ಕಾಗೆ ಒಂದಗುಳ ಕಂಡೊಡೆ ಕೂಗಿ ಕರೆಯದೆ ತನ್ನ ಬಳಗವನ್ನೆಲ್ಲ!!
ಕೋಳಿ ಒಂದು ಕುಟುಕ ಕಂಡೊಡೆ ಕೂಗಿ ಕರೆಯದೆ ತನ್ನ ಕುಲವನ್ನೆಲ್ಲ!!
ಶಿವಭಕ್ತನಾಗಿ ಭಕ್ತಿ ಪಕ್ಷವಿಲ್ಲದಿದ್ದೊಡೆ ಆ ಕಾಗೆ–ಕೋಳಿಗಳಿಗಿಂತ ಕರಕಷ್ಟ ಕಾಣಾ ಕೂಡಲ ಸಂಗಮದೇವಾ !!
ಎಂಬ ವಿಶ್ವಗುರು ಬಸವಣ್ಣನ ವಚನದಂತೆ ತಮ್ಮ ಜೀವನದುದ್ದಕ್ಕೂ ಎಲ್ಲರೊಡನೆ ಪ್ರೀತಿಯಿಂದ ಆತ್ಮೀಯತೆಯಿಂದ ಸಹಕರಿಸುತ್ತ ಬಾಳಿ ಬದುಕಿದವರು.ಸರಳ ಜೀವನ ಮತ್ತು ಉದಾತ್ತ,ಉನ್ನತ ಚಿಂತನೆ ಮಾಡುವ ಸ್ವಭಾವ.ಜೀವನದಲ್ಲಿ ಬಂದ ನೋವು, ನಲಿವು, ಕಷ್ಟ, ದುಃಖಗಳನ್ನು ತಮ್ಮ ಮಕ್ಕಳಿಗೆ ಹಂಚದೇ ತಾವೊಬ್ಬರೇ ಬಿಸಿಲಿನ ಝಳ ಅನುಭವಿಸಿ ಮಕ್ಕಳಿಗೆ ತಂಪು ತಂಗಾಳಿಯ ಅನುಭವವನ್ನು ನೀಡಿದ ಅಪರಂಜಿಯಂತಹ ಅಪ್ಪಾಜಿಯನ್ನು ಪಡೆದ ನಾವು ಅಕ್ಷರಶಃ ಭಾಗ್ಯಶಾಲಿಗಳು.
ಸುಮಾರು ಐವತ್ತು ವರ್ಷಗಳ ಕಾಲ ವಕೀಲಿ ವೃತ್ತಿಯನ್ನು ಮಾಡಿ ಮೂರು ದಶಕಗಳಿಗೂ ಹೆಚ್ಚು ಕಾಲ ಸಕ್ರೀಯ ರಾಜಕಾರಣ ಮಾಡಿದರೂ ‘ಆಡದೇ ಮಾಡುವವನು ರೂಢಿಯೊಳಗುತ್ತಮನು’ ಎಂಬ ಸರ್ವಜ್ಞರ ನುಡಿಯನ್ನು ಕಾಯಾ, ವಾಚಾ, ಮನಸಾ ಪಾಲಿಸಿ ಪ್ರಸಿದ್ಧಿಯಿಂದ ಗಾವುದ ದೂರವುಳಿದವರು.ಅವರು ಎಂದೂ ಹಣದ ಬೆನ್ನು ಹತ್ತಲಿಲ್ಲ.ಜನರನ್ನು ಗಳಿಸಿದರು.
ನಮ್ಮ ತಂದೆ ಶಿವಪ್ಪ ಶಿವಮೂರ್ತಪ್ಪ ಶೆಟ್ಟರ ಎಂದೂ ನಮಗೆ ಉಪದೇಶಗಳನ್ನು ನೀಡಲಿಲ್ಲ. ಆದರ್ಶ ಬದುಕನ್ನು ಮಾಡಿ ತೋರಿಸಿದ್ದಾರೆ.ತಂದೆಯ ಜತೆಯಾಗಿ ಚಿಕ್ಕಪ್ಪ ಸದಾಶಿವ ಶೆಟ್ಟರ, ಅಲ್ಲದೇ ಹಿರಿಯ ಸಹೋದರ ರಾಜ್ಯದ ಮುಖ್ಯಮಂತ್ರಿಯಾಗಿಯೂ ಕಾರ್ಯನಿರ್ವಹಿಸಿರುವ ಹಾಲಿ ಬೃಹತ್ ಮತ್ತು ಕೈಗಾರಿಕಾ ಸಚಿವರಾದ ಜಗದೀಶ ಶೆಟ್ಟರ ಮುಂತಾದವರ ಪ್ರಭಾ ವಲಯದಲ್ಲಿ ಬೆಳೆದ ನನ್ನನ್ನು ಜನರು ಪ್ರೀತಿಸಿದ್ದಾರೆ.ಗೌರವಿಸಿದ್ದಾರೆ.ಆಶೀರ್ವದಿಸಿದ್ದಾರೆ.
ಕಾಲೇಜು ಹಂತದಲ್ಲೇ ನನಗೆ ಸಾರ್ವಜನಿಕ ರೀತಿ ನೀತಿಗಳನ್ನು ಕಲಿಸಿದರು. ಜ್ಞಾನವನ್ನು ತಲೆಯಲ್ಲಿ ತುಂಬಿಕೊಳ್ಳಬೇಕು.ಜನರ ಹೃದಯಕ್ಕೆ ಹಚ್ಚಿಕೊಳ್ಳಬೇಕು. ಸಜ್ಜನರ ಸಹವಾಸ ಮಾಡಬೇಕು. ದುಷ್ಟರಿಂದ ದೂರವಿರು ಎಂಬ ಅವರ ಮಾತುಗಳು ಇಂದು ನನ್ನ ರಾಜಕೀಯ, ಸಾಮಾಜಿಕ ಬದುಕಿಗೆ ಮುನ್ನುಡಿಯಾಗಿವೆ.
ಕಾಲೇಜ್ ದಿನಗಳಲ್ಲಿ ಕಾಲೇಜ್ ಕಾರ್ಯದರ್ಶಿಯಾಗು ಎಂದು ಹುರಿದುಂಬಿಸಿದ್ದರಲ್ಲದೇ ನನ್ನ ಯಾವುದೇ ಸಾಮಾಜಿಕ ಕಾರ್ಯಗಳಿಗೆ ಬೆನ್ನು ತಟ್ಟಿ ಹಾರೈಸುತ್ತಿದ್ದರು. ತಪ್ಪಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಹೇಳುತ್ತಿದ್ದರು.
12-05-1923ರಲ್ಲಿ ಜನಿಸಿದ ತಂದೆಯವರು 1949ರಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿದರಲ್ಲದೇ 1958ರಲ್ಲಿ ಹುಬ್ಬಳ್ಳಿ ಅರ್ಬನ್ ಬ್ಯಾಂಕ್ ಚೇರ್ಮನ್ರಾಗಿದ್ದರು. ಶುಭ್ರ ಬಿಳಿ ಧೋತರ, ಬಿಳಿ ಶರ್ಟು, ಕರಿಯ ಕೋಟು, ತಲೆಯ ಮೇಲೆ ಕರಿ ಟೋಪ್ಪಿಗೆ ಹೀಗೆ ಯಾವಾಗಲೂ ಅತ್ಯಂತ ಸಾದಾ ಉಡುಪಿನಲ್ಲಿ ಇರುತ್ತಿದ್ದ ಅವರು 1968ರಿಂದ ಐದು ಬಾರಿ ಮಹಾನಗರ ಪಾಲಿಕೆ ಸದಸ್ಯರಾಗಿ, ಅಲ್ಲದೇ ದಕ್ಷಿಣ ಭಾರತದ ಮೊದಲ ಜನಸಂಘದ ಪ್ರಥಮ ಮಹಾಪೌರ ಹಿರಿಮೆಗೂ ಪಾತ್ರರಾಗಿದ್ದಾರೆ. ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಮೂರುಸಾವಿರಮಠ ವಿದ್ಯಾವರ್ಧಕ ಸಂಘದ ಸದಸ್ಯರಾಗಿ, ಅಲ್ಲದೇ 1990ರಲ್ಲಿ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ, ವಕೀಲಿ ವೃತ್ತಿಯಲ್ಲಿ ಧರ್ಮಭೀರುವಾಗಿ ಅವರ ಹೆಜ್ಜೆ ಗುರುತುಗಳು ಶಾಶ್ವತವಾಗಿ ಸ್ಥಾನ ಪಡೆದಿವೆ.
ಹೃದಯವೇ ಗುರು, ಕಾಲವೇ ಶಿಕ್ಷಕ, ಜೀವನವೇ ಪುಸ್ತಕ ಎಂಬಂತೆ ನಡೆದ ಅಪ್ಪಾಜಿ ಇಂದು ದೈಹಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ ಅವರ ಬಿಚ್ಚು ಮಾತು, ಅವರ ಸರಳ ಆಚಾರ, ವಿಚಾರ, ನಿರ್ವಂಚನೆ, ಜನರೊಂದಿಗಿನ ಸೌಹಾರ್ಧಯುತ ಸಂಬಂಧ, ಪ್ರಾಮಾಣಿಕ ದುಡಿಮೆ ಎಲ್ಲವೂ ಜೀವಂತವಾಗಿವೆ. ಫಾದರ್ಸ ಡೇ ಸಂದರ್ಭದಲ್ಲಿ ಅವರಿಗೊಂದು ಅಕ್ಷರ ನಮನ.
ಪ್ರದೀಪ ಶೆಟ್ಟರ್
ವಿಧಾನ ಪರಿಷತ್ ಸದಸ್ಯರು
ಪ್ರಾಮಾಣಿಕತೆಗೆ ಮತ್ತೊಂದು ಹೆಸರು
ಅವರ ನಿಷ್ಟುರತೆಗೆ ಹಾಗೂ ಪ್ರಾಮಾಣಿಕತೆಗೆ ಒಂದು ಸಣ್ಣ ಘಟನೆ ಹೇಳಲೇಬೇಕು. ಹುಬ್ಬಳ್ಳಿ ಅರ್ಬನ್ ಬ್ಯಾಂಕ್ನಲ್ಲಿನ ಸಿಬ್ಬಂದಿ ಕೆಲಸಕ್ಕೆ ಯುವತಿಯೊಬ್ಬರನ್ನು ನಮ್ಮ ತಂದೆಯವರು ನೇಮಕ ಮಾಡಿಕೊಂಡಿದ್ದರು. ನೇಮಕಾತಿ ಖುಷಿಯಲ್ಲಿ ಆ ಯುವತಿಯ ತಾಯಿ ತಮ್ಮ ಮಗಳನ್ನು ನೌಕರಿಗೆ ತೆಗೆದುಕೊಂಡಿದ್ದಕ್ಕೆ ಸಿಹಿ ಹಾಗೂ 20 ಸಾವಿರ ರೂ ಹಣದೊಂದಿಗೆ ಮನೆಗೆ ಬಂದಿದ್ದರು. ಆಗ ತಂದೆಯವರು ನಾನು ಲಂಚಕ್ಕಾಗಿ ನೇಮಕಾತಿ ಮಾಡಿಲ್ಲ. ಆಕೆ ಆರ್ಹಳಿದ್ದಳು. ದುಡ್ಡಿನ ಆಸೆ ತೋರಿಸಿದರೆ ನೌಕರಿಯಿಂದ ತೆಗೆಯಬೇಕಾಗುತ್ತದೆ ಎಂದು ಜೋರಾಗಿಯೇ ಬೈದಾಗ ಅವರು ಅಳಲಾರಂಭಿಸಿದರು. ತದನಂತರ ರಮಿಸಿ ಸಿಹಿ ತೆಗೆದುಕೊಂಡು ಹಣ ವಾಪಸ್ ಕಳುಹಿಸಿದರು.
ಯಶಸ್ವಿ ಉದ್ಯಮಿ – ಸಮಸ್ಯೆಗಳಿಗೆ ಧ್ವನಿ
ಕೋತಂಬ್ರಿ ಕಾಲೇಜಿನಲ್ಲಿ ಪದವಿ ಪೂರೈಸಿ ಬಿ.ವಿ.ಬಿ ಕಾಲೇಜಿನಲ್ಲಿ ಬಿ.ಇ ಮುಗಿಸಿರುವ ಪ್ರದೀಪ ತಂದೆ ಹಾಗೂ ಅಣ್ಣ ಜಗದೀಶ ಶೆಟ್ಟರ ಅವರ ನೆರಳಿನಲ್ಲೇ ಬೆಳೆಯುತ್ತ ಸಹಜವಾಗಿಯೇ ರಾಜಕೀಯದ ಅಂಗಳಕ್ಕೆ ಬಂದವರು. ಉದ್ಯಮಿಯಾಗಿ ಯಶಸ್ಸು ಗಳಿಸಿದ ಅವರು ಪಕ್ಷದ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಾಗಿ 2016ರಲ್ಲಿ ವಿಧಾನ ಪರಿಷತ್ಗೆ ಬಲಗಾಲಿಟ್ಟಿದ್ದಾರೆ.
ಸ್ಥಳಿಯ ಸಂಸ್ಥೆಗಳ ಸಮಸ್ಯೆಗಳ ಬಗ್ಗೆ ಸದನದಲ್ಲಿ ಗಮನ ಸೆಳೆದಿದ್ದಾರಲ್ಲದೇ ಹುಬ್ಬಳ್ಳಿ ಧಾರವಾಡದ ಅಕ್ರಮಗಳ, ಜ್ವಲಂತ ವಿಷಯಗಳ ಬಗ್ಗೆಯೂ ಧ್ವನಿಯಾಗಿ ಪ್ರಸ್ತಾಪಿಸಿದ್ದಾರೆ. ತಮ್ಮ 11 ಕೋಟಿ ಅನುದಾನದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಅವರ ಸಾಮಾಜಿಕ ಸೇವೆ ನಿಜಕ್ಕೂ ಶ್ಲ್ಯಾಘನೀಯ. ವರ್ಷಕ್ಕೆ ಬರುವ 2 ಕೋಟಿ ಅನುದಾನವನ್ನು ತಮ್ಮ ಕ್ಷೇತ್ರ ವ್ಯಾಪ್ತಿಯ ಧಾರವಾಡ, ಗದಗ ಹಾಗೂ ಹಾವೇರಿಗಳಿಗೆ ಸಂಪೂರ್ಣವಾಗಿ ಬಳಕೆ ಮಾಡುತ್ತ ಬಂದಿರುವುದು ಇವರ ಹೆಗ್ಗಳಿಕೆ.
ಬಡವರಿಗೆ ನೆರವಿನ ಹಸ್ತ
ಕಳೆದ ಬಾರಿ ಕೋವಿಡ್ ಲಾಕ್ಡೌನ್ನಲ್ಲಿ ಪಕ್ಷದ ವತಿಯಿಂದ ಸುಮಾರು 6 ಸಾವಿರಕ್ಕೂ ಹೆಚ್ಚು ಕಿಟ್ಗಳನ್ನು ಬಡವರು, ನಿರ್ಗತಿಕರು, ಕೂಲಿಕಾರ್ಮಿಕರು ಮುಂತಾದವರಿಗೆ ಹಂಚಿದ್ದು ಈ ಬಾರಿ ಎರಡನೆ ಅಲೆಯಲ್ಲೂ ಸುಮಾರು 4ಸಾವಿರಕ್ಕೂ ಹೆಚ್ಚು ದಿನಸಿ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಪಕ್ಷದ ಕಾರ್ಯಕರ್ತರಿರಲಿ, ಸಾಮಾನ್ಯರಿರಲಿ ಸಂಕಷ್ಟ ಬಂದಾಗ ಬೆನ್ನು ತಟ್ಟಿ ಅವರೊಂದಿಗೆ ನಿಲ್ಲುವ ಅವರ ಸ್ವಭಾವವೇ ಪ್ರದೀಪ ಶೆಟ್ಟರ್ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ನೂರಾರು ಅವರ ಅಭಿಮಾನಿಗಳು ಈ ಬಳಗದ ಮೂಲಕ ಅನೇಕ ರಚನಾತ್ಮಕ ಕಾರ್ಯ ಮಾಡುತ್ತಿದ್ದಾರೆ. ಪತ್ನಿ ಸೇಹಾ ಶೆಟ್ಟರ್ ಪತಿಯ ಯಶಸ್ಸಿನ ಹಿಂದಿದ್ದು, ಹಾಗೂ ಇಬ್ಬರು ಪುತ್ರಿಯರು ವಿದೇಶದಲ್ಲಿ ಉನ್ನತಾಭ್ಯಾಸ ಮಾಡುತ್ತಿದ್ದಾರೆ.
ಸುಮಾರು ಮೂರು ದಶಕಗಳ ಕಾಲ ‘ಕಾಯಕಯೋಗಿ’ಯ ಬದುಕನ್ನು ಬಾಳಿದ ಶಿವಪ್ಪ ಶೆಟ್ಟರ್ ಅವರನ್ನು ಹತ್ತಿರದ ಬಂಧುವಾಗಿ ಕಂಡಿದ್ದೇನೆ. ತಂದೆಯ ಹಾದಿಯಲ್ಲೇ ಹಿರಿಯ ಮಗ ಸನ್ಮಾನ್ಯ ಜಗದೀಶ ಶೆಟ್ಟರ್ ಹಾಗೂ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಇಬ್ಬರೂ ನಡೆಯುತ್ತಿದ್ದು ದೀನ ದಲಿತರ, ಬಡಜನತೆಯ ಸೇವೆಯನ್ನು ನಿಸ್ವಾರ್ಥದಿಂದ ಮಾಡುತ್ತಿದ್ದಾರೆ.
ಮಲ್ಲಿಕಾರ್ಜುನ ಸಾವಕಾರ
ಶೆಟ್ಟರ್ ಕುಟುಂಬದ ನಿಕಟವರ್ತಿ ಹಾಗೂ ಕೆಎಸ್ಡಿಎಲ್ ನಿರ್ದೇಶಕರು