ್ನ ತಂದೆ ಸೇನಾನಿ ದಿ.ಶ್ರೀ ಶೇಖರ ಅಪ್ಪಯ್ಯಾ ನಾಯಕರವರು.
ವಿಶ್ವ ಅಪ್ಪಂದಿರ ದಿನದ ಸಂದರ್ಭದಲ್ಲಿ ಅವರ ದಿವ್ಯಾತ್ಮದ ಪಾದಗಳಿಗೆ ತೊದಲು ನುಡಿಗಳ ಪುಷ್ಪ ಸರ್ಮಪಣೆ.
ಜಗದೀಶ ಶೇಖರ ನಾಯಿಕ
ವೃತ್ತಿ ಪರ ಸಮಾಜ ಸೇವಕರು, ಧಾರವಾಡ
******************