ಹುಬ್ಬಳ್ಳಿ-ಧಾರವಾಡ ಸುದ್ದಿ
ಕಾಂಗ್ರೆಸ್‌ನ ಹಿರಿಯ ಮುಖಂಡ ಮೋರೆ ಇನ್ನು ನೆನಪು ಮಾತ್ರ

ಕಾಂಗ್ರೆಸ್‌ನ ಹಿರಿಯ ಮುಖಂಡ ಮೋರೆ ಇನ್ನು ನೆನಪು ಮಾತ್ರ

ಧಾರವಾಡ: ಧಾರವಾಡ ಜಿಲ್ಲಾ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವರಾದ ಎಸ್.ಆರ್.ಮೋರೆ (82) ಇಂದು ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ನಿನ್ನೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಗಿನ ಜಾವ
ಕೊನೆಯುಸಿರೆಳೆದರು.


ಮರಾಠಾ ಸಮಾಜದ ಮೇರು ನಾಯಕರಾಗಿದ್ದ ಮೋರೆ ಅವರು ಮೂವರು ಪುತ್ರಿಯರು, ಮೂವರು ಸಹೋದರರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಸತತ ನಾಲ್ಕು ಬಾರಿ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದ ಮೋರೆ ಅವರು ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪ ಹಾಗೂ ಧರ್ಮಸಿಂಗ್ ಅವರು ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದರು. ವಿಪರ್ಯಾಸವೆಂದರೆ ಇಂದು ಅವರ ಜನ್ಮದಿನ ವಾಗಿದ್ದು ಇದೇ ದಿನದಂದೇ ಮೋರೆ ಅವರು ಕೊನೆಯುಸಿರೆಳೆದಿದ್ದಾರೆ.
ಬಂಗಾರಪ್ಪ ಸರ್ಕಾರದಲ್ಲಿ ಸಹಕಾರ ಸಚಿವರಾಗಿ ಹಾಗೂ ಧರ್ಮಸಿಂಗ್ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿ ಮೋರೆ ಕಾರ್ಯ ನಿರ್ವಹಿಸಿದ್ದರು. ಮರಾಠಾ ಸಮಾಜದ ಮುಖಂಡರಾಗಿದ್ದ ಮೋರೆ, ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ನಾಯಕರೆಂದು ಗುರುತಿಸಿಕೊಂಡಿದ್ದರು.


ಬಡವರ ಬಂಧು ಎಂದೇ ಖ್ಯಾತರಾಗಿದ್ದ ಮೋರೆ ಅವರು ಅಶ್ರಯ ಮನೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ನಿರ್ಮಾಣ ಮಾಡಿ ವಿತರಿಸಿದ ಕೀರ್ತಿ ಅವರದು, ಈ ಹಿಂದೆ ಅವಳಿ ನಗರದ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯ ತಲೆದೊರಿದಾಗ ಮಲಪ್ರಭಾ ನದಿ ಜೋಡನೆಯ ಎರಡೇ ಹಂತಕ್ಕೆ ಸರ್ಕಾರದಿಂದ ವಿಶೇಷ ಅನುದಾನ ತೆಗೆದುಕೊಂಡು ಬಂದು ಏಳು ದಿನಕ್ಕೆ ಸರಬರಾಜು ಆಗುತ್ತದ್ದ ನೀರಿನ ವ್ಯವಸ್ಥೆಯನ್ನು ಸುಧಾರಿಸಿ ಕೇವಲ ಮೂರು ದಿನಕ್ಕೆ ಕುಡಿಯುವ ನೀರು ಪೂರೈಕೆ ಆಗುವಂತೆ ಮಾಡಿದ್ದರು. ಇದರೊಂದಿಗೆ ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದವರು.

ರಾಜಕೀಯ ಜೀವನ: ಎಸ್.ಆರ್.ಮೋರೆಯವರು 1967 ರಿಂದ ಸಮಾಜ ಸೇವೆಯ ಮುಖಾಂತರ ರಾಜಕೀಯಕ್ಕೆ ಸಹಕಾರ ಕ್ಷೇತ್ರದಿಂದ ಪಾದಾರ್ಪಣೆ ಮಾಡಿದರು.ಧಾರವಾಡ 1972 ರಲ್ಲಿ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಸದಸ್ಯರಾಗಿ ಆಯ್ಕೆಯಾಗಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ನಿರ್ವಹಣೆ ಮಾಡಿದ್ದರು. 1983 ರಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆ. 1989ರಲ್ಲಿ ಶಾಸಕರಾಗಿ ಮರು ಆಯ್ಕೆಗೊಂಡು ಎಸ್ . ಬಂಗಾರಪ್ಪರವರ ಸಂಪುಟದಲ್ಲಿ ಸಹಕಾರ ಸಚಿವರಾಗಿ ಕಾರ್ಯ ನಿರ್ವಹಣೆ, ಮತ್ತೆ 2004ರಲ್ಲಿ ೩ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 2005ರಲ್ಲಿ ನಗರಾಡಳಿತ, ನಗರ ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮದ ಸಚಿವರಾಗಿ ಕಾರ್ಯ ನಿರ್ವಹಿಸಿದರು.
ಇಂತಹ ಅಪ್ರತಿಮ ಸರಳ ವ್ಯಕ್ತಿತ್ವದ ರಾಜಕಾರಣಿಯನ್ನು ಕಳೆದುಕೊಂಡ ಸಾಂಸ್ಕೃತಿಕ ನಗರ ಧಾರವಾಡ ಬಡವಾದಂತಾಗಿದೆ ನಾಡಿನ ಅನೇಕರು ಕಂಬನಿ ಮಿಡಿದಿದ್ದಾರೆ.


ಅಬ್ಬಯ್ಯ ಕಂಬನಿ: ಹಿರಿಯ ಮುತ್ಸದ್ದಿ ಎಸ್.ಆರ್. ಮೋರೆ ಅವರ ನಿಧನಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ತೀವ್ರ ಸಂತಾಪ ಸೂಚಿಸಿದ್ದಾರೆ.ಜಿಲ್ಲಾ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಮೋರೆ ಅವರು ತಮ್ಮ ಜನ್ಮದಿನದಂದೇ ಇಹಲೋಕ ತ್ಯಜಿಸಿರುವುದು ಅತ್ಯಂತ ನೋವು-ಆಘಾತ ತಂದಿದೆ ಎಂದಿದ್ದಾರೆ.

ಸಲೀಂ ಅಹ್ಮದ್ ಸಂತಾಪ: ಮಾಜಿ ಸಚಿವರು ಹಾಗೂ ಹುಬ್ಬಳ್ಳಿ-ಧಾರವಾಡ ಭಾಗದ ಪ್ರಭಾವಿ ರಾಜಕಾರಣಿ ಎಸ್.ಆರ್.ಮೋರೆಯವರ ನಿಧನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಲೀಂ ಅಹ್ಮದ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೋರೆಯವರ ನಿಧನರಾದ ಸುದ್ದಿ ಕೇಳಿ ನೋವಾಯಿತು. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಹಾಗೂ ಅವರ ಕುಟುಂಬದವರಿಗೆ ಅಭಿಮಾನಿ ಗಳಿಗೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಗೌರಿ ಸಂತಾಪ: ಜಿಲ್ಲೆಯ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಅಲ್ಲದೇ ಎರಡು ಸಲ ಸಚಿವರಾಗಿ ಬಡವರ ಆಶ್ರಯದಾತ ಎಂದೇ ಕರೆಸಿಕೊಳ್ಳುತ್ತಿದ್ದ ಎಸ್.ಆರ್.ಮೋರೆಯವರ ನಿಧನದಿಂದ ಮುತ್ಸದ್ಧಿಯೊಬ್ಬ ರನ್ನು ಕಳೆದುಕೊಂಡು ಪಕ್ಷ ಬಡವಾಗಿದೆ.ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲಿ ಎಂದು ರಾಣಿ ಚೆನ್ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ ಗೌರಿ, ಮಹಾನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ನಾಗರಾಜ ಗೌರಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕರು, ಮರಾಠಾ ಸಮಾಜದ ಮುಖಂಡರು, ಸರಳ ಸಜ್ಜನ ರಾಜಕಾರಣಿ, ಮಾಜಿ ಸಚಿವ ಎಸ್.ಆರ್.ಮೋರೆ ನಿಧನಕ್ಕೆ ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಮಾಜಿ ಶಾಸಕರಾದ ಎ.ಬಿ.ದೇಸಾಯಿ, ಚಂದ್ರಕಾಂತ ಬೆಲ್ಲದ, ಸೀಮಾ ಮಸೂತಿ, ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫಹುಸೇನ್ ಹಳ್ಳೂರ, ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ್ ಪಾಟೀಲ, ವಾಯುವ್ಯ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಮಾಜಿ ಪಾಲಿಕೆ ಸದಸ್ಯ ಚಂದ್ರಶೇಖರ ಅಳಗುಂಡಗಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನವೀದ್ ಮುಲ್ಲಾ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಬೆಂಗಳೂರು ರಾಜ್ಯ ಸಲಹೆಗಾರರು ಸಂಭಾಜಿ ಸ.ಗೋಡಸೆ, ಕೆಪಿಸಿಸಿ ಹಿಂದುಳಿದ ವರ್ಗದ ಮಾಜಿ ಕಾರ್ಯದರ್ಶಿ ರಾಜು ಢವಳೆ, ಮುಖಂಡ ರಾದ ತವನಪ್ಪ ಅಷ್ಟಗಿ, ದೀಪಕ ಚಿಂಚೋರೆ, ಪಿ.ಎಚ್.ನೀರಲಕೇರಿ, ಮಹೇಶ ಶೆಟ್ಟಿ, ಆನಂದ ಸಿಂಗನಾಥ, ಯಾಸೀನ ಹಾವೇರಿಪೇಟ, ಸುಭಾಸ ಶಿಂಧೆ, ಪ್ರಕಾಶ ಘಾಟಗೆ, ವಸಂತ ಅರ್ಕಾಚಾರ, ಎ.ಎಂ.ಖಾದ್ರಿ, ತಾನಾಜಿ ಪುಂಡೆ, ನಿಜಾಮ ರಾಹಿ, ಸಮೀರ ರಾಹಿ, ರಜಿಯಾಬೆಗಂ ಸಂಗೊಳ್ಳಿ, ಗೌರ್‍ನನೆಂಟ್ ಎಂಪ್ಲಾಯೀಜ್ ಬ್ಯಾಂಕ್ ಮಾಜಿ ಚೇರಮನ್ ಬಸವರಾಜ ಕಟಗಿ ಮತ್ತಿತ ರರು ಸಂತಾಪ ಸೂಚಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *