ಹುಬ್ಬಳ್ಳಿ : ಚುನಾವಣೆ ಮುಂದಕ್ಕೆ ಹೋಗಲಾರದೆಂಬ ಬರುತ್ತಿದ್ದಂತೆಯೇ ಮೂರನೇ ಬಾರಿಗೆ ಹು.ಧಾ.ಮಹಾನಗರಪಾಲಿಕೆಯಲ್ಲಿ ಕಮಲ ಬಾವುಟ ಹಾರಿಸಲೇಬೇಕೆಂಬ ತೀರ್ಮಾನಕ್ಕೆ ಬಂದಿರುವ ಬಿಜೆಪಿ ಸಹ ಮೂರು ಪಾಲಿಕೆಗೆ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿದೆ.
ಅವಳಿನಗರಕ್ಕೆ ಜವಳಿ ಮತ್ತು ಕೈಗಾರಿಕಾ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಇವರನ್ನು ನೇಮಿಸಿದ್ದು ಸ್ವತಃ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ನಾಳೆ ಸಾಯಂಕಾಲ ಹುಬ್ಬಳ್ಳಿಗೆ ಆಗಮಿಸಲಿದ್ದು ಎರಡು ದಿನ ಟಿಕೆಟ್ ಹಂಚಿಕೆಯ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸಲಿದ್ದಾರೆ.
ಉಸ್ತುವಾರಿ ನಿಯುಕ್ತಿಗೊಂಡರೂ ಅವಳಿನಗರದ ವಿಷಯಕ್ಕೆ ಬಂದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಹಾನಗರ ಅಧ್ಯಕ್ಷ ಅರವಿಂದ ಬೆಲ್ಲದ ಇವರೇ ನಿರ್ಣಾಯಕರಾಗಿದ್ದು ಕೋರ ಕಮೀಟಿಯ ಸಭೆಯಲ್ಲೇ ಟಿಕೆಟ್ ಅಂತಿಮಗೊಳ್ಳಲಿದೆ.
ಅನೇಕ ವಾರ್ಡಗಳಲ್ಲಿ ಬಿಜೆಪಿಯಲ್ಲಿ 8ರಿಂದ 10 ಆಕಾಂಕ್ಷಿಗಳಿದ್ದು ಯಾರಿಗೆ ಮಣೆ ಹಾಕಬೇಕೆಂಬುದೇ ಸಮಸ್ಯೆಯಾಗಿದೆ.ಎಲ್ಲರೂ ಒಬ್ಬೊಬ್ಬ ಮುಖಂಡರ ಹಿಂಬಾಲಕರಾಗಿದ್ದು, ಸ್ಥಳೀಯರಿಂದ, ಸಮಾಜದ ಪ್ರಮುಖರಿಂದ ಅಲ್ಲದೇ ಸಂಘ ಪರಿವಾರದವರಿಂದ ಸಹ ಒತ್ತಡ ಹೇರಿಸುವ ಯತ್ನ ಆರಂಭವಾಗಿದ್ದು ಸಮೀಕ್ಷೆ ಮಾಡಿಸಿ ಅಂತಿಮಗೊಳಿಸಲಾಗುವುದು ಎಂದು ಇದುವರೆಗೆ ಇದ್ದ ಹೇಳಿಕೆಗಳು ಈಗ ಬದಲಾಗುವ ಸಾಧ್ಯತೆಗಳಿದ್ದು ಹೊಸ್ತಿಲಲ್ಲೇ ಚುನಾವಣೆ ಇರುವುದರಿಂದ 21ರೊಳಗೆ ಅಖೈರುಗೊಳಿಸುವ ಯತ್ನ ನಡೆದಿದೆ.
ಚುನಾವಣೆ ಸುಳಿವು ದೊರೆತು ಕಳೆದ ಕೆಲ ದಿನಗಳಿಂದ ಹಗಲು ರಾತ್ರಿಯೆನ್ನದೆ ಬಿಜೆಪಿ ಪದಾಧಿಕಾರಿಗಳು ಬೂತ್ ಮಟ್ಟದ ಸಮಿತಿ ರಚನೆಯಲ್ಲಿ ತೊಡಗಿದ್ದಾರೆ.
ಅವಳಿನಗರ ಬಿಜೆಪಿಯಲ್ಲಿ ಐದಾರು ಬಣಗಳಿರುವುದು ಹೊಸದಲ್ಲ. ಆದರೆ ಈ ಬಾರಿ ಯಡಿಯೂರಪ್ಪ ಸರ್ಕಾರದ ಪತನದ ನಂತರ ಅದು ಮತ್ತಷ್ಟು ಬಿರುಕುಬಿಟ್ಟಿದೆ. ಮೇಲ್ನೋಟಕ್ಕೆ ಒಗ್ಗಟ್ಟು ಕಂಡುಬ0ದರೂ ಅದರ ಪರಿಣಾಮ ಪಾಲಿಕೆ ಚುನಾವಣೆಯಲ್ಲಿ ಸ್ವಲ್ಪ ಮಟ್ಟಿಗೆ ಆಗುವುದು ನಿಶ್ಚಿತ ಎನ್ನಲಾಗುತ್ತಿದೆ.
ಮೂರು ಕ್ಷೇತ್ರಗಳಲ್ಲಿ ಆಯಾ ಶಾಸಕರೇ ಟಿಕೆಟ್ ಹಂಚಿಕೆಯ ಪರಮಾಧಿಕಾರ ಹೊಂದಿದು ಪೂರ್ವದಲ್ಲಿ ಟೆಂಗಿನಕಾಯಿ ಹಿರಿತನದಲ್ಲಿ ಅಂತಿಮಗೊಳ್ಳುವುದು ಬಹುತೇಕ ಖಚಿತವಾಗಿದೆ.
ಪಾಲಿಕೆ ಚುನಾವಣೆಗೆ ಬಿಜೆಪಿ ಸಿದ್ದವಾಗಿದ್ದು ಯಾವುದೇ ಭಿನ್ನಾಭಿಪ್ರಾಯಕ್ಕೆ ಆಸ್ಪದವಿಲ್ಲದಂತೆ ಒಟ್ಟಾಭಿಪ್ರಾಯ ರೂಪಿಸಿ ಸಮರ್ಥ ಅಭ್ಯರ್ಥಿಗಳನ್ನು ಕೋರ್ ಕಮೀಟಿ ಸಭೆಯಲ್ಲಿ ಅಂತಿಮಗೊಳಿಸಲಾಗುವುದು
ಮಹೇಶ ಟೆಂಗಿನಕಾಯಿ
ಚುನಾವಣಾ ಉಸ್ತುವಾರಿ